Tuesday 20 March 2012

ಎನ್ ಎಸ್ ಎಸ್ ಶಿಬಿರದ ಉಪನ್ಯಾಸ - ವಿತರಿಸಿದ ಸಾರಲೇಖ


ದಿನಾಂಕ 16-03-12 ರಿಂದ 22-03-12 ರ ವರೆಗೆ ಕೃಷ್ಣರಾಜನಗರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜನಗರ ಟೌನ್- ಈ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರದಲ್ಲಿ ದಿನಾಂಕ: 17-03-2012 ರ ಶನಿವಾರದಂದು



  ‘ಯುವಜನತೆ ಮತ್ತು ನಾಗರಿಕ ಪ್ರಜ್ಞೆ’
  ಎಂಬ ವಿಶೇಷೋಪನ್ಯಾಸದ ಸಾರಾಂಶಸೂಚಿ

·        ಮನುಷ್ಯರಾಗುವುದು ಸುಲಭ; ನಾಗರಿಕ ಮನುಷ್ಯರಾಗುವುದು ಕಷ್ಟ

·        ನಗರದಲ್ಲಿರುವವರೆಲ್ಲ ನಾಗರಿಕರಲ್ಲ; ನಗರದಲ್ಲಿಲ್ಲದ ಮಾತ್ರಕ್ಕೆ ಅನಾಗರಿಕರಲ್ಲ

·        ಒಂದು ದೇಶದ ನಿಜವಾದ ಮಾನವ ಸಂಪನ್ಮೂಲವೆಂದರೆ ಅರಿತು ನಡೆಯುವ-ದುಡಿದು ತಿನ್ನುವ ಯುವಜನತೆ

·    ನಾಗರಿಕ ಪ್ರಜ್ಞೆಯಿಂದ ಬದುಕುವ ಮತ್ತು ಇತರರು ಬದುಕಲು ಅವಕಾಶವೀಯುವ
     ಯುವಸಮೂಹವೇ ದೇಶ ಕಟ್ಟುವ ಕಾರ‍್ಯಪಡೆ



·        ನಗರ>ನಾಗರಿಕತೆ>ನಾಗರಿಕ ಪ್ರಜ್ಞೆ, ‘ಪ್ರಜ್ಞೆ’ ಪದದ ಅರ್ಥವೈಶಾಲ್ಯ: ಮತಿವಂತ ಮಾನವರಲ್ಲಿರಬೇಕಾದ ತಿಳಿವಳಿಕೆ



·        ನಾಗರಿಕ ಹಕ್ಕುಗಳು ಬೇರೆ; ನಾಗರಿಕ ಪ್ರಜ್ಞೆ ಬೇರೆ! ನಾಗರಿಕ ಹಕ್ಕುಗಳು ಇನ್ನೊಂದರಿಂದ/ಇನ್ನೊಬ್ಬರಿಂದ ಕೊಡಮಾಡಲ್ಪಟ್ಟವು. ನಾಗರಿಕಪ್ರಜ್ಞೆಯು ಇನ್ನೊಂದರಿಂದ/ಇನ್ನೊಬ್ಬರಿಂದ ಕೊಡಮಾಡಲ್ಪಡುವುದಿಲ್ಲ. ನಾವೇ ನಂನಮ್ಮ ವಿವೇಕ-ವಿವೇಚನೆ-ಔಚಿತ್ಯಗಳನ್ನರಿತು ‘ನಡೆ’ದುಕೊಳ್ಳುವುದು. ಇದು ಹಕ್ಕಲ್ಲ, ಆದ್ಯಕರ್ತವ್ಯ.

·        ‘ಕರ್ತವ್ಯಗಳನ್ನು ಮರೆತವರು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ’ ಈ ಮಾತುಗಳ ಮನನ, ಸ್ಪಷ್ಟನ, ಧಾರಣ



ಎಲ್ಲಿ? ಏನನ್ನು? ಯಾರು? ಮಾಡಬಾರದ್ದನ್ನು ಮಾಡಿದರೆ ಅದು ನಾಗರಿಕ ಪ್ರಜ್ಞೆಯಲ್ಲ! ನೀತಿ-ನಿಯಮ-

ಕಾನೂನು-ಮನವಿಗಳನ್ವಯ ಮಾಡಬೇಕಾದ್ದನ್ನು ಮಾಡದಿದ್ದರೂ ಅದು ನಾಗರಿಕ ಪ್ರಜ್ಞೆಯಲ್ಲ!!



