Wednesday 23 June 2021

ಜೀವಸ್ನೇಹದ ಕೆಂಪು ಕಡಲು: ಡಾ. ಸಿದ್ಧಲಿಂಗಯ್ಯನವರಿಗೆ ನುಡಿನಮನ

 ಜೀವಸ್ನೇಹದ ಕೆಂಪು ಕಡಲು: ಡಾ. ಸಿದ್ಧಲಿಂಗಯ್ಯನವರು

(ಇತ್ತೀಚೆಗೆ ನಿಧನರಾದ ಕವಿ ಸಿದ್ಧಲಿಂಗಯ್ಯನವರಿಗೊಂದು ನುಡಿನಮನ)


ಮೊನ್ನೆಯಷ್ಟೇ ನಿಧನರಾದ ಡಾ. ಸಿದ್ಧಲಿಂಗಯ್ಯನವರು ಸಾಹಿತ್ಯದ ಅಂತಸ್ಸತ್ವವನ್ನೂ ಸಮಾಜದ ಅವ್ಯವಸ್ಥೆಯನ್ನೂ ಚಿಕಿತ್ಸಕ ದೃಷ್ಟಿಯಿಂದ ಕಂಡರಿಸಿದವರು. ಕಲೆಗಾಗಿ ಕಲೆ ಎಂಬ ಐಷಾರಾಮೀ ನೆಲೆಯಿಂದ ಸೃಜನಶೀಲತೆಯನ್ನು ಕಳಚಿ, ಬದುಕಿಗಾಗಿ ಕಲೆ ಎಂಬ ವಾಸ್ತವವನ್ನು ಮನಗಾಣಿಸಿದವರು. ತನ್ನ ಕವನವನ್ನು ತನ್ನ ಜನರಿಗಾಗಿ ಮೀಸಲಿಟ್ಟವರು. ಬಡವರ ಕಣ್ಣೀರಿನ ಹಿನ್ನೆಲೆಯನ್ನು ತಮ್ಮ ಬರೆಹ-ಭಾಷಣ-ಬದುಕಿನಲ್ಲಿ ಅರಸುತ್ತಾ, ಅದರ ಕರಾಳ ಮುಖಗಳನ್ನು ಅನಾವರಣ ಮಾಡುತ್ತಾ ಅನ್ಯಾಯ-ಅಸಮಾನತೆ-ಶೋಷಣೆಗಳ ಅಂತರಾಳಕ್ಕೆ ಕನ್ನಡಿ ಹಿಡಿದವರು. ವ್ಯಷ್ಟಿಯಿಂದ ಸಮಷ್ಟಿಯೆಡೆಗೆ ಒಂದು ಕಾಲದ ಸಾಹಿತ್ಯವನ್ನು ಕರೆದೊಯ್ದವರು. ನಿಜಕ್ಕೂ ಸಿದ್ಧಲಿಂಗಯ್ಯನವರು ‘ಗುಡಿಸಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ ; ಕತ್ತಲೆಯಲ್ಲಿ ಕಂಡ ಬೆಳಕು ಬಂಡಾಯ.’


ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆಯವರು. ಕನ್ನಡ ಪ್ರಾಧ್ಯಾಪಕರಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಕಣ್ಣಾಗಿದ್ದವರು. ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ಮಾನವತೆಯ ಸದಾಶಯಗಳನ್ನು ಸಾರಿದವರು. ವ್ಯಕ್ತಿಯಾಗಿ ಅತ್ಯುತ್ತಮ ಹೃದಯಸಂಪನ್ನ ಗುಣಗಳಿಂದ ಎಲ್ಲರಿಗೂ ಸ್ನೇಹಜೀವಿಯಾದವರು. ಅವರನ್ನು ಭೇಟಿ ಮಾಡಿದ ಯಾರಿಗೂ ಅಂಥ ರೋಷಭೀಷಣವೇ ಸ್ಥಾಯಿಯಾಗುಳ್ಳ ಕವಿತೆಗಳನ್ನು ರಚಿಸಿದವರು ಇವರೇನಾ? ಎಂದಚ್ಚರಿ ಮೂಡುತ್ತಿದ್ದುದು ಖಂಡಿತ. ಅಂಥ ಸಂದರ್ಭದಲ್ಲಿ ಇವರು ಬರೆದ ಭಾವಗೀತೆ ಮತ್ತು ಚಿತ್ರಗೀತೆಗಳನ್ನು ನೆನಪಿಸಿಕೊಂಡು ಹೌದು, ಇವರೇ ಆ ಸಿದ್ಧಲಿಂಗಯ್ಯನವರು ಎಂದು ಖಚಿತಪಡಿಸಿಕೊಳ್ಳುತ್ತಿದ್ದರು.


