Saturday 31 March 2012

ಬಸವಣ್ಣನವರ ದೇವರು-ಶಾರ್ಟ್ ನೋಟ್


ಬಸವಣ್ಣನವರ ದೇವರು- ರಂಜಾನ್ ದರ್ಗಾ

(ಕೃತಿಯ ಸಂಗ್ರಹ ಸಿದ್ಧಪಾಠ)




ವಿಚಾರ ಸಾಹಿತ್ಯದಡಿಯಲ್ಲಿ ರಚಿತವಾದ ಬಸವಣ್ಣನವರ ದೇವರು ಎಂಬ ಕೃತಿಯು 2005 ರಲ್ಲಿ ಮೊದಲ ಮುದ್ರಣವನ್ನು ಕಂಡಿತು. ಇದರ ಲೇಖಕರಾದ ರಂಜಾನ್ ದರ್ಗಾ ಅವರು ಪತ್ರಿಕೋದ್ಯಮ ಸಾಹಿತಿ ಮತ್ತು ಕವಿಗಳು. ಪ್ರಜಾವಾಣಿ ಪತ್ರಿಕೆಯಲ್ಲಿ ಬಹಳಷ್ಟು ವರ್ಷಗಳ ಕಾಲದಿಂದ ವೃತ್ತಿನಿರತರು. ಬಳ್ಳಾರಿಯ ಲೋಹಿಯಾ ಪ್ರಕಾಶನದವರು ವಿಶ್ವಾಸವಿಟ್ಟು ಕೇಳಿ ಬರೆಸಿ, ಪ್ರಕಟಿಸಿದ ಪುಸ್ತಕವಿದು. ಈ ಹಿಂದೆ ಇದೇ ಲೇಖಕರು ಬರೆದ ‘ಬಸವಪ್ರಜ್ಞೆ’ ಎಂಬ ಕೃತಿ ಓದುಗರ ಮತ್ತು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ.



ಐವತ್ತು ಪುಟಗಳ ಈ ಕೃತಿಯಲ್ಲಿ ಬಹಳ ಮುಖ್ಯವಾಗಿ ಬಸವಣ್ಣನವರ ವಚನಗಳ ಮೂಲಕ ಕಂಡರಿಸಿಕೊಂಡ ದೈವಪ್ರಜ್ಞೆಯನ್ನು ಸಾದ್ಯಂತ ವಿವರಿಸಲಾಗಿದೆ. ಹೀಗೆ ಮಾಡುವಾಗ ನಿರ್ದಿಷ್ಟವಾದ ಕೆಲವೊಂದು ಅಧ್ಯಾಯಗಳನ್ನು ರಚಿಸಿಕೊಳ್ಳಲಾಗಿದೆ. ಐದು ಅಧ್ಯಾಯಗಳಲ್ಲಿ ವ್ಯವಸ್ಥಿತವಾಗಿ ನಿರ್ಮಿಸಿಕೊಂಡು, ಅರ್ಥಪೂರ್ಣವಾದ ಶೀರ್ಷಿಕೆಗಳನ್ನು ನೀಡಲಾಗಿದೆ. ಮೊದಲ ಅಧ್ಯಾಯದಲ್ಲಿ ಕೃತಿಯಲ್ಲಿ ಪ್ರಸ್ತಾಪಿತವಾದ ಮುಖ್ಯಸಂಗತಿಗಳಿಗೆ ಪೀಠಿಕೆಯನ್ನು ತಿಳಿಸಲಾಗಿದೆ. ಪುಸ್ತಕದ ಹೆಸರನ್ನೇ ಅಧ್ಯಾಯದ ಹೆಸರನ್ನಾಗಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಬಸವಣ್ಣನವರು ತಿರಸ್ಕರಿಸಿದ ದೇವರುಗಳನ್ನು ಕುರಿತಂತೆ ಹೇಳಲಾಗಿದೆ. ಮೂರನೆಯ ಅಧ್ಯಾಯದಲ್ಲಿ ಜೀವಕಾರುಣ್ಯವನ್ನು ಪ್ರಧಾನವಾಗಿಟ್ಟುಕೊಂಡು ಪ್ರತಿಪಾದಿಸಿದ ಬಸವಧರ್ಮವು ಹೇಗೆ ಜೀವಜಾಲದ ಚರಾಚರವೆಲ್ಲ ದೇವರೇ ಆಗಿದೆ! ಎಂಬುದನ್ನು ಸಾದ್ಯಂತ ವಿವರಿಸಲಾಗಿದೆ. ನಾಲ್ಕನೆಯ ಅಧ್ಯಾಯವು ಶಿವನಿಧಿಗೆ ಮೀಸಲು. ಅಂದರೆ ಇಲ್ಲಿ ಕಾಯಕಜೀವಿಗಳ ಚಳವಳಿಯು ಪಟ್ಟಭದ್ರ ವ್ಯವಸ್ಥೆಯ ವಿರುದ್ಧ ನಿಲ್ಲವುದರ ಜೊತೆಗೆ ಯಾವುದನ್ನು ನಿರಾಕರಿಸಿ, ಯಾವುದನ್ನು ಪುರಸ್ಕರಿಸಿತು ಎಂಬುದು. ಶರಣರ ಸಾಮಾಜಿಕ ಮತ್ತು ಸಾಹಿತ್ಯಕ ವಿಪ್ಲವವು ನೇತ್ಯಾತ್ಮಕವಾದುದಲ್ಲ; ಇತ್ಯಾತ್ಮಕವಾದುದು ಎಂಬುದನ್ನು ವಚನಗಳ ಮೂಲಕ ತಿಳಿಸಲಾಗಿದೆ. ಬಸವತತ್ತ್ವಗಳನ್ನು ಅರ್ಥಮಾಡಿಸುತ್ತಾ ವ್ಯಾಖ್ಯಾನಿಸಲಾಗಿದೆ. ಐದನೆಯ ಮತ್ತು ಕೊನೆಯ ಅಧ್ಯಾಯವು ಬಸವಣ್ಣನವರ ಕನಸಾದ, ಕೊನೆಗೂ ಕನಸಾಗಿಯೇ ಉಳಿದ ಪರ‍್ಯಾಯ ಸಮಾಜದ ಸ್ವರೂಪವನ್ನು ವಿಶ್ಲೇಷಿಸಲಾಗಿದೆ.