·        ನಾಗರಿಕ ಪ್ರಜ್ಞೆ ಎಂಬುದಕ್ಕೆ ಜಾತಿ-ವರ್ಗ-ಲಿಂಗಭೇದಗಳಿಲ್ಲ! ಅಧಿಕಾರಿ-ಸೇವಕ ಎಂಬ ತರತಮಗಳಿಲ್ಲ; ರಾಜ್ಯ-ಕೋಶ-ದೇಶಗಳ ಹಂಗಿಲ್ಲ!!



ಅಕ್ಷರಸ್ಥ-ಅನಕ್ಷರಸ್ಥರೆಂಬ, ತಿಳಿದವರು-ತಿಳಿಯದವರು ಎಂಬ ವ್ಯತ್ಯಾಸವಿಲ್ಲ. ಭಾರತೀಯ ಪ್ರಜೆಯಾದ ನಾವು ದೇಶದ ಕಾನೂನನ್ನು ಗೌರವಿಸುವುದು; ಸಂವಿಧಾನಾತ್ಮಕ ನೀತಿ-ನಿರ್ಣಯ-ನಿರೂಪಗಳನ್ನು ಅರ್ಥಮಾಡಿಕೊಂಡು ಸಹಕರಿಸುವುದು ನಾಗರಿಕ ಪ್ರಜ್ಞೆ ಎಂಬುದರ ಬಾಹ್ಯಸ್ವರೂಪ



·        ಇದರಾಚೆಗೆ ಅಥವಾ ಈಚೆಗೆ, ನಮ್ಮ ವೈಯಕ್ತಿಕ ಮತ್ತು ಸಾಮುದಾಯಿಕ ಜೀವನದಲ್ಲಿ ಅಳವಡಿಸಿಕೊಂಡು, ಅದರಂತೆ ನಡೆಯುವ ಎಲ್ಲ ಪ್ರಜ್ಞಾಪೂರ್ವಕ ಚಟುವಟಿಕೆಗಳು ನಾಗರಿಕ ಪ್ರಜ್ಞೆಯ ಆಂತರಿಕ ರೂಪ.



·        ನಾಗರಿಕ ಪ್ರಜ್ಞೆಯ ಕಾರ‍್ಯ ಚಟುವಟಿಕೆಯು ಒಂದು ಸಮಾಜದ ಯೋಗ್ಯತೆ-ಅರ್ಹತೆಗಳನ್ನು ತಿಳಿಯುವ ಅಳತೆಗೋಲು. ಸಮಾಜದ ಸಂಸ್ಕಾರವದು. ಅರಿತವರಿಂದ ಅಂಗೀಕಾರವಾದರೆ ಈ ಪ್ರಜ್ಞೆಯೇ ಮೌಲ್ಯವಾಗುತ್ತದೆ. ನಾಗರಿಕ ಪ್ರಜ್ಞೆಯು ನಾಗರಿಕ ಮೌಲ್ಯವಾದರೆ ಮಂದಿಯ ಮತಿಯೇ ಆದರೆ ಅದು ಆದರ್ಶ ನಾಗರಿಕತೆ; ಅವರು ಆದರ್ಶ ನಾಗರಿಕರು. ನಾಗರಿಕ ಮೌಲ್ಯಗಳು ಸಾಮಾಜಿಕ ಆಯಾಮವನ್ನು ಹೊಂದಿಯೇ ಇರುತ್ತವೆ. ಇವಕ್ಕೆ ಮಾನವೀಯ ಗುಣಗಳು ಸೇರ್ಪಡೆಗೊಂಡಾಗ ‘ದಾನವ’ರು ನಿಜಮಾನವರಾಗುವರು. ನೈತಿಕವೂ ಧಾರ್ಮಿಕವೂ ಆದ ಸದಾಚಾರಗಳು ಒಳಗೊಂಡಾಗ ಅದುವೇ ದೇವರ ರಾಜ್ಯ. ಇದು ಆದರ್ಶ. ‘ಎತ್ತರಗಳಿರುವುದು ಎಲ್ಲರೂ ಹತ್ತುತ್ತಾರೆಂದಲ್ಲ; ಎಲ್ಲರೂ ಹತ್ತಬೇಕೆಂದು’- ಕುವೆಂಪು.



