Friday 18 May 2012

ಜಪದ ಕಟ್ಟೆಗೆ ನನ್ನಾರತಿ ತಟ್ಟೆ


ಜಪದ ಕಟ್ಟೆಗೆ ನನ್ನಾರತಿ ತಟ್ಟೆ **











ಬುದ್ಧರಂಥ

ಸಂತಗಿಂಥ


ಇದ ಕಂಡಿದ್ದರೆ


ಇನ್ನಷ್ಟು ಸಮೃದ್ಧ-ಸಂಬುದ್ಧ ರಾಗುತಿದ್ದರು!




ಬರಿದೇ ಬಯಲಲಿ ಹರಿವ ನೀರ ಶುಭ್ರಕೆ


ಹಸಿರು ರಾಚಿದ ಮೌನಕೆ


ಮಾತಾಗುತಿರಲಿಲ್ಲ; ಮಣಿಯಾಗುತಿದ್ದರು




ಕಟ್ಟೆಗುಂಟ ಬೆಳೆದ ಮಕಮಲ್ಲ ಹುಲ್ಲಲಿ ಕುಂತು


ಹಡೆದ ಮಣಿಗಳ, ಒಡೆದ ಮನಗಳ ಇಡಿಯಾಗಿಸುತಿದ್ದರು


ಕೊನೆಗೆ ಜಪವ ಮರೆಯುತಿದ್ದರು; ತಪವ ತೊರೆಯುತಿದ್ದರು!


ನೀರೆದುರು ಇನ್ನೂ ಇರುವ ತಲೆಭಾರವ ತೊರೆದು ಆಗುತಿದ್ದರು,


ಆಗುವ ಪರಿಯ ಅರಿತು ಅರಿವಾಗುತಿದ್ದರು!!




ಕಾಂಕ್ರೀಟು ಕಾಲಿಡದ ಕನ್ನೆನೆಲ


ಕಾಳುಕಡ್ಡಿ ಕೈಗೂಡದ ಶಿಲಾಜಲ


ಹಾಗೇ ಭೂರಮೆ ತಿರುಗಾಟಕೆ ಬಂದು ಸುಸ್ತಾಗಿ ಅಷ್ಟೇ ಶಿಸ್ತಾಗಿ


ಕಣ್ಣರೆಪ್ಪೆಯನೊಂದು ಮಾಡಿ ಇಲ್ಲಿ ನಿದ್ದೆ ಹೋಗಿರುವಳು,        


ಕಾವೇರಿ ಕಲರವಕೆ-ಬಾನಾಡಿ ಜೋಗುಳಕೆ!


ಇದ ನಾವು ಎಚ್ಚರದಿಂದ ಕಾಣಬೇಕು, ಕಣ್ಣಬಿಟ್ಟು!!




ಸದ್ದಿಗೆ, ಸುದ್ದಿಗೆ ಜಾಗವಲ್ಲ


ಮನೋಶಕ್ತಿಗೆ-ಜಂಜಡ ಮುಕ್ತಿಗೆ ಸೋಪಾನ


ಇದರೊಂದೊಂದೇ ಮೆಟ್ಟಲು, ಭಗವಂತನ ಮುಟ್ಟಲು.




ಇಳಿದು ಕುಳಿತು ಕಣ್ಣೆವೆ ಮುಚ್ಚುವೆಯೊ


ಹೆದರಿ ಮೇಲೇರಿ ಓಡಿ ಬರುವೆಯೊ?


ಆಯ್ದುಕೊ, ಕಟ್ಟೆಗಾತುನಿಂತುಕೊ.


ಗುರಿ-ದಾರಿಗಳೆರಡೂ ಒಂದಾದ ಅದ್ವೈತ ಮಾತ್ರ ಇಲ್ಲಿಯದು, ನೆನಪಿಟ್ಟುಕೊ.


               ---------------------------------------------------------------
** ಕೃಷ್ಣರಾಜನಗರ ತಾಲೂಕಿನ ಮೈಸೂರು ಜಿಲ್ಲೆ ಮುಗಿವ ಗಡಿಭಾಗದ ಊರು ಹೆಬ್ಸೂರು. ಇಲ್ಲಿಂದ ಪಕ್ಕಕ್ಕೆ ಎತ್ತಿಟ್ಟಂತಿರುವ ಕಲ್ಲುಗುಡ್ಡದ ಕಣಿವೆ ಕಾವೇರಿಯು ಬಲಭಾಗಕೆ ತಿರುಗುವಾಗ ಏರ್ಪಟ್ಟ ಕಟ್ಟೆ ಜಪದ ಕಟ್ಟೆ. ನಿಸರ್ಗದ    ಸದ್ದಿಲ್ಲದ ಪವಾಡ ಈ ಬಲದೊರೆ!    ಇಲ್ಲಿಗೆ 13-05-2012 ರ ಭಾನುವಾರ ನನ್ನ ಮಗ  (ಚಾರು) ಮತ್ತು  ಮಡದಿ ಕೋಮಲರೊಂದಿಗೆ ಹೋಗಿ ಬಂದ ಘಳಿಗೆಗೆ ನನ್ನೊಳಗಿನ ಕವಿಮನ ಹೀಗೆ ಮುಲುಕಾಡಿದ ಬಗೆ.           

0 Comments:

Post a Comment

Subscribe to Post Comments [Atom]

<< Home