Wednesday 22 June 2011

ಕಾಲೇಜು ಸಂಚಿಕೆಯನ್ನು ಕುರಿತು


ಕಾಲೇಜು ಸಂಚಿಕೆಗಳ ಪ್ರಸ್ತುತತೆ ಮತ್ತು ವಿಸ್ತೃತತೆ

(ಚಿಂತನೀಯ ಪ್ರಬಂಧ)

ಪದವಿ ಕಾಲೇಜುಗಳು ಎಲ್ಲ ಶಿಕ್ಷಣ ಸಂಸ್ಥೆಗಳಂತೆಯೇ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಂಚಿಕೆಯೊಂದನ್ನು ಹೊರ ತರುವುದು ಪದ್ಧತಿ. ವಿದ್ಯಾರ್ಥಿಗಳು ತರಗತಿಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲೇ ಪ್ರತಿ ಸಂಚಿಕೆಗೆ ತಗಲುವ ಮೊತ್ತವನ್ನು ಸಂಸ್ಥೆಗೆ ಪಾವತಿಸಿರುತ್ತಾರೆ. ಅಲ್ಲದೇ ಈ ಪುಸ್ತಕ ಸಂಚಿಕೆಯು ಬೇರೆ ಬೇರೆ ಕಾರಣಗಳಿಗಾಗಿ ತನ್ನದೇ ಮಹತ್ವವನ್ನೂ ಹೊಂದಿದೆ. ಇದೀಗ ಪದವಿ ಕಾಲೇಜುಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿವರ್ತನೆಗಳ ಹಿನ್ನೆಲೆಯಲ್ಲಿ ಅದರಲ್ಲೂ ಐಕ್ಯುಎಸಿಯ ಕಾರಣವಾಗಿ ಇದಕ್ಕೆ ಹೆಚ್ಚಿನ ಪ್ರಸ್ತುತತೆ ಪ್ರಾಪ್ತವಾಗಿದೆ.



ಶೈಕ್ಷಣಿಕ ವರ್ಷದ ಎಲ್ಲ ಆಗುಹೋಗುಗಳು ವರದಿಯ ರೂಪದಲ್ಲಿದ್ದರೆ ಕಲಿಕಾರ್ಥಿಗಳ ಸೃಷ್ಟಿಶೀಲ ಬರೆವಣಿಗೆ ಪ್ರತಿಭೆಯು ಲೇಖನ-ಕವನ-ವಿಚಾರ-ವಿಮರ್ಶೆ-ಪ್ರವಾಸಾನುಭವಗಳ ಮೂಲಕ ವ್ಯಕ್ತಗೊಳ್ಳುವುದು. ಇಂಥಲ್ಲಿ ಎಲ್ಲವೂ ಸ್ವಂತ ಬರೆಹವೇ ಆಗಿರುತ್ತದೆಂಬ ಖಾತ್ರಿಯಿಲ್ಲ. ಬರೆಸುವ ಮತ್ತು ಓದಿಸುವ ಇಂಥ ಹಂತದಲ್ಲಿ ಈ ಸಂಗತಿಯನ್ನು ಕೇವಲವಾಗಿ ನೋಡುವುದೂ ತಪ್ಪಾಗುತ್ತದೆ. ಬಹಳಷ್ಟು ಬರೆಹಗಳು ಇನ್ನೊಂದರಿಂದ ಪ್ರಭಾವಿತಗೊಂಡೋ, ಪ್ರೇರಿತಗೊಂಡೋ, ಇಷ್ಟವಾಗಿದ್ದರಿಂದ ಮುಖ್ಯಾಂಶಗಳನ್ನು ನಕಲಿಸಿಯೋ ಅಂತೂ ಮಕ್ಕಳಿಗೆ ತಮ್ಮ ಹೆಸರಿನಲ್ಲಿ ಬರೆಹಗಳು ಪ್ರಕಟವಾಗಬೇಕೆಂಬ ಅಪೇಕ್ಷೆಯಷ್ಟೇ ಇದ್ದು, ಕೃತಿಚೌರ‍್ಯದಂಥ ಅಪರಾಧಗಳನ್ನು ಎಸಗುತ್ತಿದ್ದೇವೆಂಬ ತಿಳಿವಳಿಕೆಯಿಲ್ಲದೆ ಕೊಟ್ಟವಾಗಿರುತ್ತವೆ. ಆದಷ್ಟೂ ಸಂಪಾದಕ ಮಂಡಳಿಯ ಸದಸ್ಯರು ತಿದ್ದಿ ತೀಡಿ, ಪ್ರಕಟಣೆಗೆ ಆಯ್ಕೆ ಮಾಡುತ್ತರಾದರೂ ಇಂಥವು ಹೇಗೋ ಒಂದೆರಡು ನುಸುಳಿ ತಲೆನೋವು ತರುವುದು ಸಹಜವಾಗಿ ಬಿಟ್ಟಿದೆ. ಇನ್ನು ಭಾವಚಿತ್ರಗಳ ಕತೆಯೋ ದೇವರೇ ಬಲ್ಲ!



