Saturday, 1 May 2021

ಮಹಾನ್‌ ಧರ್ಮವೀರರ ನೆನೆಯುತಾ .......

 

ಮಹಾನ್ ಧರ್ಮವೀರರ ನೆನೆಯುತಾ........ 

          ನಮ್ಮ ಭರತಖಂಡವು ಪುಣ್ಯಭೂಮಿ; ಭಾರತೀಯರಾದ ನಾವು ಅದೃಷ್ಟವಂತರು. ಕಾರಣ, ಈ ನೆಲವು ಅಸಂಖ್ಯಾತ ಸಂತರು, ಅವಧೂತರು ಮತ್ತು ಋಷಿಸದೃಶ ಗುರು ಪರಂಪರೆಯ ತವರು. ಇಂಥ ಮಹಾಮಹಿಮರಲ್ಲಿ ಭಗವಾನ್ ವರ್ಧಮಾನ ಮಹಾವೀರರೂ ಒಬ್ಬರು. ಇವರ ಕಾಲಾವಧಿ: ಕ್ರಿ ಪೂ 599 ರಿಂದ 527. ಬಿಹಾರದ ವೈಶಾಲಿ ನಗರದಲ್ಲಿ ಜನನ, ಅಲ್ಲಿನ ನಳಂದದಲ್ಲಿ ನಿರ್ವಾಣ. ಜೈನಧರ್ಮದ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ ಇವರು ನೀಡಿದ ಧರ್ಮ ಸಂದೇಶ ಅಮೂಲ್ಯವಾದುದಾಗಿದೆ. ಗೌತಮ ಬುದ್ಧರ ಸಮಕಾಲೀನರಾದ ಇವರು ಭಗವಾನ್ ಬುದ್ಧರನ್ನು ಒಮ್ಮೆ ಭೇಟಿಯಾಗಿದ್ದರೆಂದು ಐತಿಹ್ಯ ಹೇಳುತ್ತದೆ.

          ಮಹಾರಾಜರಾಗಿ ಸಿಂಹಾಸನದಲ್ಲಿ ಕುಳಿತು ಆಮೋದ ಪ್ರಮೋದಗಳಿಂದಾವೃತ ಭೋಗದಲ್ಲಿ ತೊಡಗಬೇಕಾಗಿದ್ದ ಮಹಾವೀರರು ಅವನ್ನೆಲ್ಲ ಯಃಕಶ್ಚಿತ್ ಎಂದು ಪರಿಗಣಿಸಿ, ಸರ್ವಸ್ವವನ್ನೂ ತೊರೆದು ತಪಸ್ಸಿಗೆ ಹೊರಟರು. ಹನ್ನೆರಡು ವರುಷಗಳ ಸುದೀರ್ಘ ತಪಶ್ಚರ್ಯೆಯ ತರುವಾಯ ಜ್ಞಾನೋದಯಗೊಂಡರು. ತಮ್ಮ ಜೀವಿತದ ಕೊನೆಯ ಮೂವತ್ತು ವರುಷಗಳ ಅವಧಿಯಲ್ಲಿ ಧರ್ಮಪ್ರಸಾರ ಹಾಗೂ ಸತ್ಸಂಗ ಬೋಧನೆಯಲ್ಲಿ ಮಗ್ನರಾದ ಈ ಮಹಾನ್ ವೀರರು ತಮ್ಮ ಎಪ್ಪತ್ತೆರಡನೆಯ ವಯೋಮಾನದಲ್ಲಿ ಶರೀರ ತ್ಯಾಗ ಮಾಡಿದರು.