     ಲೇಖಕರು ತಮ್ಮ ‘ನಿವೇದನೆ’ಯಲ್ಲಿ ಬಸವಣ್ಣನ ಬಗೆಗೆ ಚೆನ್ನಬಸವಣ್ಣನವರು ಮನದುಂಬಿ ಹಾಡಿದ ವಚನವೊಂದನ್ನು ಉಲ್ಲೇಖಿಸುತ್ತಾರೆ. ಇಡೀ ಲೋಕವೆಂಬ ಲೋಹವನ್ನು ಆಕರ್ಷಿಸುವ ಅಯಸ್ಕಾಂತ ಬಸವಣ್ಣ, ‘ಆದಿ ಲಿಂಗ, ಅನಾದಿ ಬಸವಣ್ಣನು, ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು’ ಎಂಬುದೇ ಚೆನ್ನಬಸವಣ್ಣನ ಪ್ರಬಲ ನಂಬುಗೆ. ಕಣ್ಣಿಗೆ ಕಾಣುವ ಮತ್ತು ಕಣ್ಣಿಗೆ ಕಾಣದ ವಿಶ್ವದಲ್ಲಿರುವ ಪಂಚಮಹಾಭೂತಗಳನ್ನೆಲ್ಲ ಒಳಗೊಂಡಿರುವುದು ಬಯಲು. ಈ ಬಯಲು ಶೂನ್ಯದೇವನಲ್ಲದೇ ಬೇರೇನಲ್ಲ. ಇಂಥ ಪರಮೇಶ್ವರನು ‘ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು’ ಎನ್ನುತ್ತಾರೆ ಬಸವಣ್ಣನವರು ತಮ್ಮೊಂದು ವಚನದಲ್ಲಿ. ಶರಣರು ಬಯಲು ದೇವನನ್ನು ಇಷ್ಟಲಿಂಗದ ಮೂಲಕ ಅರಿಯುತ್ತಾರೆ. ಸಮಯವನ್ನು ನೋಡಲಾಗದು; ಆದರೆ ಗಡಿಯಾರದ ಮೂಲಕ ಅರಿಯಬಹುದು. ಗಡಿಯಾರಗಳು ಬೇರೆ ಇರಬಹುದು; ಆದರೆ ಸಮಯ ಅಥವಾ ಕಾಲ ಒಂದೇ.



ಬಸವಣ್ಣನವರ ದೇವರು ಕಾಯವೆಂಬ ಕೈಲಾಸದಲ್ಲಿರುವುದರಿಂದ ಇನ್ನೆಲ್ಲಿಯೂ ಹುಡುಕಬೇಕಿಲ್ಲ. ಕೂಡಲಸಂಗಮದೇವನು ನಮ್ಮೊಳಗೆ ಬಯಲಾಗಿದ್ದಾನೆ- ಎಂದು ಲೇಖಕರು ತಮ್ಮ ಮೊದಲ ಮಾತಿನಲ್ಲಿ ತಿಳಿಸುತ್ತಾರೆ; ಆ ಮೂಲಕ ಕೃತಿಯ ಓದಿಗೆ ಸಮರ್ಥ ಪ್ರವೇಶಿಕೆಯನ್ನು ಒದಗಿಸಿ ಕೊಡುತ್ತಾರೆ.

     ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದತ್ತು

     ಸಸಿಯೊಳಗಣ ರಸದ ರುಚಿಯಂತಿದ್ದಿತ್ತು

     ನನೆಯೊಳಗಣ ಪರಿಮಳದಂತಿದ್ದಿತ್ತು

     ಕೂಡಲಸಂಗಮದೇವ ಕನ್ನೆಯ ಸ್ನೇಹದಂತಿದ್ದಿತ್ತು


     ಬಸವಣ್ಣನವರ ಕೂಡಲಸಂಗಮದೇವನು ಹೀಗೆ ಆಂತರ‍್ಯದಲ್ಲೇ ಅವಿತಿರುವನು. ನೀರೊಳಗೆ ಬೆಂಕಿಯಿದೆ. ಅದರಿಂದಲೇ ವಿದ್ಯುತ್ತು ಉತ್ಪಾದನೆಯಾಗುವುದು. ಆದರೆ ಉತ್ಪಾದನೆಯ ತರುವಾಯವೂ ಆ ನೀರು ನೀರಾಗಿಯೇ ಉಳಿಯುವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಆವರಿಸಿರುತ್ತದೆ. ಹಾಗೆಯೇ ಪರಮಾತ್ಮನ ಸ್ನೇಹ ಕನ್ಯೆಯೊಬ್ಬಳ ಜೊತೆಯಲ್ಲಿ ಹೊಂದಿರುವ ವಿಶ್ವಾಸದಂತೆ. ಅದು ಪ್ರೇಮವಲ್ಲ; ಅದಕ್ಕಿಂತಲೂ ಮಿಗಿಲಾದುದು ಸ್ನೇಹ. ಹೀಗೆ ಬಸವಣ್ಣನವರ ದೇವರು ಅಭೇದ್ಯ, ಅಗೋಚರ ಮತ್ತು ಆಕರ್ಷಕ. ಅಂತಃಸಾಕ್ಷಿಯೇ ದೇವರೆಂಬ ಸತ್ಯದ ಅರಿವಾದಾಗ ಸಹಜವಾಗಿಯೇ ನಮ್ಮ ಕಾಯವು ಕೈಲಾಸವಾಗುತ್ತದೆ.



     ನಾವು ಹುಡುಕುವ ದೇವರು ಹೊರಗಡೆ ಇಲ್ಲ; ಒಳಗಡೆಯೇ ಇದ್ದಾರೆ ಎಂಬುದೇ ಬಸವಣ್ಣನವರು ಹೇಳಿದ ಒಟ್ಟು ವಿಚಾರಗಳ ಆಶಯ. ಮನೆಯೊಳಗೆ ಮನೆಯೊಡೆಯ ಇಲ್ಲ, ಏಕೆಂದರೆ ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿರುವಾಗ, ನಾವು ಸುಳ್ಳು ಮತ್ತು ಕಾಮನೆಗಳನ್ನು ತ್ಯಜಿಸಿದರೆ, ನಮ್ಮ ದೇಹವೆಂಬ ಮನೆಯೊಳಗೆ ಮನೆಯೊಡೆಯ ಎಂಬ ನಿಜಾತ್ಮ ಅಂದರೆ ಪರಮಾತ್ಮ ಪ್ರತಿಷ್ಠಾಪಿತಗೊಳ್ಳುವನು. ಅದಕ್ಕಾಗಿ ಅಂತಃಸಾಕ್ಷಿಪ್ರಜ್ಞೆಯೊಂದಿಗೆ ದಾಸೋಹ ಭಾವದಿಂದ ಬದುಕುಬೇಕಾಗುತ್ತದೆ. ಆತ್ಮಶುದ್ಧಿ ಇದ್ದವರಿಗೆ ಮಾತ್ರ ಬಸವಣ್ಣನವರ ದೇವರು ಒಲಿಯುವನು.


