Saturday 25 September 2010

ಮಳೆ ಬಿಲ್ಲು- ಇಂಗ್ಲಿಷ್ ಕಲಿಕೆಯ ಬಗ್ಗೆ

ಇಂಗ್ಲಿಷ್ ಕಲಿಕೆಯೆಂಬ ಮಳೆಬಿಲ್ಲು

ಸರ್ವ ಜ್ಞಾನ ಶಿಸ್ತುಗಳಿಗೆ ಕಿಟಕಿ ಉನ್ನತೋನ್ನತ ಅಧ್ಯಯನ-ಸಂಶೋಧನಗಳಿಗೆ ತೆರೆದಬಾಗಿಲು

ಸುಖಜೀವನದರಮನೆಗೆ ನಿಜಸೋಪಾನ -ಇಂಗ್ಲಿಷ್‍ಭಾಷಾಜ್ಞಾನ

ಪ್ರಭುತ್ವದೊಂದಿಗೆ ಮಾತನಾಡಲು ಮಾತ್ರವಲ್ಲ, ಜಗಳವಾಡಲೂ ಪ್ರಭುತ್ವ ಬಳಸುವ  

ಭಾಷೆಯನ್ನೇ ಅವಲಂಬಿಸಬೇಕು- ಈ ಚರ್ಚಾರ್ಹ ಸಂಗತಿಗೆ ನಂತರ ಬರೋಣ.


ಪದವಿ ವ್ಯಾಸಂಗದಲ್ಲಿ ಭಾಷಾಕಲಿಕೆ ಅದರಲ್ಲೂ ಇಂಗ್ಲಿಷ್ ಭಾಷಾಭ್ಯಾಸವು ಫಲಿತಾಂಶ ಮತ್ತು ಗುಣಮಟ್ಟ-ಎರಡರ ಕುಸಿತದಿಂದ ಕಂಗೆಟ್ಟಿದೆ.


ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರಿಸುವ ವಿಜ್ಞಾನ ವಿದ್ಯಾರ್ಥಿಗಳು ಇಂಗ್ಲಿಷ್ ಪತ್ರಿಕೆಯಲ್ಲಿ ಫೇಲಾಗುತ್ತಿದ್ದಾರೆ.ಅದರಲ್ಲೂ ಗ್ರಾಮಾಂತರ ಕಾಲೇಜುಗಳಲ್ಲಿ ಇದು ಶೋಚನಿಯ ಅವಸ್ಥೆಯಲ್ಲಿದೆ.ಇಂಗ್ಲಿಷ್ ಪತ್ರಿಕೆಗೆ ಕನ್ನಡದಲ್ಲೇ ಉತ್ತರಿಸುವ ಆಯ್ಕೆ ಇರಬೇಕೆಂದು ಭಾಷಾವಿಜ್ಞಾನಿಗಳು ಸಲಹೆ ಕೊಡುವಷ್ಟು ವಿಚಾರ ಗಂಭೀರವಾಗಿದೆ. ಎಷ್ಟೋ ಗ್ರಾಮೀಣ ಪ್ರತಿಭೆಗಳು ಈ ಕಬ್ಬಿಣದ ಕಡಲೆ ಅಗಿದು ಜೀರ್ಣಿಸಿಕೊಳ್ಳಲಾಗದೆ ಕಮರುತ್ತಿವೆ. ಕೀಳರಿಮೆಯಿಂದ, ಬಳಲುತ್ತ ಪ್ರಧಾನಧಾರೆಯಿಂದ ದೂರ ಸರಿದು ಸವೆಯುತ್ತಿವೆ.ಇದಕ್ಕಿರುವ ಅನೇಕಾನೇಕ ಕಾರಣಗಳಲ್ಲಿ ಪ್ರಮುಖವಾದದ್ದು:

ಕಲಿಯುವ ಹಾಗೂ ಕಲಿಸುವ ರೀತಿನೀತಿಗಳು ಜೊತೆಗೆ ಪರಕೀಯ ಭಾಷೆಯೊಂದು (ವಿದೇಶೀ) ಅಂತರ್ಗತಗೊಳ್ಳಲು ಇರುವ ಸಾಮಾನ್ಯ-ಸಹಜ ತೊಡಕುಗಳು.  ಪದವಿಪೂರ್ವ ಮತ್ತು ಆ ಹಿಂದಿನ ತರಗತಿಗಳಲ್ಲಿ ಮಕ್ಕಳು ಎಷ್ಟು ಪ್ರಮಾಣದ ಇಂಗ್ಲಿಷ್ ಕಲಿಯಬೇಕಿತ್ತೋ ಅಷ್ಟನ್ನು ಕಲಿಯದಿರುವುದು. ಇದೇ ಪದವಿ ಶಿಕ್ಷಣದ ಒಟ್ಟು ಗುಣಮಟ್ಟದ ಕುಸಿತಕ್ಕೆ ನೇರಕಾರಣ.


