Friday 24 September 2010

ತೇಜಸ್ವಿಯವರ ಕರ್ವಾಲೋ

                   ಕರ್ವಾಲೊ

ಕರ್ವಾಲೊ’ ತೇಜಸ್ವಿಯವರ ಮೊದಲ ಮಹತ್ವಾಕಾಂಕ್ಷೆಯ ಕಾದಂಬರಿ. ಅವರ ಸಾಹಿತ್ಯಸೃಷ್ಟಿ ಮತ್ತು ಧೋರಣೆದೃಷ್ಟಿಗಳೆರಡೂ ಈ ಕಾದಂಬರಿಯಲ್ಲಿ ಬಹು ನಿಚ್ಚಳವಾಗಿದೆ. ಇದು ಅವರ ಮುಂದಿನ ಬರೆವಣಿಗೆಯ ದಿಕ್ಸೂಚಿಯಂತಿದೆ ಎಂಬುದು ಈಗ ಸ್ಪಷ್ಟಗೊಂಡಿದೆ. ತೇಜಸ್ವಿಯವರು ನವ್ಯಸಾಹಿತ್ಯವನ್ನು ಧಿಕ್ಕರಿಸಿ, ಅದರ ಧ್ಯೇಯನಿಷ್ಠೆಯನ್ನು ತಿರಸ್ಕರಿಸಿ ಹೊಸತೊಂದು ಪಂಥದತ್ತ-ನವ್ಯೋತ್ತರ ಸಾಹಿತ್ಯದತ್ತ ದೃಷ್ಟಿ ನೆಟ್ಟ ಸಂದರ್ಭದಲ್ಲಿ ಅವರು ಈ ಕಾದಂಬರಿಯನ್ನು ಬರೆದಿದ್ದರೂ ‘ಸಂಕೇತ ಅಥವಾ ಪ್ರತೀಕನಿಷ್ಠ ಕಾದಂಬರಿ’ಯಾಗಿ ಕರ್ವಾಲೊ ರೂಪುಗೊಂಡಿದೆ. ಈ ನೀಳ್ಗತೆಯಲ್ಲಿ ಬರುವ ‘ಹಾರುವ ಓತಿ’ ವಿಶ್ವದ ಚರ ಮತ್ತು ಚಿರನಿಗೂಢತೆಯನ್ನು ಸಂಕೇತಿಸುವುದು. ಕಾಲದ ಅಖಂಡ ಪ್ರವಾಹದಲ್ಲಿ ಮನುಷ್ಯ ಮತ್ತವನ ಪ್ರಜ್ಞೆ ಹೇಗೆ ತನ್ನದೇ ಆದ ಲೆಕ್ಕಾಚಾರದಲ್ಲಿ ತೊಡಗಿದೆ ಎಂದೂ ವಿಶ್ವದ ಅನಂತ, ಅಪಾರ ನಿಗೂಢವು ಎಷ್ಟು ವಿಸ್ತಾರದ್ದು ಮತ್ತು ಎಷ್ಟು ಚೋದ್ಯದ್ದು ಎಂದೂ ಈ ಬರೆವಣಿಗೆ ದಿಗಿಲು-ವಿಸ್ಮಯ ಮತ್ತು ಬೆರಗುಗಳಲ್ಲಿ ಕಟ್ಟಿ ಕೊಡುವುದು.



     ಕಾದಂಬರಿಯ ಹೆಸರು ‘ಕರ್ವಾಲೊ’ ಎಂದಿದ್ದರೂ ಇದರ ನಾಯಕ ಮಂದಣ್ಣನೇ. ತೇಜಸ್ವಿಯವರು ಸರಳ-ಸಾಧಾರಣ-ಸಹಜ ಪಾತ್ರಗಳಲ್ಲೇ ಇರುವ ಲೋಕಜ್ಞಾನ ಎಂಥದೆಂಬುದನ್ನು ಇವರ ಪಾತ್ರದ ಮೂಲಕ ಆತ್ಮೀಯವಾಗಿ ಪರಿಚಯಿಸುವರು.



     ಸಮಾಜ ಮತ್ತು ಜಗತ್ತು ಮಂದಣ್ಣನನ್ನು ನೋಡುವ ಬಗೆ ಹಾಗೂ ವಿಜ್ಞಾನಿ ಕರ್ವಾಲೊ ಮಂದಣ್ಣನನ್ನು ಕಾಣುವ ಬಗೆ- ಇವೆರಡರ ಸ್ಪಷ್ಟ ವ್ಯತ್ಯಾಸವು ಕಾದಂಬರಿಯಲ್ಲಿ ಗಾಢವಾಗಿ ಬಂದಿದೆ.



     ನಿಸರ್ಗ-ಮಾನವಪ್ರಕೃತಿ-ವಿಜ್ಞಾನ-ಪರಿಸರ- ವಿಶ್ವದ ಅನಂತವಾದ ಕಾಲಪ್ರವಾಹ- ಜಗತ್ತಿನ ನಿಗೂಢತೆ- ಇವು ಈ ಕಾದಂಬರಿಯಲ್ಲಿ ಕಾಣಿಸಿಕೊಂಡ ವಸ್ತುಗಳು. ಪಾತ್ರಗಳ ಮೂಲಕವೇ ಲೇಖಕರು ಆತ್ಮೀಯವಾದ-ಸರಸವಾದ-ವೈನೋದಿಕ ನೆಲೆಯ ಮಾನವ ಸಂಬಂಧಗಳನ್ನು ಹೆಣೆದುಕೊಡುವ ಶೈಲಿ ಅದ್ಭುತ.



     ಇಹದ ಮೂಲಕವೇ ಇಹವಲ್ಲದ ಲೋಕಸತ್ಯವನ್ನೂ ವಿಜ್ಞಾನ ಮತ್ತು ನಿಸರ್ಗದ ಸಂಬಂಧವನ್ನೂ ಕಾಣಿಸುವ ತೇಜಸ್ವಿಯವರ ಬರೆವಣಿಗೆಯ ಸಂವಹನ ಸೋಜಿಗದ್ದು. ಇಂಥ ಅದ್ಭುತ ಕತೆಗಾರ ಕನ್ನಡದಲ್ಲಿ ಮತ್ತೊಬ್ಬರಿಲ್ಲ.



     ರಂಜನೀಯವಾಗಿಯೇ ಬರೆದು ಗಂಭೀರ ಸತ್ಯಗಳನ್ನು ಕಾಣಿಸುವ ತೇಜಸ್ವಿ ಜಾಗತಿಕ ಮಟ್ಟದ ಪ್ರಕೃತಿಚಿಂತಕರು. ಸಾಹಿತಿಯೊಬ್ಬ ನಿಸರ್ಗ ಮತ್ತು ವಿಜ್ಞಾನಗಳನ್ನು ಹೇಗೆ ನೋಡಬೇಕು ಮತ್ತು ಯಾವ ರೀತಿಯ ಸಾಹಿತ್ಯ ಸೃಜಿಸಬೇಕು? ಎಂಬುದಕ್ಕೆ ತೇಜಸ್ವಿ ಅತ್ಯುತ್ತಮ ಮಾದರಿ.



 05-11-2002 

0 Comments:

Post a Comment

Subscribe to Post Comments [Atom]

<< Home