     ಶಿವಯೋಗ, ಕಾಯಕ ಮತ್ತು ದಾಸೋಹಗಳ ಮೂಲಕ ಬಸವಣ್ಣನವರು ನವಮಾನವನ ಸೃಷ್ಟಿಗಾಗಿ ನೀಲನಕ್ಷೆಯೊಂದನ್ನು ರೂಪಿಸಿದರು ಎನ್ನುತ್ತಾರೆ ಲೇಖಕರು. ಆ ನವಮಾನವನೇ ಶರಣ. ಮರೆತು ಮಾನವನಾದವ ಅರಿತು ಶರಣನಾಗಬೇಕೆಂಬುದು ಅಣ್ಣನ ಆಶಯ. ಹೀಗೆ ಬಸವತತ್ತ್ವದಲ್ಲಿ ಪಾಪಿಗಳಿಗೂ ಪುಣ್ಯವಂತರಾಗಲು ಅವಕಾಶವಿದೆ. ಇದನ್ನೇ ಮುಂದೆ ಕುವೆಂಪು ಅವರು ವಿಸ್ತರಿಸಿ, ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್ ಎಂದರು.


     ಲೇಖಕರು ಮುಂದುವರಿದು, ಬುದ್ಧ ಮತ್ತು ಬಸವ- ಇಬ್ಬರೂ ಎರಡು ಮಾರ್ಗಗಳನ್ನು ತಿಳಿಸಿದ್ದಾರೆ. ಒಂದು ಸಮಾಧಿ ಮಾರ್ಗ ಮತ್ತು ಇನ್ನೊಂದು ಪ್ರಜ್ಞಾಮಾರ್ಗ. ಸಮಾಧಿ ಮಾರ್ಗದಿಂದ ಆಧ್ಯಾತ್ಮಿಕ ಮತ್ತು ಭಾವನಾಪ್ರಪಂಚಗಳ ಅರ್ಥವಾಗುವುದು. ಪ್ರಜ್ಞಾಮಾರ್ಗದಿಂದ ಭೌತಿಕ ಪ್ರಪಂಚವು ಅರ್ಥವಾಗುವುದು. ದೇವರ ಅಥವಾ ಸತ್ಯದ ಧ್ಯಾನದಲ್ಲಿ ಮಾನವ ಸಮಾಧಿಸ್ಥಿತಿಯನ್ನು ತಲುಪುತ್ತಾನೆ. ನಮಗಾಗಿ ಬದುಕುವುದು ಸ್ವಾರ್ಥ; ಪರರಿಗಾಗಿ ಬದುಕುವುದು ಲೋಕಕಲ್ಯಾಣ. ಇಷ್ಟಲಿಂಗ ಪೂಜೆಯು ನಮ್ಮನ್ನು ಸಮಾಧಿಸ್ಥಿತಿಗೆ ಒಯ್ಯುತ್ತದೆ. ಮೊದಲು ಆತ್ಮಕಲ್ಯಾಣ ಸಾಧಿಸಿ ಆನಂತರ ಲೋಕಕಲ್ಯಾಣಕ್ಕೆ ಟೊಂಕ ಕಟ್ಟಬೇಕು. ಇಷ್ಟಲಿಂಗ ಪೂಜೆಯನ್ನೇ ಶಿವಯೋಗ ಎಂದರು ಬಸವಣ್ಣನವರು.


     ಮಾನವರು ಶರಣರಾಗುವ ಬಗೆಯನ್ನು ಬಸವಣ್ಣನವರು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ ಎನ್ನುವ ಲೇಖಕರು ಅದಕ್ಕೆ ಜೀವವಿಕಾಸವಾದವನ್ನು ಪ್ರಸ್ತಾಪಿಸಿ, ಆತ್ಮೋದ್ಧಾರ ಎಂಬುದು ಒಂದು ದಿವಸದಲ್ಲಿ ಆಗುವಂಥದಲ್ಲ ಎಂದು ತಿಳಿಸುತ್ತಾರೆ. ಕಾಯಕ ಮತ್ತು ದಾಸೋಹಗಳ ಮೂಲಕ ಕರ್ತಾರನ ಕಮ್ಮಟವಾದ ಈ ಪೃಥ್ವಿಯನ್ನು ವಾಸಯೋಗ್ಯ ಮಾಡಿಕೊಳ್ಳಬೇಕು. ಅಂತರಂಗ ಶುದ್ಧಿಯಿಂದ ಆತ್ಮಕಲ್ಯಾಣವಾಗಬೇಕು. ಬಹಿರಂಗ ಶುದ್ಧಿಯಿಂದ ಲೋಕಕಲ್ಯಾಣವಾಗಬೇಕು. ಅಂತಃಕರಣ ಮತ್ತು ಅರಿವು- ಈ ಎರಡು ಬಸವಧರ್ಮದ ಎರಡು ಕಣ್ಣುಗಳು. ಸಮಷ್ಟಿ ಅನುಭವದಿಂದ ಅನುಭಾವ ಜನಿಸುತ್ತದೆ. ಈ ಅನುಭಾವವನ್ನು ಹೊಂದಿದವರೇ ನಿಜಶರಣರು. ಅನುಭವ ಮತ್ತು ಅನುಭಾವ- ಇವೆರಡರಲ್ಲಿ ಒಂದು ಲೌಕಿಕಕ್ಕೆ ಸಂಬಂಧಪಟ್ಟರೆ, ಇನ್ನೊಂದು ಲೋಕೋತ್ತರಕ್ಕೆ ಸಂಬಂಧಪಟ್ಟದ್ದು. ಅನುಭವ ಮತ್ತು ಅನುಭಾವಗಳಿಂದ ಲಿಂಗಾಂಗ ಸಾಮರಸ್ಯವುಂಟಾಗುವುದು. ಆಗ ನಮ್ಮೊಳಗಿನ ದೇವರು ಮುಖದಲ್ಲಿ ಹೊಳೆಯುವನು. ಆತನ ನಡೆನುಡಿಯಲ್ಲಿ ದೇವರು ರೂಪುಗೊಳ್ಳುವನು. ಇಂಥ ಭಕ್ತನಿಗೆ ಮರ್ತ್ಯಲೋಕವೇ ದೇವಲೋಕವಾಗುವುದು. ದೇವಲೋಕ ಎಂಬುದು ಪ್ರತ್ಯೇಕವಾಗಿಲ್ಲ. ಅಲ್ಲೆಲ್ಲಿಯೂ ನಮ್ಮ ಮನೆ ಇಲ್ಲ; ನಾವಿಲ್ಲಿಗೆ ಸುಮ್ಮನೆಯೂ ಬಂದಿಲ್ಲ. ಸತ್ಯವ ನುಡಿವುದೇ ದೇವಲೋಕ; ಮಿಥ್ಯವ ನುಡಿವುದೇ ಮರ್ತ್ಯಲೋಕ. ಆಚಾರವೇ ಸ್ವರ್ಗ; ಅನಾಚರವೇ ನರಕ. ಇದಕ್ಕೆ ಆ ದೇವನೇ ಪ್ರಮಾಣು.