ದೊಡ್ಡವರನ್ನು ಕಾಣಲು ಸಂಕೋಚಿಸುವ ಮತ್ತು ವಿಪರೀತ ದೊಡ್ಡವರನ್ನು ಕಾಣಲು ಇಷ್ಟಪಡದ ನನ್ನಂಥ ಮುದುಡು ಮನಸ್ಸುಗಳಿಗೂ ಸಿದ್ಧಲಿಂಗಯ್ಯನವರು ತಮ್ಮ ಅಪರಿಮಿತವೂ ಸಾಂದರ್ಭಿಕವೂ ಆದ ಹಾಸ್ಯಮಯ ಮಾತುಗಳಿಂದಾಗಿ ಇಷ್ಟವಾಗುತಿದ್ದರು! ಪ್ರಾರಂಭದಲ್ಲಿ ತೀರಾ ಗಂಭೀರವಾಗಿ ಕವನಿಸಿದ ಇವರು ಯಾವುದೋ ಹಂತದಲ್ಲಿ ವೈನೋದಿಕ ನೆಲೆಗೆ ಜಾರಿದರು ಎಂದೇ ಬಹಳ ಮಂದಿ ಮಾತಾಡಿಕೊಳ್ಳುತಿದ್ದರು. ಈ ಮಾತು ಅವರನ್ನು ಕುರಿತ ಕಂಪ್ಲೆಂಟೋ ಕಾಂಪ್ಲಿಮೆಂಟೋ ತಿಳಿಯದೆ ನಾನಂತೂ ಗೊಂದಲಗೊಂಡಿದ್ದು ಸತ್ಯ. ಆಕಸ್ಮಿಕವಾಗಿ ಅವರನ್ನು ಕಂಡು ಮಾತಾಡಿದ ಸಂದರ್ಭದಲ್ಲಿ ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದದ್ದು ಕೂಡ ಅಷ್ಟೇ ಸತ್ಯ!


ಒಮ್ಮೆ ಬೆಂಗಳೂರಿನಲ್ಲೂ ಮತ್ತೊಮ್ಮೆ ಮೈಸೂರಿನಲ್ಲೂ ಅವರನ್ನು ಕಂಡು ಮಾತನಾಡುವ ಅವಕಾಶ ನನಗೆ ಲಭಿಸಿದ್ದು ಈಗ ಇತಿಹಾಸ. ಆಗೆಲ್ಲ ಅವರ ನುಡಿ ನಡಾವಳಿಗಳು ತುಂಬಿದ ಕೊಡ ಎಂದೇ ಬಿಂಬಿತಗೊಂಡು ಪ್ರೀತಿ ಮತ್ತು ಗೌರವಗಳಿಗೆ ಮತ್ತೊಂದು ಹೆಸರಾದರು. ಎಲ್ಲ ಚಳವಳಿಗಳ ಮೂಲ ಆಶಯವೇ ಮಾನವತೆ ಮತ್ತು ಸಹೃದಯತೆಗಳ ಅನಾವರಣ ಎಂಬುದನ್ನು ಖಚಿತವಾಗಿ ನಂಬಿದ್ದ ಶ್ರೀಯುತರು ವ್ಯಕ್ತಿಯ ಜಾತಿ, ಅಂತಸ್ತುಗಳಾಚೆಗೆ ವಿಶ್ವಾಸ ತೋರುವ ನಿಜಮಾನವರಾಗಿದ್ದರು. ಸುಳ್ಳು, ಮೋಸ ಮತ್ತು ನಟನೆಗಳಿಲ್ಲದ ಸ್ವಚ್ಛ ಶುದ್ಧ ಅಂತಃಕರಣಿ ಎಂಬುದನ್ನು ಸಿದ್ಧಲಿಂಗಯ್ಯನವರನ್ನು ಸಮೀಪದಿಂದ ಬಲ್ಲ ಎಲ್ಲರಿಗೂ ವಿದಿತ.