ಸಂಚಿಕೆಯಲ್ಲಿ ಇವುಗಳ ಪಾತ್ರ-ಗಾತ್ರವೇ ಹಿರಿದು!! ಇವುಗಳ ಪುಟಗಳು ಹೆಚ್ಚಾದಷ್ಟೂ ಪ್ರಕಟಣೆಯ ಬೆಲೆಯೂ ಆಧಿಕ್ಯಗೊಳ್ಳುವುದು. ತಂತಮ್ಮ ಫೋಟೊಗಳು ಸಂಚಿಕೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಉಮೇದು ವಿದ್ಯಾರ್ಥಿಗಳಲ್ಲಿರುವುದು ಸಹಜ. ಹಾಗೆಂದು ಎಲ್ಲರ ಚಿತ್ರಗಳನ್ನೂ ನಾನಾ ಭಂಗಿಗಳನ್ನೂ ಅಚ್ಚಿಸುವುದು ಅಸಾಧ್ಯ. ಇಂಥಲ್ಲಿ ನಿರ್ದಿಷ್ಟ ಸೂತ್ರ ಅನುಸರಿಸುವುದು ಸಮರ್ಥನೆಗೆ ಸುಲಭವಾಗುವುದು. ವಿಶಿಷ್ಟ ಸಾಧನೆ ಮಾಡಿದ, ಸ್ಪರ್ಧಾವಿಜೇತರ, ಅಮೂಲ್ಯ ಹಾಗೂ ವಿಶೇಷ ಕಾರ‍್ಯಕ್ರಮಗಳ ವಿಹಂಗಮ ನೋಟವಾಗಬೇಕೆ ವಿನಾ ವೈಯಕ್ತಿಕ ವಿಶ್ವಾಸ-ಕಾಳಜಿಗಳು ಕೆಲಸ ಮಾಡಬಾರದು; ಸಂಚಿಕೆಯಲ್ಲಿ ಪ್ರಕಟವಾಗುವ ಛಾಯಾಚಿತ್ರಗಳ ಆಯ್ಕೆಯಲ್ಲಿ!



ಕೆಲವು ವಿದ್ಯಾಲಯಗಳು ವಿದ್ಯಾರ್ಥಿ ಸಂಚಿಕೆ ಎಂತಲೂ ಇನ್ನು ಕೆಲವು ಕಾಲೇಜು ಸಂಚಿಕೆ ಎಂತಲೂ ಅಚ್ಚಿಸುತ್ತವೆ. ಇವೆರಡೂ ಬೇರೆ ಅರ್ಥಸ್ತರಗಳನ್ನು ಧ್ವನಿಸುವ ಪದ. ಈ ರೀತಿಯ ವಾರ್ಷಿಕ ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಉದಯೋನ್ಮುಖ ಬರೆಹ ಪ್ರತಿಭೆಗೆ ಗರಿಷ್ಟ ಮಾನ್ಯತೆ ನೀಡಬೇಕು, ನಿಜ. ಆದರೆ ಪ್ರಸ್ತುತ ದಿನಗಳಲ್ಲಿ ಈ ಅವಕಾಶವನ್ನು ಬಳಸಿಕೊಂಡು ‘ಕಾಲೇಜು ಸಂಚಿಕೆ’ಯಾಗಿ ರೂಪಿಸಿದರೆ ತಪ್ಪೇನೂ ಇಲ್ಲ. ಆ ವರ್ಷದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದಾಖಲೆಯಾಗಿ ಈಗ ಇಂಥ ಸಂಚಿಕೆಗಳನ್ನು ಹೊರತರಬೇಕಿದೆ. ಆಂತರಿಕ ಗುಣಮಟ್ಟ ನಿರ್ವಹಣಾ ಘಟಕದ ಸ್ಥಾಪನೆ, ಪ್ರತಿ ಆರು ತಿಂಗಳಿಗೊಮ್ಮೆ ಇಲಾಖೆಗೆ ನೀಡಬೇಕಾದ ಆಸ್-ಈಸ್ ಅನಾಲಿಸಿಸ್ ವರದಿ, ನ್ಯಾಕ್ ಮಾನ್ಯತೆ ಮತ್ತು ಮೌಲ್ಯಾಂಕನ ಮುಂತಾದ ಕಾಲಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ‘ಸಂಚಿಕೆ’ಯನ್ನು ಕೇವಲ ವಿದ್ಯಾರ್ಥಿ ಬರೆಹದ ಸಂಚಿತ ದಾಖಲೆಯಾಗಿಸದೆ, ಇನ್ನೂ ವಿಸ್ತರಿಸಿ ‘ಕಾಲೇಜು ಸಂಚಿಕೆ’ಯಾಗಿಸುವುದು ಅಗತ್ಯವಾಗಿದೆ; ಇಂದಿನ ತುರ್ತು ಸಹ ಆಗಿದೆ.