          ಕೇವಲ ಧರ್ಮವನ್ನು ಅನುಸರಿಸಿದರೆ ಸಾಲದು; ಧಾರ್ಮಿಕನಾಗಿ ಜ್ಞಾನಮಾರ್ಗದಲ್ಲಿ ತೊಡಗಿ, ಸತ್ಯ ಮತ್ತು ಅಹಿಂಸೆಗಳಿಂದ ಬದುಕಬೇಕು. ಏಕೆಂದರೆ ಧರ್ಮವೆಂಬುದು ವಸ್ತುವೂ ಅಲ್ಲ; ಚರ್ಮವೂ ಅಲ್ಲ; ಅದು ನಮ್ಮೊಳಗಿನ ಉಸಿರು, ಜೀವಾತ್ಮದ ಹೆಸರು ಎಂದವರೀತ. ಸತ್ಯವೆಂದೂ ಭಿಕ್ಷೆಯಾಗಿ ದೊರಕದು; ಇನ್ನೊಬ್ಬರಿಂದ ಎರವಲು ಪಡೆಯಲಾಗದು, ಅದಕಾಗಿ ಆಕ್ರಮಣ ಮಾಡಬೇಕು; ಕ್ಷತ್ರಿಯನಾಗಬೇಕು ಎಂದರು! ಹಾಗೆಂದರೆ ಸತ್ಯಕಾಗಿ ಹೋರಾಡಬೇಕು; ಕಾದು ಶತ್ರುಗಳನು ಜಯಿಸಬೇಕು ಎಂಬ ಶಬ್ದಾರ್ಥವಲ್ಲ!! ನಮ್ಮೊಳಗೇ ಅವಿರತ ಅವಿತು ನಮ್ಮನು ದಾರಿ ತಪ್ಪಿಸುತಿರುವ ಇನ್ನೋರ್ವ ಇರುತ್ತಾನಲ್ಲ, ಅವನೊಂದಿಗೆ ಅಂದರೆ ನಮ್ಮ ಆಂತರ್ಯದೊಂದಿಗೇ ಸಂಘರ್ಷಕಿಳಿಯಬೇಕು, ಸತತ ಆತ್ಮಾವಲೋಕನದಿಂದ ನನ್ನೊಳಗನ್ನು ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರ್ಥ. ಇದನ್ನು ನಾನು ಒಂದು ಯುದ್ಧ; ತನ್ನ ವಿರುದ್ಧಎಂದು ಬಣ್ಣಿಸಲು ಇಚ್ಛಿಸುವೆ.

          ತನ್ನ ತಾನರಿದೊಡೆ ನುಡಿಯೆಲ್ಲ ತತ್ತ್ವ ನೋಡಾಎಂದು ಅಲ್ಲಮಪ್ರಭುಗಳು ಹೇಳಿದ್ದು ಇಲ್ಲಿ ನೆನಪಾಗುತ್ತದೆ. ಪ್ರತಿಯೊಂದಕ್ಕೂ ನಾವು ನಮ್ಮಾಚೆಗಿರುವ ಜಗತ್ತನ್ನು ಮತ್ತು ಜನರನ್ನು ದೂರುತ್ತೇವೆ; ನಾವು ಸತ್ಯಸಂಧರು ಮತ್ತು ಒಳ್ಳೆಯವರು ಎಂದು ಘೋಷಿಸಿಕೊಳ್ಳುತ್ತೇವೆ. ನಾನೆಂಬುದು ನೀನೇ ಎಂಬುದನ್ನು ಮರೆಯುತ್ತೇವೆ. ಈ ಜಗತ್ತಿನ ಎಲ್ಲ ಒಳಿತಿಗೆ ನಾನು ಹೇಗೆ ಕಾರಣನೋ ಹಾಗೆಯೇ ಇದರ ಎಲ್ಲ ಕೆಡುಕಿಗೂ ನಾನೂ ಹೊಣೆ ಎಂಬುದೇ ಈ ಜ್ಞಾನೋದಯದ ಸಾರ. ಇಂದಿನ ದಿನಮಾನಗಳಲ್ಲಂತೂ ಮಾಧ್ಯಮಗಳಲ್ಲಿ ಸದಾ ಇನ್ನೊಂದನ್ನು ದೂರುತ್ತಾ, ಇನ್ನೊಬ್ಬರನ್ನು ಹೊಣೆ ಮಾಡುತ್ತಾ ಮಾತಾಡುತ್ತಿರುತ್ತೇವೆ. ಮನೆಯ ಮುಂಭಾಗದಲ್ಲೊಂದು ಗಿಡ ನೆಟ್ಟು ಭೂಮಿಯ ತಾಪಮಾನದ ಏರಿಕೆಯನ್ನಿಳಿಸಲು ಕಿಂಚಿತ್ ಕೈ ಜೋಡಿಸಿದ್ದು ಎಷ್ಟು ಸತ್ಯವೋ ಅಷ್ಟೇ ನಿಜ: ಈ ಹಿಂದೆ ಆಗಿ ಹೋದ ಚೆರ್ನೊಬಿಲ್, ಭೂಪಾಲ್ ಅನಿಲ ದುರಂತಗಳಿಗೂ ನಾನೇ ಜವಾಬ್ದಾರಿ ಎಂಬುದು!