ಶ್ರೀಯುತರು ಐದಾರು ಕವನ ಸಂಕಲನಗಳನ್ನೂ ಮೂರು ನಾಟಕಗಳನ್ನೂ ನಾಲ್ಕು ವಿಮರ್ಶನ ಕೃತಿಗಳನ್ನೂ ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಐದಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಊರುಕೇರಿ ಎಂಬುದಿವರ ಆತ್ಮಕತೆ. ಗ್ರಾಮದೇವತೆಗಳನ್ನು ಕುರಿತ ಸಂಶೋಧನೆಗೆ ಪಿಹೆಚ್‌ಡಿ ಪದವಿ. ಡಾ. ಬಿ ಆರ್ ಅಂಬೇಡ್ಕರ್ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿ, ಶ್ರೀಯುತ ರಾಮಮನೋಹರ ಲೋಹಿಯಾ ಕೃತಿಗಳ ಕನ್ನಡ ಭಾಷಾಂತರ ಮತ್ತು ಸಂಪಾದನಾ ಸಮಿತಿಗಳ ಸದಸ್ಯರಾಗಿ ಸಕ್ರಿಯರಾಗಿದ್ದವರು. ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳ ಸ್ಥಾಪಕ ಸದಸ್ಯರಾಗಿದ್ದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರಾಗಿದ್ದವರು. ಶ್ರವಣಬೆಳಗೊಳದಲ್ಲಿ ನಡೆದ ೮೧ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಲವು ಗೌರವ ಪ್ರಶಸ್ತಿಗಳಿಗೆ ಭಾಜರಾಗಿದ್ದವರು. 


ಕರ್ನಾಟಕದ ಅತ್ಯುನ್ನತ ಪ್ರಶಸ್ತಿಗಳಾದ ನೃಪತುಂಗ ಮತ್ತು ಪಂಪ ಪ್ರಶಸ್ತಿಗಳಿಗೆ ಭಾಜನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕರ‍್ಯ ನಿರ್ವಹಿಸಿದರು. ಒಡಲ ಯಾತನೆಗೆ ಅಕ್ಷರ ರೂಪ ನೀಡಿ, ಕ್ರಾಂತಿಕಿಡಿ ಹಚ್ಚಿದ ವಿಚಾರಶೀಲರು. ಎರಡು ಬಾರಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇವರು ಎಂಎಲ್‌ಸಿ ಆಗಿದ್ದಾಗ ಇವರೊಂದಿಗಿದ್ದ ಸ್ನೇಹಿತರೇ ಟೀಕೆ ಮಾಡಿದ್ದು ಕೂಡ ಯಾರೂ ಮರೆತಿಲ್ಲ. ವ್ಯವಸ್ಥೆಯನ್ನೇ ಪ್ರಶ್ನಿಸಿ ಕೊನೆಗೆ ಅದರ ಭಾಗವಾದರೆಂದು ಆಡಿಕೊಂಡರು. 


    ಎಲ್ಲದಕ್ಕೂ ಸಿದ್ಧಲಿಂಗಯ್ಯನವರದು ಮಾತು ಮತ್ತು ಮೌನಗಳ ನಡುವೆ ಮಿಂಚಿ ಮರೆಯಾಗುವ ಹಸನ್ಮುಖತೆಯೇ ಉತ್ತರವಾಗಿತ್ತು. ಆ ತರುವಾಯ ಈ ಕವಿಯು ಹೃದಯಂಗಮ ಭಾವಗೀತೆಗಳನ್ನು ಬರೆದು ಪ್ರಕಟಿಸಿದರು. ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಧರಣಿ ಮಂಡಲ ಮಧ್ಯದೊಳಗೆ ಎಂಬ ಚಲನಚಿತ್ರಕ್ಕೆ ಇವರು ಆದಿತ್ಯ ಎಂಬ ಹೆಸರಿನಲ್ಲಿ ಬರೆದ ಗೆಳತಿ ಓ ಗೆಳತಿ ಚಿತ್ರಗೀತೆಗೆ ರಾಜ್ಯ ಪ್ರಶಸ್ತಿ ದೊರಕಿತು. ಇವರ ಸುಪ್ರಸಿದ್ಧ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಎಂಬ ಭಾವಗೀತೆಯನ್ನು ಬಾ ನಲ್ಲೆ ಮಧುಚಂದ್ರಕೆ ಚಿತ್ರದಲ್ಲಿ ಅಳವಡಿಸಿಕೊಂಡರು.