ವಿದ್ಯಾರ್ಥಿಗಳ ಬರೆಹಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕಷ್ಟಸಾಧ್ಯವಾದಾಗ (ಕೈ ಹಿಡಿದು ಬರೆಸುವುದು, ಕೃತಿಚೌರ‍್ಯವೆಂದು ಗೊತ್ತಾದ ಮೇಲೂ ಪ್ರಕಟಿಸುವುದು ಅಕ್ಷಮ್ಯ ಮತ್ತು ಅಪರಾಧ) ಅಧ್ಯಾಪಕರ ಲೇಖನ-ಸೃಜನಾತ್ಮಕ ಬರೆಹಗಳನ್ನು ಪ್ರಕಟಿಸಬಹುದು. ಆದರೆ ವಿಶ್ವವಿದ್ಯಾನಿಲಯಗಳು ‘ಅತ್ಯುತ್ತಮ ವಾರ್ಷಿಕ ಸಂಚಿಕೆಗೆ ಬಹುಮಾನ ನೀಡುವ ಯೋಜನೆ’ ಸಂಬಂಧವಾಗಿ ಆಯ್ಕೆ ಸಮಿತಿಯ ಮೊದಲ ಸುತ್ತಿನಲ್ಲೆ ಅಧ್ಯಾಪಕರ ಬರೆವಣಿಗೆ ಇದ್ದ ಪಕ್ಷದಲ್ಲಿ ‘ಮಾನ್ಯ ಮಾಡುವುದಿಲ್ಲ’ ಎಂಬ ಒಂದೇ ಕಾರಣಕ್ಕಾಗಿ ಬಹಳಷ್ಟು ಕಾಲೇಜುಗಳ ಸಂಚಿಕೆಗಳು ಕೇವಲ ‘ವಿದ್ಯಾರ್ಥಿ ಸಂಚಿಕೆ’ಯಾಗುತ್ತಿವೆ; ಕಾಲೇಜು ಸಂಚಿಕೆಯಾಗುತ್ತಿಲ್ಲ. ಇದು ವಿಷಾದನೀಯ. ಒಂದೋ, ಬಹುಮಾನ ನೀಡುವ ನೀತಿ-ನಿಬಂಧನೆಗಳಲ್ಲಿ ಪರಿಷ್ಕರಣೆಯಾಗಬೇಕು, ಅಥವಾ ಬಹುಮಾನದ ‘ಮಾನ್ಯತೆ ಮತ್ತು ಮೊತ್ತದ ಆಸೆ’ಯನ್ನು ಪಕ್ಕಕ್ಕಿಟ್ಟು ಸಂಚಿಕೆಯನ್ನು ವಿಶಾಲಾರ್ಥದಲ್ಲಿ ಸಮಗ್ರ ಚೌಕಟ್ಟಿನಲ್ಲಿ ಸಿದ್ಧಪಡಿಸಬೇಕು. ಈ ವಿಷಯದಲ್ಲಿ ನಮ್ಮ ಮಹಾವಿದ್ಯಾಲಯವು ಬಹುಮಾನದ ಆಕರ್ಷಣೆಯನ್ನು ಕೈ ಬಿಟ್ಟು (ಸದಭಿಮಾನವೇ ನಿಜದ ಬಹುಮಾನವೆಂದು ಪರಿಭಾವಿಸಿ) ಕಾಲೇಜು ಸಂಚಿಕೆಯಾಗಿಸಲು ಪ್ರತಿ ವರ್ಷ ನಿಯೋಜಿತಗೊಳ್ಳುವ ಸಂಪಾದಕ ಮಂಡಳಿಯು ನಿರ್ಣಯ ಕೈಗೊಳ್ಳುತ್ತಿದೆ. ಇದು ಅಪರೂಪದ ಹಾದಿ.