     ವಚನಕಾರರು ಮನವನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಸರ್ಪವು ತೀಕ್ಷ್ಣ ಮತ್ತು ವಿಷಕಾರಿ. ಜೊತೆಗೆ ವೇಗವೂ ಇದೆ. ಆಕರ್ಷಕವಾಗಿಯೂ ಇದೆ. ಅದು ಹೇಗೆ ಬೇಕೋ ಹಾಗೆ ಹೊರಳಬಲ್ಲುದು. ಎಲ್ಲಿ ಬೇಕೆಂದರಲ್ಲಿ ನುಸುಳಬಲ್ಲುದು. ಅದು ನಮ್ಮೊಳಗೇ ಇದ್ದು ನಮ್ಮನ್ನು ಕಚ್ಚಬಲ್ಲುದು. ನಮ್ಮನ್ನು ಕೊಲ್ಲಲೂ ಬಹುದು. ಅದರಲ್ಲೂ ಇದನ್ನು ಸ್ಪಷ್ಟವಾಗಿ ಹೇಳಿದವರು ಬಸವಣ್ಣನವರು. ನಿರಂತರವಾಗಿ ಕೂಡಲಸಂಗಮನನ್ನು ಪೂಜಿಸುವ ಗರುಡಾಸ್ತ್ರದಿಂದ ಈ ಸರ್ಪಾಸ್ತ್ರವನ್ನು ಎದುರಿಸಬೇಕು. ದೇವರ ಧ್ಯಾನದಲ್ಲಿ ಮಾನವರು ಅದಮ್ಯ ಶಕ್ತಿಯನ್ನು ಹೊಂದುವರು. ಮನಸ್ಸಿನ ಮೇಲೆ ಹಿಡಿತ ಸಾಧಿಸುವರು. ‘ಹಲ್ಲ ತೆಗೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಎನ್ನುತ್ತಾಳೆ ಅಕ್ಕಮಹಾದೇವಿ. ಅಂದರೆ ದೇವರ ಧ್ಯಾನವೆಂಬ ಗಾರುಡಶಕ್ತಿಯಿಂದ ಮಾತ್ರ ಮನಸ್ಸಿನ ವಿಷದ ಹಲ್ಲುಗಳನ್ನು ತೆಗೆಯಲು ಸಾಧ್ಯ. ಮನಸ್ಸೆಂಬ ಹಾವನ್ನು ಹತೋಟಿಯಲ್ಲಿಟ್ಟುಕೊಂಡರೆ ಲಿಂಗಾನುಭವ ತಂತಾನೇ ಸಾಧ್ಯ ಎನ್ನುತ್ತಾರೆ ಬಸವಣ್ಣ.



ವಿಶ್ವದ ಬಹುಪಾಲು ಧರ್ಮಿಗಳು ಬಾಹ್ಯಾಚರಣೆಯಲ್ಲಿಯೇ ವಿರಮಿಸುತ್ತಾರೆ. ಆದರೆ ಬಸವಣ್ಣನವರು ಎಲ್ಲ ಧರ್ಮಗಳ ಒಳಗೆ ಹುದುಗಿರುವ ಅಂತಃಸ್ಸತ್ವವಾದ ಜೀವಕಾರುಣ್ಯಕ್ಕೆ ಆದ್ಯತೆ ನೀಡುತ್ತಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವವರು ನಮ್ಮ ಕೂಡಲ ಸಂಗನ ಶರಣರು ಎನ್ನುತ್ತಾರೆ. ದಯವೇ ಧರ್ಮದ ಮೂಲ ಎಂದು ತಿಳಿಸಿ ಕೊಡುತ್ತಾರೆ. ದಯವೇ ಎಲ್ಲ ಧರ್ಮಗಳ ತಾಯಿಬೇರು. ಅಂದರೆ ಜೀವಜಾಲದ ಸಮತೋಲನವನ್ನು ಕಾಪಾಡುವುದು ಶರಣರ ಕರ್ತವ್ಯ. ಇಲ್ಲದಿದ್ದರೆ ಈ ನಿಸರ್ಗದ ಪಶುಪಕ್ಷಿ ಮತ್ತು ಸಸ್ಯಜೀವಕುಲಗಳ ಎಷ್ಟೋ ಕೊಂಡಿಗಳು ನಶಿಸುತ್ತ ಹೋಗುವುವು. ಮಾನವನು ಪೃಥ್ವಿಯ ಕೇಂದ್ರವಾಗಬಾರದು; ಸಕಲಜೀವಿಗಳು ಪೃಥ್ವಿಯ ಕೇಂದ್ರವಾಗಬೇಕು. ಈ ಭೂಮಿ ನಮ್ಮದು ಮಾತ್ರವಲ್ಲ; ಇದನ್ನು ಹಾಳಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಶರಣನ ಕರ್ತವ್ಯ ಎನ್ನುತ್ತಾರೆ ಅಣ್ಣನವರು.


ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಮನುಷ್ಯನು ಅಹಂಕಾರಿಯಾಗಿದ್ದಾನೆ. ಇಡೀ ಜಗತ್ತು ಇರುವುದು ನನಗಾಗಿ ಎಂದುಕೊಂಡು ವರ್ತಿಸಿದ್ದರಿಂದ ಕಳೆದ ಮೂರು ಸಾವಿರ ವರ್ಷಗಳಲ್ಲಿ ನಿಸರ್ಗ ಹಾಗಾದುದಕ್ಕಿಂತ ಕಳೆದ ಮುನ್ನೂರು ವರ್ಷಗಳಲ್ಲಿ ಹಾಳಾಗಿರುವುದು ಹೆಚ್ಚು. ಅಭಿವೃದ್ಧಿಯ ಜಾಲದಲ್ಲಿ ಆಧುನಿಕ ಮಾನವ ತಾನೇ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾನೆ. ಕ್ರೌರ‍್ಯವನ್ನು ಮರೆತು ಜೀವಕಾರುಣ್ಯ ಮೆರೆದರೆ ನಮಗೇ ಒಳಿತು ಎಂಬ ಇಂದಿನ ಪರಿಸರತಜ್ಞರ ಆಶಯವನ್ನೇ ಅಂದು ಬಸವಣ್ಣನವರು ಹೇಳಿದ್ದು ಎನ್ನುತ್ತಾರೆ ಲೇಖಕರು.