ಈಗ ಲೇಖನದ ಮೊದಲಲ್ಲಿ ಪ್ರಸ್ತಾಪಿಸಿದ ಸಂಗತಿಗೆ ಬರುವುದಾದರೆ,ಇಂಗ್ಲಿಷ್ ಭಾಷಾಶಿಕ್ಷಣ ಅನಿವಾರ‍್ಯ, ಜ್ಞಾನಾರ್ಜನೆಗೆ ಬೇಕೇ ಬೇಕು ಅದರ ಸಾಹಚರ‍್ಯ; ಈ ಭಾಷಕೌಶಲದಿಂದ ಉದ್ಯೋಗಾವಕಾಶಗಳು ಹೇರಳ. ಬಹಳಷ್ಟು ಗ್ರಾಮೀಣ ಪ್ರತಿಭೆಗಳು ಇದರ ಕೊರತೆಯಿಂದ ಅವಕಾಶವಂಚಿತವಾಗಿವೆ.ಇಂದಿನ ಜಾಗತೀಕರಣ ಮತ್ತು ಸ್ಪರ್ಧಾತ್ಮಕ ದಿನಮಾನಗಳು ಗ್ರಾಮೀಣ ಭಾಗದ ಕಲಿಕಾರ್ಥಿಗೆ ನೂತನ ಅಷ್ಟೇ ಅಜ್ಞಾತ ಸವಾಲುಗಳನ್ನು ತಂದೊಡ್ಡಿದೆ. ಜ್ಞಾನಾರ್ಥಿಯ ಸಾಮರ್ಥ್ಯವನ್ನು ಆರ್ಥಿಕ ಮಾನದಂಡಗಳ ಮೂಲಕ ಒರೆಹಚ್ಚಿ ನೋಡಲಾಗುತ್ತಿದೆ.ಇಂಥ ವಿತ್ತಸಂಸ್ಕೃತಿಯು ಇಂಗ್ಲಿಷನ್ನು ಏಕಮೇವವಾಗಿಸಿ, ಜಗತ್ತಿನ ಪ್ರಭುತ್ವಕ್ಕೆ ನಾಲಗೆಯಾಗಿಸಿದೆ.ಅಷ್ಟೇ ಏಕೆ ಪ್ರಭುತ್ವ ಮತ್ತು ಅಧಿಕಾರ ಕೇಂದ್ರವು ಪರೋಕ್ಷವಾಗಿ ಇಂಗ್ಲಿಷೇ ಆಗಿದೆ.

       ಭಾಷಿಕ ಸಂವಹನ ಮಾಧ್ಯಮ ಬೇರೆ ಅಲ್ಲ; ಜೀವನ ಕ್ರಮ ಬೇರೇ ಅಲ್ಲ ಎಂಬ ಕಾಲದಲ್ಲಿ ನಾವಿದ್ದೇವೆ.ಈ ಎಲ್ಲ ಬದಲಾವಣೆಯನ್ನು ತಿಳಿಯಲು, ಚರ್ಚಿಸಲು, ಸಂವಾದಿಸಲು ಸಹ ಪ್ರಭುತ್ವದ ಭಾಷೆಯಾದ ಇಂಗ್ಲಿಷ್ ಅನ್ನು ಬಳಸಬೇಕಿದೆ, ಜಾಗತಿಕ ಮಟ್ಟದಲ್ಲಿ. ಅದಕ್ಕೆಂದೇ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುವುದು ಮತ್ತು ಬದುಕುಳಿಯಲು ಮಕ್ಕಳು ಕಲಿಯುವುದು ಎಂದಿಗಿಂತ ಅನಿವಾರ‍್ಯವಾಗಿದೆ - ಪಟ್ಟಣದ ವಿದ್ಯಾರ್ಥಿಗಳಿಗೆ ಸರಿದೊರೆಯಾಗಿ ಸ್ಪರ್ಧಿಸಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು. 


     ಇನ್ನೊಂದು ಸಂಗತಿಯನ್ನು ಇಲ್ಲಿ ಅವಶ್ಯವಾಗಿ ಪ್ರಸ್ತಾವಿಸಬೇಕು. ಅದೆಂದರೆ, ಇಂಥ ಸಂದಿಗ್ಧ ಸಂದರ್ಭದಲ್ಲಿ ತಾಯಿನುಡಿಯ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕುರಿತ ಭಾವನಾತ್ಮಕವೂ ಸಾಂಸ್ಕೃತಿಕವೂ ಆದ ವಿಚಾರವನ್ನು ಅರ್ಥೈಸಿಕೊಳ್ಳುವ ಬಗೆ ಹೇಗೆ? ಈ ನಿಟ್ಟಿನಲ್ಲಿ ನಮ್ಮ ಚರ್ಚೆಗಳು ಹಾದಿ ತಪ್ಪಿವೆ, ಗೊಂದಲದ ಗೂಡಾಗಿವೆ.