     ಇಲ್ಲೊಂದು ಪ್ರಶ್ನೆ: ಬಹುಮಾನದ ಆಸೆ-ಉದ್ದೇಶದಿಂದ ಸಂಚಿಕೆಯನ್ನು ತರುವುದು ಸರಿಯೆ? ಒಂದು ಪಕ್ಷ ಬಹುಮಾನದ ಯೋಜನೆಯಿಲ್ಲದಿದ್ದರೆ ಸಂಚಿಕೆ ತರುವುದನ್ನು ನಿಲ್ಲಿಸುತ್ತೇವೆಯೆ? ಇಂಥ ಶೈಕ್ಷಣಿಕ ಸಂಚಿಕೆಗಳು ಆಯಾ ವರ್ಷದ ಎಲ್ಲ ಮಹತ್ವದ ಆಗುಹೋಗುಗಳ ಸಮರ್ಥ ಪ್ರತಿನಿಧಿ; ನೆನಪುಗಳ ಸಾಗರ, ಒನಪುಗಳ ಅಲಂಕಾರ. ಏಕಕಾಲಕ್ಕೆ ಕಾಲೇಜಿನ ತ್ರಿಕೋನ ಬಿಂದುಗಳಾದ ವಿದ್ಯಾರ್ಥಿಗಳು - ವಿದ್ಯಾಲಯದ ಸಿಬ್ಬಂದಿವೃಂದ ಹಾಗೂ ಅಧಿಕಾರಿಗಳು/ಜನಪ್ರತಿನಿಧಿಗಳು/ಸಂಸ್ಥೆಯ ಹಿತೈಷಿಗಳು- ಈ ಮೂವರ ಪಾತ್ರವನ್ನು ಹಿಡಿದಿಡುವ ಪಾತ್ರೆ. ಅನುಕ್ರಮವಾಗಿ ಹಾಗೂ ಶ್ರದ್ಧೆ-ಶ್ರಮಪೂರ್ವಕವಾಗಿ ಕಟ್ಟಿಕೊಂಡ ಕಾಳಜಿಸಹಿತ ಪ್ರ-ದರ್ಶನ. ಕಾಟಾಚಾರಕ್ಕೆ ಸಂತೆಯ ಹೊತ್ತಿಗೆ ನೇಯ್ದದ್ದಲ್ಲ; ಹಾಗೆ ನೇಯಬಾರದು!