     ಇನ್ನುಮುಂದೆ ಲೇಖಕರು ಬಸವಣ್ಣನವರ ವಚನಗಳನ್ನೇ ಅವು ಇದ್ದಂತೆಯೇ ಉಲ್ಲೇಖಿಸಿ ವ್ಯಾಖ್ಯಾನಿಸುವುದರ ಮುಖೇನ ತಮ್ಮ ವಿಚಾರಗಳನ್ನು ಕಟ್ಟಿಕೊಡುತ್ತಾರೆ. ಹದಿನೈದು ಕೋಟಿ ವಚನಗಳನ್ನು ಹಾಡಿ ಹಾರೈಸಿತ್ತು ಎನ್ನ ಮನ ನೋಡಾ ಎಂದು ಓರ್ವ ವಚನಕಾರ ಹೇಳಿದ್ದರ ಹಿನ್ನೆಲೆಯಲ್ಲಿ ನಮಗೀಗ ಉಪಲಬ್ಧವಿರುವುದು ಕೇವಲ ಹದಿನೈದು ಸಾವಿರ ವಚನಗಳು ಮಾತ್ರ. ಅದರಲ್ಲಿ ಬಸವಣ್ಣನವರವೇ ಎಂದು ನಿರ್ಧಾರಿತವಾಗಿರುವುದು ಕೇವಲ ಒಂದುವರೆ ಸಾವಿರ ವಚನಗಳು ಮಾತ್ರ. ಇದರಲ್ಲಿ  ನಲವತ್ತೊಂದು ವಚನಗಳನ್ನು ಮಾತ್ರ ಲೇಖಕರು ತಮ್ಮ ಮೊದಲ ಅಧ್ಯಾಯದಲ್ಲಿ ಹೇಳಲ್ಪಟ್ಟ ವಿಚಾರಗಳಿಗೆ ಚಿಮ್ಮುಹಲಗೆಯಾಗಿ ಬಳಸಿಕೊಂಡಿದ್ದಾರೆ.


     ಎರಡನೇ ಅಧ್ಯಾಯದಲ್ಲಿ ಬಸವಣ್ಣನವರು ತಿರಸ್ಕರಿಸಿದ ದೇವರುಗಳ ಬಗೆಗೆ ವಿಚಾರ ಮಂಡಿಸುತ್ತಾರೆ. ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ ಎಂದು ಹೇಳಿ ನೆಲವನ್ನು ದೇವರಾಗಿ ನೋಡದೆ ಕೇವಲ ನೆಲವಾಗಿ ನೋಡುವುದನ್ನು ಕಲಿಸಿದರು. ಜಲವೊಂದೆ ಶೌಚಾಚಮನಕ್ಕೆ ಎಂದು ತಿಳಿಸಿ, ಗಂಗೆಯ ಜಲಮಾಲಿನ್ಯಕ್ಕೆ ಅದು ದೇವತೆ ಎಂಬ ಮೌಢ್ಯ ಕಾರಣ ಎಂದರು. ಅಗ್ನಿಯನ್ನು ದೇವತೆ ಎಂದು ತಿಳಿದಿದ್ದಕ್ಕೆ ಯಜ್ಞಸಂಪ್ರದಾಯ ಬೆಳೆಯಿತು. ಇದು ಅರಣ್ಯನಾಶಕ್ಕೆ ನಾಂದಿಯಾಯಿತು. ಯಜ್ಞದಿಂದ ಸಾವಿರಾರು ಪ್ರಾಣಿ ಮತ್ತು ಮರಗಳು ಬಲಿಯಾಗಿವೆ. ಹೀಗೆ ಸದಾ ಶ್ರೀಮಂತರ ಪ್ರತಿಷ್ಠೆಗೆ ಕಾರಣವಾಗಿದ್ದ ದೇವಾಲಯ ಸಂಸ್ಕೃತಿಯನ್ನು ವಚನಕಾರರು ವಿರೋಧಿಸಿದರು. ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ ಎಂದು ಬಸವಣ್ಣನವರು. ಇನ್ನೂ ಮುಂದಕ್ಕೆ ಹೋಗಿ, ನಂನಮ್ಮ ದೇಹವೇ ದೇಗುಲ, ಅದರೊಳಗಿನ ಆತ್ಮವೇ ಇಷ್ಟಲಿಂಗ ಎಂದರು. ಏಕೋಭಾವದಿಂದ ಪರಮಾತ್ಮನನ್ನು ಅರಿತುಕೊಮಡು ನಡೆಯುವವರು ಎಲ್ಲ ಜಂಜಡಗಳಿಂದ ಮುಕ್ತರಾಗುತ್ತಾರೆ ಎಂಬುದನ್ನು ಅಣ್ಣ ಮನವರಿಕೆ ಮಾಡಿಕೊಡುತ್ತಾರೆ. ಬಸವಣ್ಣ ಹಂಗು ತೊರೆದು ಹೊಸ ದೇವರು, ಹೊಸ ಸಮಾಜ, ಹೊಸ ಚಿಂತನೆ ಮತ್ತು ಹೊಸ ಆರ್ಥಿಕ ನೀತಿಗಳನ್ನು ಕಟ್ಟಿ ಕೊಟ್ಟರು. ಇದಕ್ಕಾಗಿ ಆತ್ಮಶಕ್ತಿಯಿಂದ ಆಗುಮಾಡಲು ಪ್ರಯತ್ನಿಸಿದರು. ಬಡವರು ನೂರಾರು ದೇವರುಗಳನ್ನು ಕಟ್ಟಿಕೊಂಡು ಹೆಣಗುತ್ತಾರೆ. ಭಯದಲ್ಲೇ ಲಯವಾಗುತ್ತಾರೆ. ಇರುವ ಪುಡಿಗಾಸನ್ನೇ ವ್ಯಯಿಸುತ್ತಾರೆ. ಹಾಗಾಗಿ, ಭವಿಯು ಶರಣನಾಗಿ, ಇಷ್ಟಲಿಂಗವನ್ನು ಪೂಜಿಸುವುದು ಸೂಕ್ತ ಎನ್ನುತ್ತಾರೆ. ‘ಕುರಿ ಬೇಡ, ಮರಿ ಬೇ, ಬರಿಯ ಪತ್ರೆಯ ತಂದು ಪೂಜಿಸು ನಮ್ಮ ಕೂಡಲಸಂಗನ ಎನ್ನುತ್ತಾರೆ. ಇಂಥ ಕಾರಣಗಳಿಂದಲೇ ಜನಪದ ಕವಿಯೊಬ್ಬನು ಬಸವತತ್ತ್ವವನ್ನು ಅರಿತುಕೊಂಡು, ‘ಕಲ್ಯಾನಣದೊಳಗೆ ಬಸವಣ್ಣನಿರುವಾಗ ಕಲ್ಲಿಗ್ಯಾಕ ಕೈಯ ಮುಗಿಯುವೆ? ಎಂದು ಪ್ರಶ್ನಿಸುತ್ತಾನೆ.