·            ಇದು ಪ್ರಾಚೀನ ಗ್ರೀಕ್ ತತ್ತ್ವಜ್ಞಾನಿ  ಪ್ಲೇಟೊವಿನಿಂದ ಹಿಡಿದು, ಅರ್ವಾಚೀನ ತತ್ತ್ವವಿಜ್ಞಾನಿ ಡಾ. ಅಬ್ದುಲ್ ಕಲಾಂ ವರೆಗೆ ಚರ್ಚೆಯಾಗಿದೆ, ವಿಚಾರ ಮಂಡಿತವಾಗಿದೆ. ವ್ಯಾಖ್ಯಾನಕ್ಕೆ ಪಕ್ಕಾಗಿದೆ. ಪ್ಲೇಟೊ ತನ್ನ ‘ಯುಟೋಪಿಯ’ ಆದರ್ಶರಾಜ್ಯದಲ್ಲಿ ಕವಿಗಳಿಗೆ ಸ್ಥಾನ ನೀಡುವುದಿಲ್ಲ. ಏಕೆಂದರೆ ಅವರು ನಾಗರಿಕ ಪ್ರಜ್ಞೆಯ ವಿರೋಧಿಗಳು. ಸಮಾಜವನ್ನು ಅಸ್ವಸ್ಥಗೊಳಿಸುತ್ತಾರೆ! ಆದರೆ ಮುಂದೆ ಬಂದ ಅರಿಸ್ಟಾಟಲ್ ಈ ತಪ್ಪು ಭಾವನೆಯನ್ನು ತಿದ್ದುತ್ತಾನೆ. ಕವಿಗಳೇ ನಾಗರಿಕ ಪ್ರಜ್ಞೆಯ ರೂವಾರಿಗಳು ಎಂದು ತನ್ನ ಗುರುವಿನಿಂದ ಆದ ಲೋಪವನ್ನು ಸರಿಪಡಿಸುವನು. ಏಸು, ಬುದ್ಧ, ಮಹಾವೀರ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಜೇಪಿ, ಕುವೆಂಪು, ಕಾರಂತ, ಅಬ್ದುಲ್ ಕಲಾಂ, ಅಣ್ಣಾಹಜಾರೆ........ಹೀಗೆ ನಮ್ಮ ಭಾರತದ ಮಂದಿ ಮಾನಸದಲ್ಲಿ ನಾಗರಿಕ ಪ್ರಜ್ಞೆ ಒಡಮೂಡಿಸಲು ಬೇರೆ ಬೇರೆ ರೀತಿಗಳಲ್ಲಿ ಸತತ ಪ್ರಯತ್ನ ಮಾಡಿದ್ದಾರೆ. ಬರೆಹ-ಭಾಷಣ-ಸಂಕಿರಣ ಮುಂತಾದ ಬಹು ಮಾಧ್ಯಮಗಳ ಮೂಲಕ.



·        ಯುವಜನತೆಯಲ್ಲಿ ನಾಗರಿಕ ಪ್ರಜ್ಞೆ ಕಣ್ಮರೆಯಾಗುತ್ತಿದೆಯೇ? ಅಥವಾ ಕಡಮೆಯಾಗುತ್ತಿದೆಯೇ? ಅಥವಾ ಯುವಜನತೆಯ ಪ್ರಯತ್ನದಿಂದಲೇ ನಾಗರಿಕ ಪ್ರಜ್ಞೆ ವಿಕಾಸಗೊಳ್ಳುತ್ತಿದೆಯೇ?? ಇದು ಚರ್ಚೆಯ ವಿಚಾರ. ಕೇವಲ ಅಂಕಿಅಂಶಗಳಿಂದ ಇವನ್ನು ವಾದಿಸಲು ಹೊರಡಬಾರದು. ನಂನಮ್ಮ ಆಂತರ‍್ಯವನ್ನು ಕೇಳಿಕೊಳ್ಳಬೇಕು.