          ಹೀಗೆ ಹೇಳಿದರೆ ನಮಗೆ ತಬ್ಬಿಬ್ಬಾಗಬಹುದು: ಎಂದೋ ಯಾರೋ ಮಾಡಿದ ಅನಾಹುತಕ್ಕೆ ನಾವು ಹೇಗೆ ಕಾರಣ? ಎಂದು. ಇಲ್ಲೇ ನಾವು ಎಡವಿ ಮುಗ್ಗರಿಸುವುದು. ನಾನು ಎಂದರೆ ಮನುಕುಲ ಎಂದರ್ಥ. ಏಕೆಂದರೆ ಈ ಅಖಂಡ ವಿಶ್ವದಲ್ಲಿ ನಾನು ಎಂಬುದು ಇಲ್ಲ! ಇರುವುದು ಎಲ್ಲವನ್ನೂ ಮಾಯಾಜಾಲದಲ್ಲಿ ಬೆಸೆದ ಪರಸ್ಪರ ಸಂಬಂಧ ಮತ್ತು ಸಂಪರ್ಕ ಇರುವ ತಂತು ಮಾತ್ರ!! ಒಬ್ಬರ ದುಷ್ಟತನವನ್ನು ನಾವು ಇಷ್ಟಪಡದಿದ್ದರೆ ಅದು ನಮ್ಮ ಸ್ವಭಾವದ ಒಂದು ಭಾಗವೇ ಎಂಬುದನ್ನು ಮರೆತರೆ ಪೂರ್ಣಜ್ಞಾನ ನಮಗಿನ್ನೂ ಲಭಿಸಿಲ್ಲ ಎಂದೇ ಅರ್ಥ. ವೃತ್ತದಾಚೆಗೆ ನಿಂತು ಬೆರಳು ಮಾಡುವುದು ಸುಲಭ; ನಾನು ಎಂಬುದು ವಿಶ್ವವೃತ್ತದೊಳಗಿನ ಬಿಂದು ಎಂಬುದು ನಿಜವಾದ ಧಾರ್ಮಿಕತೆ. ಧರ್ಮ ಎಂದರೆ ಧರಿಸಿರುವುದು ಎಂದರ್ಥ. ಇಂಥ ಲೋಕ ವಿವೇಕವನ್ನು ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಅಹಂ ನಿರಸನಗೊಂಡ ಖಾಲಿತನವನ್ನರಿತು ವಿನಯದಿಂದ ಜೀವಿಸಿದರೆ ಅದೇ ಧಾರ್ಮಿಕತೆ. ಈ ಸತ್ಯವನ್ನೇ ಮಹಾವೀರರು ತಮ್ಮ ಶಿಷ್ಯರಿಗೆ ಅರ್ಧಮಾಗಧೀ (ಪ್ರಾಕೃತ) ಭಾಷೆಯಲ್ಲಿ ಉಪದೇಶಿಸಿದರು.