ಹೀಗೆ ಬಸವಣ್ಣನವರು ನೂರಾರು ಕ್ಷುದ್ರದೇವತೆಗಳನ್ನು ತಿರಸ್ಕರಿಸಿದರು. ಆ ಮೂಲಕ ಎಲ್ಲ ಗುಂಪುಗಳನ್ನು ಒಂದಾಗಿಸಿದರು. ಏಕದೇವ ಕಲ್ಪನೆಯಿಂದ ಸಮಾನತೆಯನ್ನು ಸಾಧಿಸಿದರು- ಎನ್ನುತ್ತಾರೆ ಲೇಖಕರು. ಇದಕ್ಕಾಗಿ ಬಸವಣ್ಣನವರ ಒಟ್ಟು ವಚನಗಳ ಪೈಕಿ ಹತ್ತು ವಚನಗಳನ್ನು ಬಳಸಿಕೊಂಡಿದ್ದಾರೆ.



    ಮೂರನೆಯ ಅಧ್ಯಾಯದಲ್ಲಿ, ಚರ ಮತ್ತು ಅಚರ ಎರಡೂ ಇರುವ ಜೀವಜಾಲವನ್ನು ವಿವರಿಸಿದ್ದಾರೆ. ಜೈನಧರ್ಮದ ಅಹಿಂಸೆಯ ಪರಿಕಲ್ಪನೆಯನ್ನು ಹೋಲಿಸುತ್ತಾ ಬಸವಧರ್ಮದ ಜೀವಕಾರುಣ್ಯವನ್ನು ಅರ್ಥ ಮಾಡಿಸುತ್ತಾರೆ. ಆಹಾರದ ಪದ್ಧತಿಗಳಿಂದ ಮನುಷ್ಯರನ್ನು ಕೀಳಾಗಿಸಬಾರದು ಎಂಬ ವಿವೇಕವನ್ನು ತಿಳಿಸಿದರು ಎನ್ನುತ್ತಾರೆ. ಬಸವಣ್ಣನವರು ಪ್ರಬಲವಾಗಿ ವಿರೋಧಿಸುವುದು ಯಜ್ಞಹಿಂಸೆಯನ್ನು ಎನ್ನುತ್ತಾರೆ. ಈ ಜೀವಜಾಲವು ತನ್ನದೇ ಆಹಾರ ಸರಪಳಿ ಹೊಂದಿದೆ. ಹುಲಿಗೆ ಹುಲ್ಲು ತಿನ್ನು ಎನ್ನಲಾಗದು. ಹಾಗೆಂದು ಬೇಟೆ ಮತ್ತು ಪ್ರಾಣಿಬಲಿಗಳಿಂದ ಜೀವಜಾಲದ ಸಮತೋಲನವನ್ನು ಕೆಡಿಸಬಾರದು. ‘ಈ ಭೂಮಿ ಅಂದರೆ ನಾವು ವಾಸಿಸುವ ಜಾಗವು ಏಕೈಕ ಮತ್ತು ಬದಲು ಮಾಡಲಿಕ್ಕಾಗದ ಮಹಾಮನೆ. ತನ್ನೆಲ್ಲ ವೈವಿಧ್ಯಗಳಿಂದ ಮಾನವಕುಲ ಕೂಡ ವಿಕಾಸದ ಭಾಗವಾಗಿದೆ’ ಪ್ಯಾರಿಸ್ ಮೂಲದ ಜನೋಪಕಾರಿ ಸಂಸ್ಥೆಯೊಂದು ತನ್ನ ‘ಮಾನವ ಜವಾಬ್ದಾರಿಗಳ ಘೋಷಣೆ’ಯಲ್ಲಿ ತಿಳಿಸಿದೆ. ಜೀವಜಾಲದ ಸಮತೋಲನವನ್ನು ಕಾಪಾಡಿಕೊಳ್ಳದಿದ್ದರೆ ಮಾನವ ಬದುಕು ದುರಂತವಾಗುವುದು ಎಂದು ಬಸವಣ್ಣನವರು 12ನೇ ಶತಮಾನದಲ್ಲೇ ಎಚ್ಚರಿಸಿದ್ದರು ಎನ್ನುತ್ತಾರೆ ಲೇಖಕರು.



     ಇಡೀ ವಿಶ್ವವು ದೇವರ ವ್ಯವಹಾರವಾಗಿದೆ; ಅದನ್ನು ನಮ್ಮ ವ್ಯವಹಾರದ ಭಾಗವನ್ನಾಗಿ ಮಾಡಿಕೊಳ್ಳಬಾರದು. ‘ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ’ ಅಂದರೆ ದೇವರನ್ನು ಅಣ್ಣನು ಸೆಟ್ಟಿ ಎಂದು ಕರೆದಿದ್ದಾರೆ. ಏಕೆಂದರೆ ಅವನು ವ್ಯಾಪಾರಿ. ನಾವೆಲ್ಲ ಅವನ ಗ್ರಾಹಕರು. ಕೇಳಿದ್ದನ್ನು ಇಲ್ಲವೆನ್ನಬಹುದು; ಅಥವಾ ಕೊಡಬಹುದು. ಕೊಟ್ಟಿದ್ದನ್ನು ತೆಗೆದುಕೊಳ್ಳಬೇಕು. ಇಲ್ಲವೆನ್ನಲು ಬಾರದು. ಸಮತೋಲನವಿಲ್ಲದಿದ್ದರೆ ಯುದ್ಧಗಳಾಗುತ್ತವೆ. ತಿಳಿವಳಿಕೆ ಇಲ್ಲದಿದ್ದಾಗ ಜನಾಂಗಹತ್ಯೆಗಳಾಗುತ್ತವೆ. ನಮ್ಮ ಅವಿವೇಕತನದಿಂದ ಕಾಡುಗಳು ಮರುಭೂಮಿಗಳಾಗಿವೆ; ಆಮ್ಲಮಳೆಗಳಾಗುತ್ತವೆ. ಓಜೋ಼ನ್ ಪದರ ತೂತಾಗುತ್ತಿದೆ.