·        ಏನು ಕಾಲವೋ ಏನೋ? ನಮ್ಮ ಕಾಲದಲ್ಲಿ ಎಂಥ ನಿಯತ್ತು, ಅದಕ್ಕನುಗುಣವಾದ ಬರ್ಕತ್ತು ಎಂದು ಹಿರಿಯರು ಬಡಬಡಿಸಲಿ, ಅಡ್ಡಿಯಿಲ್ಲ. ಆದರೆ ಎಲ್ಲವೂ ಬದಲಾಗುವಂತೆ ನಾಗರಿಕತೆಯೂ ಹೊಸ ಆಯಾಮ ಪಡೆಯುತ್ತಿರುತ್ತದೆ. ಈಗ ಬೀದಿನಲ್ಲಿಯೂ ಇಲ್ಲ, ಬೀದಿನಲ್ಲಿ ಜಗಳವೂ ಇಲ್ಲ. ಆದರೆ ಅಪಾರ್ಟ್‍ಮೆಂಟ್/ಫ್ಲಾಟ್‍ಗಳಲ್ಲಿ ವಾಸಿಸುವ ನಾಗರಿಕರಿಗೆ ಹೊಸ ಜವಾಬ್ದಾರಿಗಳಿವೆ.



·        ಅತಿ ನಾಗರಿಕತೆಯ ಶಾಪ; ವಿವೇಚನಾರಹಿತ ವೇಗದ ಹಾದಿ, ಹಣದ ಬೆನ್ನೇರಿದವರಲ್ಲಿ ನೀತಿಯುಕ್ತ ಮೌಲ್ಯಗಳ ಕೊರತೆ, ಹಿರಿಯರಲ್ಲೇ ಅನುಕರಣೀಯ ವ್ಯಕ್ತಿತ್ವಗಳಿಲ್ಲದಿರುವುದು. ಜೀವನದಲ್ಲಿ ಶಿಸ್ತು-ಪ್ರಾಮಾಣಿಕತೆ-ಪಾರದರ್ಶಕತೆ-ಸಾಮಾಜಿ ಎಚ್ಚರಗಳಿಲ್ಲದಿರುವುದು, ವಿಪರೀತ ಸ್ವಾರ್ಥದಿಂದಾಗಿ ಸಹಬಾಳ್ವೆಯತ್ತ ಆಸಕ್ತಿಯಿಲ್ಲದಿರುವುದು, ಶಿಕ್ಷಣದಿಂದ ಕಲಿತದ್ದನ್ನು ಬದುಕಿನಲ್ಲಿ  ಅಳವಡಿಸಿಕೊಳ್ಳಲಾಗದಿರುವ ಅಸಹಾಯಕತೆ, ಇತ್ಯಾದಿಗಳಿಂದ ನಾಗರಿಕ ಪ್ರಜ್ಞೆ ಮೂಲೆಗುಂಪಾಗಿರುವುದಂತೂ ದಿಟ. 



       ಯಾವುದು ನಾಗರಿಕ ಪ್ರಜ್ಞೆ? 1. ವ್ಯಕ್ತಿಯ ನೆಲೆಯಲ್ಲಿ (ಮನೆ) 2. ಸಮುದಾಯದ ನೆಲೆಯಲ್ಲಿ   (ಶಿಕ್ಷಣ ಸಂಸ್ಥೆ, ಸಭೆ-  ಸಮಾರಂಭ, ರಸ್ತೆ, ಪ್ರಯಾಣ ಇತ್ಯಾದಿ)