ಆಯಾ ಕಾಲೇಜಿನಲ್ಲಿ ಇರುವ ಎಲ್ಲ ಸಮಿತಿಗಳ ವಾರ್ಷಿಕ ವರದಿಗಳು ಸಂಚಿಕೆಯಲ್ಲಿ ಪ್ರಕಟವಾಗುವುದರಿಂದ ಮುಂದೊಮ್ಮೆ ಬೇರೆ ಬೇರೆ ಕಾರಣಗಳಿಗಾಗಿ ಸಂಚಿಕೆಯು ಸಂಗ್ರಹಯೋಗ್ಯವೆನಿಸುವುದು. ಸಂಚಿಕೆಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಸರ್ಕಾರ-ಯುಜಿಸಿ-ಮಾನ್ಯತಾ ಮಂಡಳಿಗಳು ಹೆಚ್ಚಿನ ಅನುದಾನವನ್ನೇನೂ ನೀಡುವುದಿಲ್ಲವಾದರೂ ನಮಗಾಗಿ-ನಮ್ಮ ಸಂಸ್ಥೆಯ ಏನೆಲ್ಲ ಕಾರ‍್ಯಚಟುವಟಿಕೆಗಳನ್ನು ಹೆಮ್ಮೆ-ಪ್ರೀತಿಯಿಂದ ದಾಖಲು ಮಾಡುವಾಗ ‘ವರದಿಗಳ ಸಮಗ್ರತೆ’ಯನ್ನು ಅರಿಯಬೇಕು ಮತ್ತು ಅಧಿಕೃತತೆಯನ್ನು ಕಾಪಾಡಿಕೊಳ್ಳಬೇಕೆಂಬುದು ನನ್ನ ಕಾಳಜಿ. ಈ ದಿಸೆಯಲ್ಲಿ ನನ್ನ ಅಭಿಪ್ರಾಯ ಹೀಗಿದೆ: ಇಲಾಖೆ/ಮೇಲಿನ ಅಧಿಕಾರಿಗಳು ಪ್ರತಿವರ್ಷದ ವಾರ್ಷಿಕ ಸಂಚಿಕೆಯನ್ನು ‘ಅಧಿಕೃತ ಶೈಕ್ಷಣಿಕ ದಾಖಲೆ’ ಎಂದು ಪರಿಗಣಿಸಲು ಆದೇಶಿಸಬೇಕು. ಆಯಾ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಂಚಿಕೆಯನ್ನು ಹೊರ ತರುವುದರಿಂದ ಸಮಗ್ರ ಚಟುವಟಿಕೆಗಳನ್ನು ಅದರಲ್ಲಿ ದಾಖಲಿಸಲು ಸಾಕಷ್ಟು ಸಮಯಾವಕಾಶವಿರುತ್ತದೆ. ಈ ಮೂಲಕವಾದರೂ ‘ನಮ್ಮ ಪಾಲಿನ ಕರ್ಮವೆಂದು ಒಂದಿಬ್ಬರು, ಹೇಗೋ ಹೊಸೆಯುವ ಮಂದಲಿಗೆ’ಯಾಗುವುದನ್ನು ತಪ್ಪಿಸಬಹುದಾಗಿದೆ.



ಉದಾಹರಣೆಗೆ, ನಮ್ಮ ಕಾಲೇಜಿನ ‘ಎಡತೊರೆ 2010-11’ ರಲ್ಲಿ ಐಕ್ಯುಎಸಿ ವರದಿ, ರಿಸರ್ಚ್ ಅ್ಯಂಡ್ ಡೆವಲಪ್‍ಮೆಂಟ್ ಸಮಿತಿಯ ವರದಿ, ಅಸೈನ್‍ಮೆಂಟ್ ವರ್ಕ್‍ಬುಕ್ ಸಮಿತಿಯ ವರದಿ, ಕಾನೂನು ಅರಿವು ಮತ್ತು ಜಾಗೃತಿ ವೇದಿಕೆಯ ವರದಿ, ಗೋಡೆಪತ್ರಿಕೆ ವರದಿ, ಉದ್ಯೋಗ ಮಾಹಿತಿ-ಮಾರ್ಗದರ್ಶನ ಘಟಕದ ವರದಿ, ದತ್ತಿ ಬಹುಮಾನ ವಿತರಣಾ ಸಮಿತಿಯ ವರದಿ, ವಿಜ್ಞಾನ-ವಾಣಿಜ್ಯ ಬಳಗಗಳ ವರದಿ, ವಿದ್ಯಾರ್ಥಿ ಮಾರ್ಗದರ್ಶಿ-ಪರಿಚಯಪುಸ್ತಕ ಸಮಿತಿಯ ವರದಿ, ಇಲಾಖೆಯ ವಿಶೇಷ, ಸಾಂದರ್ಭಿಕ ಕಾರ‍್ಯಕ್ರಮಗಳಾದ ಸಹಯೋಗ, ಮಾನವತೆ ಯೋಜನಾನುಷ್ಠಾನ ಸಮಿತಿ ವರದಿ. . . . ಇತ್ಯಾದಿಗಳನ್ನು ಇನ್ನುಳಿದ ಸಮಿತಿ/ಘಟಕ/ಬಳಗಗಳ ವರದಿಯ ಜೊತೆಯಲ್ಲಿ ಪ್ರಕಟಿಸಬೇಕೆಂದು ನಿರ್ಣಯಿಸಲಾಗಿದೆ.



