Wednesday, 14 November 2012

ಒಂದು ದಿವಸದ ಪ್ರವಾಸ 12-11-2012 ಜಪದ ಕಟ್ಟೆ ಮತ್ತು ಕಾವೇರಿ ಹಿನ್ನೀರು

ದಿನಾಂಕ 12-11-2012 ರ ಸೋಮವಾರ ನರಕ ಚತುರ್ದಶಿಯಂದು ಮೈಸೂರಿನ ಆತ್ಮೀಯ ಕುಟುಂಬಮಿತ್ರರಾದ ಶ್ರೀ ನರಸಿಂಹನ್ ಮತ್ತು ಉಷಾ ನರಸಿಂಹನ್ ಅವರೂ ಉಷಾ ಮೇಡಂ ಅವರ ಅಕ್ಕನವರಾದ ಶ್ರೀಮತಿ ಬಾಲಮಣಿ (ಸಂಧ್ಯಾ) ಅವರೂ ಬೆಂಗಳೂರಿನ ಹಿತೈಷೀ ಹಿರಿಯ ಸ್ನೇಹಿತ-ಗಾಯಕರಾದ ಶ್ರೀ ಎಸ್ ಮೋಹನ್ ಅವರೂಕೆ ಆರ್ ನಗರದ ಎಚ್ ಎನ್ ಮಂಜುರಾಜ್, ಎಚ್ ಆರ್ ಕೋಮಲ ಮತ್ತು ಎಂ ಕೆ ಚಾರು- ಈ ಮೂವರನ್ನೂ ಕರೆದುಕೊಂಡು ಅತ್ಯಂತ ಅರ್ಥಪೂರ್ಣ ಮತ್ತು ಅವಿಸ್ಮರಣೀಯ ಪ್ರವಾಸವನ್ನು ಕೈಗೊಂಡರು.


ಕೆ ಆರ್ ನಗರದಿಂದ ಪ್ರವಾಸ ಹೊರಟು ಮೊದಲಿಗೆ ಜಪದ ಕಟ್ಟೆಗೆ ಅಲ್ಲಿಂದ ರುದ್ರಪಟ್ಟಣದ ಸಪ್ತಸ್ವರ ನಾದದೇಗುಲಕ್ಕೆ ಅಲ್ಲಿಂದ ಮರಳಿ, ಚಂದಗಾಲು ಮೂಲಕ ಮತ್ತೆ ಹೊಸ ಅಗ್ರಹಾರದ ಮೂಲಕ ಐಪನಹಳ್ಳಿ, ಸೋಮನಹಳ್ಳಿ, ಸಂಗಾಪುರ ಮಾರ್ಗ ಕಾವೇರಿ ಸಂಗಮಬಿಂದುವಿಗೆ ಅಂದರೆ ಕಾವೇರಿ ಹಿನ್ನೀರಿನ ತಾಣಕ್ಕೆ ಭೇಟಿ ಕೊಟ್ಟೆವು.


ಒಂದು ದಿವಸ ಹೇಗೆ ಕಳೆಯಿತೋ! ಮಧುರ ನೆನಪಾಗಿ ಮೃದು ಮಂದಹಾಸವಾಗಿ ಕೊನೆವರೆಗೂ ನೆನಪು ನಂದದ ದೀಪವಾಗಿ ನಮ್ಮೆಲ್ಲರ ಸ್ಮೃತಿಪಟಲದಲ್ಲಿ ಸ್ಥಾಯಿಯಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. 


ಶ್ರೀ ನರಸಿಂಹನ್ ಕುಟುಂಬಕ್ಕೆ ಮತ್ತು ಎಸ್ ಮೋಹನ್ ಅವರಿಗೆ ಮಂಜುರಾಜ್ ಕುಟುಂಬ  ಚಿರಋಣಿ.


ಪರಿಮಳದ ಪಯಣ

-1-

ಬಂಧಗಳ ಬಂಧುರವ


ಬಂಧನವಾಗಿಸದೆ  ನಂದನವಾಗಿಸುವ


ಪರಿಮಳದ ಪಯಣವ, ಅಪೂರ್ವ ಪೂರ್ವೋತ್ತರವ


ಬರೆವವರ


ಬಗೆಗೆ ಏನ ಬರೆಯಲಿ?


ನದಿ-ನದದಿಂ ಹೊರಟ ಕಾಲು-ವೆ


ಮತ್ತದೇ ಹೊಳೆಹೊಳೆವ ರವಿಕಿರಣಕಾವಿಯಾಗಿ ಹೊಳೆಗೇ ಸೇರಿದೆ


ಮಳೆಯಾಗಿ, ಇಳೆಯ ಮಂಜುಹನಿಯಾಗಿ!