ಹಾಗಾಗಿ ಇವರು ೧೯೭೫ ರ ವೇಳೆಗೆ ‘ಇಕ್ರಲಾ ವದೀರ್ಲಾ ಈ ನನ್ ಮಕ್ಕಳ ಚರ್ಮ ಎಬ್ರಲಾ, ದೇವ್ರು ಒಬ್ರೆ ಅಂತಾರೆ ಓಣಿಗೊಂದೊಂದು ತರಾ ಗುಡಿ ಕಟ್ಸವ್ರೆ’ ಎಂದು ಬರೆದಾಗ ಕನ್ನಡ ಸಾಹಿತ್ಯದ ಬಂಡಾಯ ದಲಿತ ಕಾವ್ಯ ಅಧಿಕೃತವಾಗಿ ಆರಂಭಗೊಂಡಿತು. ‘ಯಾರಿಗೆ ಬಂತು ಎಲ್ಲಿಗೇ ಬಂತು ನಲವತ್ತೇಳರ ಸ್ವಾತಂತ್ರ್ಯ’ ಎಂಬ ಹೋರಾಟದ ಹಾಡು ನಾಡಿನಾದ್ಯಂತ ಜನಜನಿತವಾಯಿತು. ಆದರೆ ಇಂಥ ಚೇತನವು ಕೊರೊನಾ ಸೋಂಕಿನಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡರೂ ಇನ್ನಿತರ ಆರೋಗ್ಯ ಸಮಸ್ಯೆಗಳಿಂದ ಬಳಲಿ ಇಹಲೋಕ ತ್ಯಜಿಸಿದರು ಎಂದು ಕೇಳಿದಾಗ ದುಃಖವಾಯಿತು. 


ಬೆಂಗಳೂರಿನ ಬಹು ದೊಡ್ಡ ಉದ್ಯಮಿಯೂ ಚಲನಚಿತ್ರ ಮತ್ತು ಟೀವಿ ಧಾರಾವಾಹಿಗಳ ನಿರ್ಮಾಪಕರೂ ಆದ ನನ್ನ ಅಣ್ಣ ಶ್ರೀಯುತ ರಾಮಚಂದ್ರ ದೇಗೂರು ಅವರು ಸಿದ್ಧಲಿಂಗಯ್ಯನವರ ಅಂತರಂಗದ ಸ್ನೇಹಿತರಾಗಿದ್ದವರು. ಸಿದ್ಧಲಿಂಗಯ್ಯನವರು ತುಂಬ ಸರಳ ಮತ್ತು ಹಾಸ್ಯಪ್ರಜ್ಞೆಯಿರುವ ಅಪರೂಪದ ಸಜ್ಜನ ಬಂಧು ಎಂದು ಹೇಳಿ, ಮುಂದಿನ ಬಾರಿ ಬಂದಾಗ ನಿನ್ನ ಮನೆಗೆ ಕರೆದುಕೊಂಡು ಬರುತ್ತೇನೆ ಎಂದಿದ್ದರು. ಕೊನೆಗೂ ಇದು ನೆರವೇರಲೇ ಇಲ್ಲ ಎಂದು ನೆನೆದಾಗ ಮನಸು ಮುದುಡುತ್ತದೆ. ಕೊನೆಗೆ ಅವರು ಬೇಗನೆ ಚೇತರಿಸಿಕೊಳ್ಳಲೆಂದು ಮೃತ್ಯುಂಜಯ ಜಪ ಮಾಡಿಸಿದ್ದು, ನನ್ನ ಅಣ್ಣನವರು ಅವರ ಮೇಲಿಟ್ಟಿದ್ದ ಅಭಿಮಾನ ಮತ್ತು ಪ್ರೀತಿಯ ದ್ಯೋತಕವಾಗಿ ಉಳಿಯಿತು.