ನಾಲ್ಕನೆಯ ಅಧ್ಯಾಯದಲ್ಲಿ ‘ಶಿವನಿಧಿ’ ಎಂಬ ಹೊಸ ವಿಚಾರ ತಿಳಿಸಿ ಅಚ್ಚರಿ ಮೂಡಿಸುತ್ತಾರೆ. ಬಸವಣ್ಣನು ಕಾಯಕಜೀವಿಗಳಿಗೆ ಇಷ್ಟಲಿಂಗವನ್ನು ಕೊಟ್ಟು, ಸ್ಥಾವರಗಳನ್ನು ಬಿಟ್ಟು, ಇಷ್ಟಲಿಂಗವನ್ನೇ ಧ್ಯಾನದ ಕೇಂದ್ರವನ್ನಾಗಿಸಿದರು. ಇದರಿಂದ ಅಹಂಭಾವದ ಬೀಜಗಳನ್ನು ಸೃಷ್ಟಿಸುವ ದಾನದ ಜಾಗದಲ್ಲಿ ಸಮಭಾವದ ಚಿಂತನೆಗಳನ್ನು ಹರಡುವ ದಾಸೋಹ ವ್ಯವಸ್ಥೆ ಸಾಧ್ಯವಾಯಿತು. ರಾಜನಿಧಿಗೆ ಬದಲಿಗೆ ಶಿವನಿಧಿಯನ್ನು ಸ್ಥಾಪಿಸಿದರು. ನವಸಮಾಜವನ್ನು ಉಳಿಸಿ ಬೆಳೆಸಲು ಇದು ಅನಿವಾರ‍್ಯವಾಗಿತ್ತು. ಕಾಯಕಜೀವಿಗಳು ಬಡವರು. ಅವರು ಸಂಪತ್ತನ್ನು ಶೇಖರಿಸುವಂತಿರಲಿಲ್ಲ. ಸಂಪತ್ತಿನ ಸಂಗ್ರಹಣೆಯೇ ಎಲ್ಲ ವ್ಯಸನಗಳಿಗೆ ಮೂಲ ಎಂಬ ಬುದ್ಧನ ಅಸಂಗ್ರಹಪ್ರವೃತ್ತಿಯನ್ನು ಬಸವಣ್ಣನು ಮುಂದುವರಿಸಿ, ಕಾಯಕ-ದಾಸೋಹಗಳ ಮೂಲಕ ಬುದ್ಧನ ತತ್ತ್ವವನ್ನು ಆಚರಣೆಗೆ ತಂದರು ಎನ್ನುತ್ತಾರೆ ಲೇಖಕರು. ಮಾನವರು ವಿವಿಧ ಕಾಯಕಗಳನ್ನು ಅವರವರ ಹೊಟ್ಟೆಪಾಡಿಗಾಗಿ ಮಾತ್ರ ಮಾಡುವುದು ಬಸವತತ್ತ್ವಕ್ಕೆ ವಿರುದ್ಧವಾಗಿದೆ. ನಾವು ಕಾಯಕ ಮಾಡುವಲ್ಲಿ ಕೂಡ ಸಾಮಾಜಿಕ ಹೊಣೆಯನ್ನು ಮರೆಯಬಾರದು. ಹಾಗೆಂದು ಬಸವಣ್ಣನವರು ಬಿಜ್ಜಳನ ಭಂಡಾರಿಯಾಗಿ ರಾಜನಿಧಿಯನ್ನು ದುರ್ಬಳಕೆ ಮಾಡಿಕೊಂಡರು ಎಂದು ಅರ್ಥವಲ್ಲ; ಅವರೇ ಹೇಳುವಂತೆ, ‘ಊರ ಮುಂದೆ ಹಾಲಹಳ್ಳ ಹರಿವುತ್ತಿರಲು ಬಿಜ್ಜಳನ ಭಂಡಾರವೆನಗೇಕಯ್ಯ’ ಎಂದಿದ್ದಾರೆ. ಕಷ್ಟದಲ್ಲಿರುವವರ ಅನುಕೂಲಕ್ಕಾಗಿ ಶರಣಸಂಕುಲದ ಸದಸ್ಯರು ತಮ್ಮಲ್ಲಿನ ಮಿಗುತಾಯದ ಮೌಲ್ಯವನ್ನು ಶಿವನಿಧಿಗೆ ಅರ್ಪಿಸಬೇಕು ಎಂಬುದು ಬಸವಣ್ಣನವರ ಆಶಯವಾಗಿದೆ ಎನ್ನುತ್ತಾರೆ ಲೇಖಕರು.


     ಮಾನವ ಧನಪಿಶಾಚಿಯಾಗಬಾರದು; ಕೀಳು ಅಭಿರುಚಿಯಿಂದ ಮಾನವ ಬದುಕಿನ ಘನತೆ ಕಳೆಯಬಾರದು. ‘ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ, ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ’ ಎನ್ನುತ್ತಾರೆ ಬಸವಣ್ಣನವರು. ಮುಂದುವರೆದು, ‘ಛಲ ಬೇಕು ಶರಣಂಗೆ ಪರಧನವನೊಲ್ಲೆನೆಂಬ’ ಎಂಬ ವಿಚಾರ ಮಂಡಿಸುತ್ತಾರೆ. ಕಲ್ಯಾಣದಲ್ಲಿ ಕೊಡುವವರಿದ್ದರು; ಬೇಡುವವರಿರಲಿಲ್ಲ. ‘ಬೇಡುವವರಿಲ್ಲದೆ ಬಡವಾದೆನಯ್ಯ’ ಎನ್ನುತ್ತಾರೆ ಬಸವಣ್ಣ ತಮ್ಮೊಂದು ವಚನದಲ್ಲಿ. ಲೇಖಕರು ಇದನ್ನು ವಿಸ್ತರಿಸಿ, ಈ ರೀತಿಯ ಶಿವನಿಧಿಯನ್ನು ಸ್ಥಾಪಿಸುವುದು ಬಸವಣ್ಣನವರ ಅನುಯಾಯಿಗಳ ಆದ್ಯ ಕರ್ತವ್ಯ ಎನ್ನುತ್ತಾರೆ. ಬದುಕಿನಲ್ಲಿ ಭರವಸೆ ಮೂಡಿಸುವುದು ಶಿವನಿಧಿಯ ಪಾತ್ರ ಹಿರಿದು ಎಂದು ಅಭಿಪ್ರಾಯಿಸುತ್ತಾರೆ. ಇವನ್ನೆಲ್ಲ ಹೇಳಲು ಬಸವಣ್ಣನವರ ಒಟ್ಟು ವಚನಗಳ ಪೈಕಿ ಒಂಬತ್ತು ವಚನಗಳನ್ನು ಬಳಸಿಕೊಂಡಿದ್ದಾರೆ.