                                   -2-


ಜೀವಬಂಡಿಯನೇರಿ ಎಲ್ಲೂ ಹೋಗಲಿಲ್ಲ


ಹೋಗಿ ಬಂದದ್ದು ಎರಡೇ ಕಡೆ


ಒಂದು ಬಂಗಾರ ಮತ್ತೊಂದು ಸಿಂಗಾರ


ಎರಡರ ಚಿತ್ತಾರತೇರನೆಳೆದೆವು ನಾವು ಎಲ್ಲ ಒಂದೆಡೆ ಸೇರಿ


ಅದುವೇ ಕಾವೇರಿ


ಯ ಸನ್ನಿಧಿಯಲಿ, ರಂಗವಲ್ಲಿ ಬಿಡಿಸಿದ ಹಾದಿಗುಂಟ ಸಾಗಿ,


ಮನದ ಬನದ ಕೋಕಿಲ ಕೂಗಿ.


                           -3-


ನೂರು ಗಂಟಿನೊಳಗೊಂದು ನಂಟು


ಅಂಟಿನುಂಡೆಗೆ ಹದವಾದ ಸಕ್ಕರೆಪಾಕ ಸವರಿದವರು ಯಾರೋ?


ಶ್ವಾಸದ ತುಂಬೆಲ್ಲ ಹರಿದ ವಿಶ್ವಾಸದ ಬಂಧ ಅನಾಯಾಸ, ಸುರಳೀತ ಪ್ರಾಸ
ಮೋಹನಮುರಲಿಯ ಗಾನದಿಂಪಿಗೆ ಕಿವಿಯಾಗಿ, ಕವಿಯಾಗಿ

ದಾರಿ ಸಾಗಿದೆಡೆಯಲ್ಲೆಲ್ಲ ಅದದೇ ನವಿರು, ಮೈಮನ ಪನ್-ನೀರು.


ಒಂದು ದಿನ! ಒಂದೇ ದಿನ ಅಲ್ಲವದು


ನೆನಪಾದಾಗೆಲ್ಲ ಅದದೇ ದಿನಮಾನ, ತುಂಬು ಅಭಿಮಾನ ಪರಸ್ಪರ


ನುಡಿಯೆಲ್ಲ ಬೆಡಗಿನ ಸಪ್ತಸ್ವರ                           -4-

ನೆಲ-ನೀರು-ದಿಗಂತ-ಅನಂತ


ನಕ್ಕ ನಗು ಪ್ರತಿಫಲಿಸಿ ಆಯ್ತು ದಾರಿದೀಪ


ಬಾಂಧವ್ಯದ ಬೆಳಕಿಗೆ ಒಬ್ಬರು ತೈಲ, ಮತ್ತೊಬ್ಬರು ಬತ್ತಿ, ಮಗದೊಬ್ಬರು ಪ್ರಣತಿ


ಶುಚಿಯ ಅಭಿರುಚಿಗೆ ನುಡಿಬಿನ್ನಣ, ಎಷ್ಟು ನುಡಿದರೂ ನಡೆದರೂ ಇಲ್ಲ ಆಯಾಸ


ತರಲಿಲ್ಲ ಪ್ರಯಾಸ


ಕಣ್ಣರೆಪ್ಪೆ ಮುಚ್ಚುವಂತಾಗುತಿದ್ದರೂ ಮೊಗದಲ್ಲಿ ಮಾತ್ರ ತುಂಬು ಮಂದಹಾಸ
ಅಮೃತದ ನೆನಪು, ಏಳುಬಣ್ಣದ ಒನಪು


ಈ ದಿವ, ಆ ದೈವ, ಮಮತೆಯ ಜೀವಭಾವ ಹೀಗೆಯೇ ಇರಲಿ, ನಗುನಗುತಿರಲಿ.


-ಎಚ್ ಎನ್ ಮಂಜುರಾಜ್,  ಕೆ ಆರ್ ನಗರ(ದಿನಾಂಕ 12-11-2012 ರಂದು ಮಾನ್ಯಶ್ರೀ ನರಸಿಂಹನ್ ಕುಟುಂಬವರ್ಗ, ಶ್ರೀ ಎಸ್ ಮೋಹನ್ ಅವರ ಸ್ನೇಹದ ಸಾಥ್‍ನೊಂದಿಗೆ ಒಂದು ದಿವಸದ ಪ್ರವಾಸ ಹೋಗಿ ಬಂದ ನೆನಪಿಗೆ ಈ ಶಬ್ದಾಲಂಕಾರ ಅರ್ಪಿತ. )