ಶ್ರೀಯುತರು ಕ್ರಾಂತಿಯಿಂದ ಶಾಂತಿಗೆ ಜಿಗಿದವರು. ವ್ಯವಸ್ಥೆಯನ್ನು ಪ್ರಶ್ನಿಸಿದ ಮೇಲೆ ಅಧಿಕಾರದ ಗದ್ದುಗೆಯೇರಿ ಸದನದಲ್ಲಿ ಸದ್ದು ಮಾಡಿದರು. ಶಾಸನಸಭೆಯಲ್ಲಿ ಜನಸಾಮಾನ್ಯರ ನೋವು ದುಮ್ಮಾನಗಳನ್ನು ಮನದಟ್ಟು ಮಾಡಿಸಿ, ಅದೆಷ್ಟೋ ಶಾಸನಗಳ ಚರ್ಚೆಯಲ್ಲಿ ಪಾಲ್ಗೊಂಡು ಜನಪರವಾದರು. ಹೋರಾಟದ ಹಾಡುಗಳನ್ನು ಬರೆದಂತೆಯೇ ಸುಂದರ ಭಾವಗೀತೆಗಳನ್ನು ರಚಿಸಿದರು. ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವಷ್ಟು ಪ್ರಬುದ್ಧತೆಯನ್ನು ಹೊಂದಿದ್ದವರು. ತಮ್ಮ ಸ್ನೇಹಕೂಟವನ್ನು ಅವಿರತವಾಗಿ ಪ್ರೀತಿಸಿ, ತಮ್ಮ ಸಹಜ ಮತ್ತು ಆಕರ್ಷಕ ಮಾತುಗಾರಿಕೆಯಿಂದ ಆತ್ಮೀಯರಾದರು. ನೆಲದ ಮೇಲೆ ಕಾಲೂರಿಯೇ ಆಗಸದ ಅಗಾಧತೆಯನ್ನು ಅರ್ಥ ಮಾಡಿಸಲು ಪ್ರಯತ್ನಿಸಿದರು. ಬಹುತೇಕರು ಇವರ ಹಲವು ಆಯಾಮಗಳ ಬದುಕು ಮತ್ತು ಬರೆಹಗಳನ್ನು ಅರ್ಥ ಮಾಡಿಕೊಳ್ಳಲು ಸೋತರು. ತಮ್ಮಿಷ್ಟದಂತೆಯೇ ಒಬ್ಬ ಕವಿ ಬದುಕಬೇಕೆಂದು ಒತ್ತಾಯಿಸುವ ಇಸಂ ವ್ಯಸನೀ ವಿದ್ವಾಂಸರಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಬದುಕಿನ ವೈಶಾಲ್ಯ ಮತ್ತು ನೈರ್ಮಲ್ಯಗಳನ್ನು ಕುರಿತು ಧ್ಯಾನಿಸದವರಿಗೆ ಸಿದ್ಧಲಿಂಗಯ್ಯನವರು ಯಾವತ್ತೂ ಅರ್ಥವಾಗುವುದಿಲ್ಲ ಎಂದೇ ನಾನು ವಿನಮ್ರವಾಗಿ ಅಷ್ಟೇ ಖಚಿತವಾಗಿ ಹೇಳಬಯಸುವೆ. ಇವರು ಬರೆದ ‘ಏಕಲವ್ಯ’ ನಾಟಕವನ್ನು ಮತ್ತೆ ಮತ್ತೆ ಓದಿದರೆ ಒಂದಂತೂ ಮನನವಾಗುವುದು ಖಂಡಿತ. 


        ಯಾರನ್ನೋ ಯಾವುದನ್ನೋ ಬಯ್ಯುತ್ತಾ ಕೂರುವ ಬದಲು ನನ್ನೊಳಗಿನ ಅನಂತ ಸೃಷ್ಟಿಶೀಲ ಸಾಧ್ಯತೆಗಳನ್ನು ನಿರಂತರವಾಗಿ ಶೋಧಿಸುತ್ತಾ ಅಂತಸ್ಸತ್ವವನ್ನು ಹೆಚ್ಚು ಮಾಡಿಕೊಳ್ಳುತ್ತಾ ಮನುಷ್ಯ ಘನತೆಯನ್ನು ಸಾಧಿಸಬೇಕು. 


        ಇನ್ನು ಅವರ ತುಂಬು ಜೀವನವನ್ನು ಅವಲೋಕಿಸಿದರೆ ಅನಿಸುವುದಿಷ್ಟು: ಇರುವಷ್ಟು ದಿವಸ ಸ್ನೇಹ ಪ್ರೀತಿಗಳಿಂದ ಜೀವಿಸಿದರೆ ಎಂಥವರೂ ಬದಲಾಗುವರು ಎಂಬುದು. ‘ಒಲವಿಗೆ ಒಲವಲ್ಲದೆ ಬೇರೇನಿದೆ ಕೊಡುಗೆ’ ಎಂದಿಲ್ಲವೇ ಒಲುಮೆಯ ಕವಿ ಕೆಎಸ್‌ನ ಅವರು. ಭಗವಂತನು ಅವರ ಆತ್ಮಕೆ ಚಿರಶಾಂತಿಯನು ನೀಡಲೆಂದು ಪ್ರಾರ್ಥಿಸುವೆ.

ವಿಚಾರಪ್ರಜ್ಞೆ ಪತ್ರಿಕೆಯಲಿ ಪ್ರಕಟ

೧೪-೦೬-೨೦೨೧          ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು


0 Comments:

Post a Comment

Subscribe to Post Comments [Atom]

<< Home