ಕಾಲೇಜು ಸಂಚಿಕೆಯು ತನ್ನ ಮೂಲ ಆಶಯವಾದ ಓದುಮಾಧ್ಯಮಕ್ಕೆ ನಿಷ್ಠವಾಗಿರಬೇಕು; ಬಣ್ಣ ಬಣ್ಣದ, ವಿಭಿನ್ನ, ವಿ-ಚಿತ್ರ ನೋಡುಮಾಧ್ಯಮಕ್ಕೆ ಕಣ್ಣಾಗಬಾರದು. ಶೈಕ್ಷಣಿಕ ಸಂಸ್ಥೆಯು ಮೌಲ್ಯಗಳ ಪ್ರತಿನಿಧಿ. ವಿದ್ಯಾರ್ಥಿ-ಅಧ್ಯಾಪಕ ಸಿಬ್ಬಂದಿ ಎಲ್ಲರೂ ಫೋಟೊಗಾಗಿ ಹಂಬಲಿಸಿ, ಹಪಹಪಿಸಬಾರದು. ಹಾವ-ಭಾವಚಿತ್ರಗಳ ಪ್ರಚಾರಕ್ಕಿಂತ ಆಯಾ ಶಿಕ್ಷಣಸಂಸ್ಥೆಯು ಆ ವರ್ಷದಲ್ಲಿ ಕೈಗೊಂಡಿದ್ದ ಸ್ವೋಪಜ್ಞವಾದ ಶೈಕ್ಷಣಿಕ ಚಟುವಟಿಕೆಗಳಿಗೆ ಮೊದಲ ಮನ್ನಣೆಯ ಮಣೆ ಹಾಕಬೇಕೆ ವಿನಾ ನೂರಾರು ಬಣ್ಣಗಳ ಮಿಶ್ರಣ ಮಾಡಿಸಿ, ಡೀಸೆನ್ಸಿಗೆ ಧಕ್ಕೆ ತಂದುಕೊಳ್ಳಬಾರದು. ಬರಿ ಭಾವಚಿತ್ರಗಳನ್ನು ಅಚ್ಚಿಸುವುದೇ ಸಂಚಿಕೆಯ ಸಂಪಾದಕ ಮಂಡಳಿಯ ದೊಡ್ಡಸ್ತಿಕೆಯಾಗಬಾರದು. ಭಾವ-ಸ್ವಭಾವಚಿತ್ರಗಳು ಪ್ರಾಸಂಗಿಕವಾಗಿರಬೇಕು; ವರದಿಗಳಲ್ಲಿ ಉಲ್ಲೇಖಿಸಲ್ಪಟ್ಟ ಕಾರ‍್ಯ-ಕ್ರಮಗಳನ್ನು ಮನೋಬಿಂಬವಾಗಿಸಲು, ಪೂರಕ ದಾಖಲೆಯಾಗಿಸಲು ಚಿತ್ರಗಳನ್ನು ಬಳಸಿಕೊಳ್ಳಬೇಕೆ ವಿನಾ ಚಿತ್ರಗಳೇ ಸಂಚಿಕೆಯ ‘ಚಿತ್ರಾನ್ನ’ವಾಗಬಾರದು. ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಸಂಚಿಕೆಯನ್ನು ಕಾಪಿಟ್ಟುಕೊಳ್ಳುವಂಥ ಸಂಗ್ರಹಯೋಗ್ಯವಾಗಿಸಬೇಕು. ಉದಾಹರಣೆಗೆ, ನಮ್ಮ ಕಾಲೇಜಿನ 2009-10 ರ ಸಂಚಿಕೆಯ ಪ್ರತಿ ಪುಟದ ತಳಭಾಗದಲ್ಲಿ, ಸೂಕ್ತಿಗಳನ್ನು ಅಚ್ಚಿಸುವ ಬದಲಿಗೆ, ಇತಿಹಾಸ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಸಿದ್ಧಲಿಂಗಯ್ಯನವರು ಕಾಲೇಜು ಕಾರ‍್ಯನಿರ್ವಹಿಸುವ ಪ್ರತಿಯೊಂದು ದಿನವೂ ಬರೆದು, ನಿರ್ವಹಿಸುವ ‘ಬೆಳಕಿನ ಫಲಕ’ದ ‘ಪದನಿಧಿ-ಪದಾರ್ಥ’ವನ್ನು ಸೇರ್ಪಡಿಸಲಾಗಿದೆ.