     ಇಂಗ್ಲಿಷ್ ಕಲಿಯುವುದೆಂದರೆ ಅದು ಹೇಗೆ ಕನ್ನಡವನ್ನು ಕೊಂದಂತಾಗುತ್ತದೆ? ಕನ್ನಡವನ್ನು ಕೊಲ್ಲುವ ಮುನ್ನ ನನ್ನ ಕೊಲ್ಲು ಎಂದ ಕುವೆಂಪು ಬಹಳ ಹಿಂದೆಯೇ ಈ ಭಾಷಾ ಸಂದಿಗ್ಧವನ್ನು ಸರಿ ಮಾಡಿಕೊಳ್ಳುವ ಸೂತ್ರವನ್ನು ಕೊಟ್ಟಿದ್ದಾರೆ: ವಿಜ್ಞಾನವು ಇಂಗ್ಲಿಷ್‍ನಲ್ಲೇ ಇರಲಿ; ವಿವೇಕವು ಮಾತೃಭಾಷೆಯಾಗಿರಲಿ!  ಕವಿ ಕುವೆಂಪು ಅವರ ಇಂಗ್ಲಿಷ್ ಭಾಷಾಪ್ರಭುತ್ವ, ಪಾಂಡಿತ್ಯಗಳ ಸ್ವರೂಪ ಎಂಥದೆಂಬುದನ್ನು ಅರಿತವರಿಗೆ ಇದು ಸುಲಭವಾಗಿ ಅರ್ಥವಾಗುವ ಆಲೋಚನೆ. ಇಷ್ಟಕ್ಕೂ ನಾವು ಕಲಿಯಬೇಕಿರುವ ಮತ್ತು ಕಲಿಸಬೇಕಿರುವ ಇಂಗ್ಲಿಷ್ ವ್ಯಾವಹಾರಿಕ ನೆಲೆಯದು, ದೈನಂದಿನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವಷ್ಟು ಸರಳ ಮಟ್ಟದ್ದು. ಆಸ್ಥೆ, ಆಸಕ್ತಿಗಳಿದ್ದವರು ಹೆಚ್ಚಿನ ಅಧ್ಯಯನ ಮಾಡಲಿ ಬಿಡಿ. ಒಂದಕ್ಕಿಂತ ಹೆಚ್ಚು ಭಾಷೆ ಕಲಿತರೆ ನಷ್ಟವೇನು?

     ಇಲ್ಲಿರುವ ಪ್ರಶ್ನೆಯೆಂದರೆ, ಪ್ರಾದೇಶಿಕ ಭಾಷೆಗಳು ಕಾಲಾಂತರದಲ್ಲಿ ನಶಿಸಿ ಹೋಗುತ್ತವೆಂಬುದೇ ಆಗಿದೆ.  ಜಾಗತಿಕ ಮಟ್ಟದಲ್ಲಿ ಬದುಕು ಕೊಡದ ಕನ್ನಡವು ಇದ್ದರೆಷ್ಟು? ಹೋದರೆಷ್ಟು? ಎಂಬಷ್ಟು ಕೇವಲವಾಗಿ ಇಂದಿನ ಯುವಸಮೂಹ ಹೇಳುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಹಾಗೂ ಅಪಾಯದ ಮಟ್ಟ ಕುತ್ತಿಗೆಯನ್ನು ಮೀರಿ ಬೆಳೆದುಬಿಟ್ಟಿದೆ.

     ಈ ಹೊತ್ತು ಕನ್ನಡದ ಮೂಲಕ ಇಂಗ್ಲಿಷ್ ಕಲಿಸುವ, ಕಲಿಯುವ ಹಾಗೂ ಇಂಗ್ಲಿಷ್ ಕಲಿತು ಕನ್ನಡವನ್ನು ಚಿರಕಾಲ ಉಳಿಸಿ, ಬೆಳೆಸುವ ಪ್ರಾವೀಣ್ಯ ಹೆಚ್ಚಬೇಕಿದೆ. ಕನ್ನಡದ ಅಭಿಮಾನವು ಪ್ರಾದೇಶಿಕತೆಯನ್ನು ಮೀರಿ ಜಾಗತಿಕವಾಗಬೇಕಿದೆ. ಹಾಗಾದಾಗಷ್ಟೇ ಕನ್ನಡಿಗರು ನಿಜವಾದ ಅರ್ಥದಲ್ಲಿ- ಕುವೆಂಪು ಪ್ರಣೀತ -ವಿಶ್ವಮಾನವರಾಗುವರು. ಜೊತೆಗೆ ಕನ್ನಡವು ಸಂಕುಚಿತ ಆವರಣವನ್ನು ಮೀರಿ ವಿಶ್ವಾತ್ಮಕವಾಗಬಲ್ಲದು. 


                                                            ****************

0 Comments:

Post a Comment

Subscribe to Post Comments [Atom]

<< Home