          ಯಾರು ಅಹಂಕಾರವನ್ನು ತೊರೆಯುವರೋ ಅವರು ತನ್ನನ್ನೇತೊರೆಯುವರು ಎಂದರು ಮಹಾವೀರರು. ಹೀಗೆ ತನ್ನನ್ನು ತೊರೆಯಲು ಅಹಿಂಸಕನಾಗಬೇಕು. ದುಃಖದ ಮೂಲವನ್ನು ಹುಡುಕಿ, ಚೇತನವು ಶರೀರದಿಂದ ಮುಕ್ತವಾಗಬೇಕು. ಮಹಾವೀರರು ನೀಡಿದ ಧರ್ಮದ ಮೂಲ ಶಿಕ್ಷಣವೇ ವ್ಯಕ್ತಿಗೆ ತಾನು ಶರೀರವಲ್ಲ ಎಂಬ ಅರಿವನ್ನು ಮೂಡಿಸುವುದು. ವಸ್ತು ಮತ್ತು ವ್ಯಕ್ತಿಗಳಿಗೆ ಅಂಟಿಕೊಂಡರೆ ಅದೇ ಪರಿಗ್ರಹ; ಅಂಟಿಕೊಳ್ಳದಿದ್ದರೆ ಅದೇ ಅಪರಿಗ್ರಹ. ಹೀಗೆ ಈ ಮಹಾನ್ ವೀರ ಅರ್ಥಾತ್ ಧರ್ಮವೀರ ಸತ್ಯ, ಅಹಿಂಸೆ, ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳೆಂಬ ಪಂಚಶೀಲತತ್ತ್ವವನ್ನು ಬೋಧಿಸಿ, ಜೈನಧರ್ಮದ ಪುನರುಜ್ಜೀವನಕ್ಕೆ ಶ್ರಮಿಸಿ, ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು. ಆ ಮೂಲಕ ಇಡೀ ಜಗತ್ತಿಗೆ ಹಿಂಸೆ ಕೂಡದು; ಅದು ಅನಿವಾರ್ಯವಲ್ಲಎಂದು ಸಾರಿದರು. ಮನಸ್ಸಿನಲ್ಲಿ ಮೂಡುವ ಸಂಕಲ್ಪ ಹಿಂಸೆಯೂ ಪಾಪವೇ ಎಂದವರೀತ. ಆದರೆ ನಾವೇನು ಮಾಡುತ್ತಿದ್ದೇವೆ? ಹಣ, ಅಧಿಕಾರ ಮತ್ತು ಭೋಗಜೀವನಕ್ಕಾಗಿ ಯುದ್ಧಗಳನ್ನು ನಡೆಸಿ, ಲಕ್ಷಾಂತರ ಜನಸಾಮಾನ್ಯರ ಪ್ರಾಣ ತೆಗೆದು ಆ ಹೆಣದ ರಾಶಿಯ ಮೇಲೆ ಲೋಲುಪದರಮನೆ ನಿರ್ಮಿಸಿ ಗೆದ್ದೆವೆಂದು ಭ್ರಮಿಸಿ ಬೂಟಾಟಿಕೆ ಮೆರೆಯುತ್ತೇವೆ.

          "ಒಂದು ಧರ್ಮದ ಸತ್ಯವು ಇನ್ನೊಂದು ಧರ್ಮದಲ್ಲಿದೆ" ಎಂಬ ಮಾತನ್ನು ಅರಿಯದೇ, ಜೀವಮಾನ ಪೂರ್ತ ಮತಧರ್ಮಗಳ ಮೇಲಾಟ-ಕೀಳಾಟಗಳಲಿ ಬಿದ್ದೆದ್ದು ರೋಷ ದ್ವೇಷಗಳಲ್ಲಿ ಈಜಾಡುತ್ತಾ ನೂರಾರು ದಾರಿಗಳಿವೆ ಬೆಳಕಿನರಮನೆಗೆ ಎಂಬುದನ್ನು ಮರೆಯುತ್ತಾ, ಹಿಂಸಾನಂದಿಗಳಾಗುತ್ತೇವೆ. ದೀಪದ ಬುಡವೇ ಕತ್ತಲು ಎಂಬಂತೆ, ಎಷ್ಟು ಮಹಾಪುರುಷರು ಬಂದು ಏನೇ ಉಪದೇಶ ನೀಡಿದರೂ ನಾವು ಮಾತ್ರ ಶತಶತಮಾನಗಳಿಂದಲೂ ಹೀಗೆಯೇ ನರಕಾಸುರ ಚಕ್ರವರ್ತಿಗಳಾಗಿದ್ದೇವಲ್ಲವೆ? ಇದೇ ಆತ್ಮಾವಲೋಕನ; ಇದಕ್ಕೆ ನಾನು ಕಾರಣ ಅಲ್ಲವೇ ಅಲ್ಲ ಎಂದುಕೊಳ್ಳುವುದು ಮೂರ್ಖತನ ಜೊತೆಗೆ ಬಂಡತನ.

 

                                 ******************