ಏಕೆಂದರೆ ಇತ್ತೀಚಿನ ಕಾಲೇಜು/ವಿದ್ಯಾರ್ಥಿ ಸಂಚಿಕೆಗಳು ಬರೆಹಕ್ಕಿಂತ ಭಾವ-ಚಿತ್ರಕ್ಕೆ ಎಲ್ಲಿಲ್ಲದ ಮಹತ್ವ ಕೊಡುತ್ತಿವೆ. ಇದು ಕೇವಲ ಲೋಪವಲ್ಲ; ಜೊತೆಗೆ ದೋಷವೂ. ವಾಣಿಜ್ಯಕ ಜಾಹಿರಾತಿನಂತೆ ವಿದ್ಯಾಸಂಸ್ಥೆಯ ಫೋಟೊಗಳಿದ್ದರೆ ಸರಿಯೆ? ಬದಲಾಗುತ್ತಿರುವ ಕಾಲಮಾನ-ಮನೋಮಾನಗಳಿಗೆ ಸ್ಪಂದಿಸಬೇಕು. ನಿಜ, ಆದರೆ ಹಾಗೆಯೇ ನೀತಿ-ಮೌಲ್ಯಗಳನ್ನು ಕಾಪಿಡುವ ಜವಾಬ್ದಾರಿಯೂ ಶಿಕ್ಷಣಸಂಸ್ಥೆಯ ಹೆಗಲ ಮೇಲಿದೆ ಎಂಬುದನ್ನು ಮರೆಯಬಾರದು. ಅಂದರೆ ಸಂಸ್ಥೆಯು ಕೇವಲ ತಿಳಿಸುವುದಲ್ಲ; ತಿಳಿ ಹೇಳಬೇಕು. ಜಗತ್ತು ಕೆಟ್ಟಿದೆಯೆಂದು ಶಿಕ್ಷಕರು ಕೈಕಟ್ಟಿ ಕೂರಬಾರದು; ತಿದ್ದಿ-ತೀಡಿ, ಸರಿದಾರಿ ತಿಳಿಸುವ ಹೊಣೆ ಕೇವಲ ನಮ್ಮದು ಮಾತ್ರ ಎಂಬ ಅರಿವು ಮೂಡಿದಲ್ಲಿ ಇಂಥ ಲೋಪ-ದೋಷಗಳು ಸಂಭವಿಸಲಾರದು. ಸಂಚಿಕೆಯನ್ನು ಆಕರ್ಷಕವಾಗಿ, ಮುದ್ದಾಗಿ, ಕೈಗೆತ್ತಿಕೊಂಡು ಕಣ್ಣಾಡಿಸುವಂತೆ ಹೊರ ತರಬೇಕು, ನಿಜ. ಹಾಗೆಂದು ಕೇವಲ ಚಿತ್ರಗಳನ್ನೇ ಅವಲಂಬಿಸುವುದು ಎಷ್ಟು ಸೂಕ್ತ? ವಿದ್ಯಾರ್ಥಿಗಳು ‘ಕೇಳುತ್ತಾರೆಂದು’ ಕೊಟ್ಟಿದ್ದನ್ನೆಲ್ಲ, ತೆಗಿದಿದ್ದನ್ನೆಲ್ಲ, ‘ಹೊಡೆಸಿಕೊಂಡದ್ದನ್ನೆಲ್ಲ’ ಪ್ರಕಟಿಸುವುದು ಮಂಡಳಿಯ ಬೇಜವಾಬ್ದಾರಿ ಹಾಗು ಅಸಡ್ಡೆಯ ಸಂಕೇತ. ಕಾಲೇಜು ವಾರ್ಷಿಕ ಸಂಚಿಕೆಯು ಫೋಟೊ ಆಲ್ಬಂ ಅಲ್ಲ; ಚಟುವಟಿಕೆಗಳ ಬಬ್ಲಗಂ ಎಂಬ ದಿಕ್ಕಿನಲ್ಲಿ ಯೋಚಿಸಿ, ಯೋಜಿಸುವುದು ಪ್ರಸ್ತುತ ದಿನಮಾನಗಳಲ್ಲಿ ಅತ್ಯಂತ ಅಗತ್ಯ ಎಂಬುದು ಸದ್ಯದ ನನ್ನ ಕೊನೆಮಾತು.


     ‘ವಾದೇ ವಾದೇ ಜಾಯತೆ ತತ್ತ್ವಬೋಧ:’- ಉಪನಿಷತ್ಕಾರ

       ‘ಎತ್ತರಗಳಿರುವುದು ಎಲ್ಲರೂ ಹತ್ತುತ್ತಾರೆಂದಲ್ಲ; ಎಲ್ಲರೂ ಹತ್ತಬೇಕೆಂದು’- ಕುವೆಂಪು 
        10-06-2011

0 Comments:

Post a Comment

Subscribe to Post Comments [Atom]

<< Home