  ·        ನೀರು, ವಿದ್ಯುತ್ ಬಳಕೆಯಲ್ಲಿ ಎಚ್ಚರ, ಮಿತವ್ಯಯ

ತೆರಿಗೆ/ಕಂದಾಯ/ಯಾವುದೇ ವಿಮಾ ಪಾಲಿಸಿಮೊತ್ತ ಇತ್ಯಾದಿಗಳ ಸಕಾಲ ಪಾವತಿ

ಹಾಡುವ-ಕೇಳುವ-ನೋಡುವ ಸಮಯ ಮತ್ತದರಲ್ಲಿ ಪಾಲಿಸಬೇಕಾದ ಸೌಜನ್ಯ/ಔಚಿತ್ಯ

ಕಸ: ವಿಲೇವಾರಿ, ನೆರೆಯು ಹೊರೆಯಾಗದಂತೆ ಬದುಕುವ ಕೌಶಲ್ಯ

ಸೌಜನ್ಯದ ಎಲ್ಲೆ ಮೀರದ ಮಾತು, ವರ್ತನೆ



·        ಮೊಬೈಲ್ ಫೋನ್ ಬಳಕೆ: ಮಾತಾಡುವ ಶೈಲಿ, ಇಟ್ಟುಕೊಳ್ಳುವ ರಿಂಗ್‍ಟೋನ್, ಬಳಸುವ ವಿಧಾನದಲ್ಲಿ ಶಿಷ್ಟಾಚಾರ



·        ವಾಹನ ತರುವಾಗ, ನಿಲ್ಲಿಸುವಾಗ, ಓಡಿಸುವಾಗ, ರಸ್ತೆಯಲ್ಲಿ ನಿಂತು ಮಾತಾಡುವಾಗ

ಸರದಿ (ಕ್ಯೂ) ಪಾಲಿಸುವುದು, (ಒಬ್ಬರಿದ್ದರೂ!)

ಎಲ್ಲೆಂದರಲ್ಲಿ ಕಸ ಹಾಕುವುದು, ಥೂಕರಿಸುವುದು, ಅವಾಚ್ಯ ಪದಗಳ ಬಳಕೆ, ವಸ್ತು/ಪದಾರ್ಥಗಳನ್ನು ತಟಕ್ಕನೆ ಇನ್ನೊಬ್ಬರ ಕೈಯಿಂದ ಕಿತ್ತುಕೊಳ್ಳುವುದು,  ಇನ್ನೊಬ್ಬರು ಮಾತಾಡುವಾಗ ಮಧ್ಯೆ ಬಾಯಿ ಹಾಕದಿರುವುದು, ಪರಿಸರ ಕಾಳಜಿಯಿಲ್ಲದಿರುವುದು ಇತ್ಯಾದಿ



·        ಸಭೆ-ಸಮಾರಂಭಗಳಲ್ಲಿ ಮಾತಾಡುವಾಗ ಸಮಯಪ್ರಜ್ಞೆ, ಮೈಕ್‍ನ ಸೆನ್ಸ್, ಮೈಕೈ ಸೆನ್ಸ್ ಇತ್ಯಾದಿ

ಸಾರ್ವಜನಿಕ ವಾಹನಗಳಲ್ಲಿ/ನಿಲ್ದಾಣಗಳಲ್ಲಿ ನಡೆದುಕೊಳ್ಳುವುದು, ಕಸ ಹಾಕದಿರುವುದು,

ಟಿಕೇಟುಸಹಿತ ಪ್ರಯಾಣ,

ಯಾವುದೇ ಸಂಸ್ಥೆ/ಕಛೇರಿ/ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿರುವ ಮಾಹಿತಿ/ಮನವಿ/ಎಚ್ಚರಿಕೆ/ಸೂಚನೆಗಳನ್ನು ನಾವು ನೈಜ ವಿದ್ಯಾವಂತರಾದರೆ ಮೊದಲು ಓದುವುದು, ಅದರಂತೆ ವರ್ತಿಸುವುದು.

ಇನ್ನೂ ಮುಂತಾದವು.  


            ನಾವು ವಿದ್ಯಾವಂತರಾದರೆ ಸಾಲದು; ವಿದ್ಯಾವಂತ ನಾಗರಿಕರಾಗೋಣ; ಉಳಿದವರಿಗೆ ಮಾದರಿಯಾಗೋಣ

0 Comments:

Post a Comment

Subscribe to Post Comments [Atom]

<< Home