     ಐದನೆಯ ಮತ್ತು ಕೊನೆಯ ಅಧ್ಯಾಯವಾಗಿ, ಬಸವಣ್ಣನವರ ಪರ್ಯಾಯ ಸಮಾಜವನ್ನು ಹೇಳಿದ್ದಾರೆ. ಇವರು ಕೇವಲ ವಿರೋಧ, ಖಂಡನೆ, ತಿರಸ್ಕಾರ, ನಿಂದನೆಗಳನ್ನು ಮಾತ್ರ ಮಾಡದೆ, ಪರ‍್ಯಾಯವನ್ನು ಕಟ್ಟಿಕೊಟ್ಟರು. ಈ ಜಗತ್ತನ್ನು ಅಲ್ಲಗಳೆಯದೆ ಜಗತ್ತಿನ ಮಹತ್ವವನ್ನು ಅರ್ಥ ಮಾಡಿಸಿದರು. ಸಂನ್ಯಾಸವನ್ನು ಬೋಧಿಸದೆ, ಸಂಸಾರದಲ್ಲಿದ್ದುಕೊಂಡೇ ದೇವರನ್ನು ಆರಾಧಿಸುವ ಮತ್ತು ಮೋಕ್ಷವನ್ನು ಸಂಪಾದಿಸುವ ವಿಧಾನ ಹೇಳಿಕೊಟ್ಟರು. ‘ಶರಣಸತಿ-ಲಿಂಗಪತಿ’ ಎಂಬ ಪರಿಕಲ್ಪನೆಯಿಂದ ಬಸವಣ್ಣನವರ ಕಾಯಕ ತತ್ತ್ವವು ಸಮಜೋ-ಕೌಟುಂಬಿಕ ಅರ್ಥಶಾಸ್ತ್ರವಾಯಿತು ಎನ್ನುತ್ತಾರೆ ಲೇಖಕರು. ಬಸವಣ್ಣ ಗುರು-ಲಿಂಗ-ಜಂಗಮ ಈ ಮೂವರನ್ನು ಅರಿವು-ಅಂತಃಸಾಕ್ಷಿ-ಸಮಾಜದ ಮಹತ್ವಕ್ಕೆ ಪರ‍್ಯಾಯವಾಗಿ ನಿಲ್ಲಿಸಿದರು. ನಮ್ಮೊಳಗೆ ಕ್ರಾಂತಿಯಾಗದೆ ಹೊರಗಡೆ ಕ್ರಾಂತಿ ಸಾಧ್ಯವಿಲ್ಲ ಎಂಬುದನ್ನು ಜಗತ್ತು ತಿಳಿಯುವಂತೆ ಮಾಡಿದರು. ಅಣ್ಣನು ಕಟ್ಟಿಕೊಟ್ಟ ಸಮಾಜವು ಸರ್ವ ಸಮಾನತೆಯ ತಳಹದಿಯದು. ಮನುಷ್ಯರು ಭವಿಯಾಗದೆ ಭಕ್ತರಾಗಬೇಕು; ಯಾವುದೇ ಜೀವಿಗೆ ತೊಂದರೆ ಮಾಡದೆ ಕಾಯಕ ಮಾಡಬೇಕು. ಇದರಿಂದ ಬಂದದ್ದರಲ್ಲಿ ದಾಸೋಹ ಮಾಡಬೇಕು. ಎಲ್ಲ ಅಹಂಕಾರದಿಂದ ಹೊರಬಂದು ಪ್ರೇಮದ ಅತ್ಯುನ್ನತ ಮಟ್ಟವನ್ನು ತಲಪಬೇಕು. ಈ ಸಂಗತಿಗಳನ್ನು ತಿಳಿಸುತ್ತಲೇ ಲೇಖಕರು, ಕಲ್ಯಾಣದ ವಿಪ್ಲವವನ್ನು ಕ್ರಾಂತಿ ಎಂದು ಕರೆದು ವಿಜೃಂಭಿಸಿರುವುದನ್ನು ಖಂಡಿಸುತ್ತಾರೆ. ಪಟ್ಟಭದ್ರರು ಶರಣರ ಹತ್ಯೆ ಮಾಡಿದ್ದನ್ನು ಕ್ರಾಂತಿ ಎಂದು ಕರೆಯುವುದು ಯಾವ ನ್ಯಾಯ? ಎನ್ನುತ್ತಾರೆ. ಶರಣರ ಹತ್ಯಾಕಾಂಡವು ಮಧ್ಯಯುಗದ ಭಾರತದ ಇತಿಹಾಸದಲ್ಲಿ ದಾಖಲಾಗದೇ ಹೋದುದು ಮಾನವೀಯತೆಗೆ ಮಾಡಿದ ಅವಮಾನವಾಗಿದೆ. ಯಾರು? ಮತ್ತು ಯಾಕೆ? ದಾಖಲು ಮಾಡಲಿಲ್ಲ ಎಂಬುದು ಸಂಶೋಧನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.


‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಇನ್ನೊಳಗಿದ್ದು ನಿನ್ನ ತೋರಲಿಕ್ಕೆ ನೀನೇ ರೂಪಾದೆ’ ಎಂದು ಅಂತಃಸಾಕ್ಷಿಯನ್ನೆ ದೇವರೆಂದು ಸೂಚಿಸಿದ ಶರಣರನ್ನು ನಿರ್ದಯವಾಗಿ ಕೊಂದ ವ್ಯವಸ್ಥೆಯನ್ನು ಬಸವಣ್ಣನವರು ಅರ್ಥ ಮಾಡಿಕೊಂಡಿದ್ದರು; ವ್ಯವಸ್ಥೆಯೇ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿತು. ಹೀಗೆ ಸಾಗುತ್ತ ಇಂದು ಜಗತ್ತು ಪರಮಾಣುಬಾಂಬುಗಳನ್ನು ಒಡಲೊಳಗಿಟ್ಟುಕೊಂಡು ಶಾಂತಿಯ ಮಾತಾಡುತ್ತಿದೆ; ಬೆಳೆಯ ಭೂಮಿಯಲ್ಲಿ ಪ್ರಳಯದ ಕಸ ತುಂಬುತ್ತಿದೆ ಎಂದು ಲೇಖಕರು ವಿಷಾದ ಪಡುತ್ತಾರೆ. ಅಹಂಕಾರದಿಂದ ವಿಶ್ವನಾಶ; ದಯೆಯಿಂದ ವಿಶ್ವರಕ್ಷಣೆ- ಇದೇ ಬಸವಣ್ಣನವರು ಸಾರಿದ ಸತ್ಯ ಎಂದು ಕೊನೆಯಲ್ಲಿ ಸಾರರೂಪದ ಸತ್ವವನ್ನು ತಿಳಿಸುತ್ತಾರೆ. ಈ ಅಧ್ಯಾಯದಲ್ಲಿ ಒಂದು ವಚನದ ಪೂರ್ಣಪಾಠ ಮತ್ತು ಅಲ್ಲಲ್ಲಿ ವಚನಗಳ ಸಾಲುಗಳನ್ನಷ್ಟೇ ಲೇಖಕರು ಬಳಸಿಕೊಂಡಿದ್ದಾರೆ.


ಕೃತಿಯಲ್ಲಿ ಗ್ರಂಥಋಣವನ್ನಾಗಲಿ, ಉದ್ಧೃತಗಳನ್ನಾಗಲಿ, ಕೊನೆಟಿಪ್ಪಣಿಗಳನ್ನಾಗಲಿ ಕೊಟ್ಟಿಲ್ಲ. ವಿದ್ವಾಂಸರು ಓದುವ ಕೃತಿಯನ್ನಾಗಿಸದೆ, ಸಾಮಾನ್ಯ ಸಹೃದಯರು ಓದುವ ಕೃತಿಯನ್ನಾಗಿಸುವಲ್ಲಿ ಲೇಖಕರು ಆಸಕ್ತಿ ತೋರಿದ್ದಾರೆ. ಹಾಗಾಗಿ, ಈ ಐವತ್ತು ಪುಟಗಳ ಕೃತಿಯಲ್ಲಿ ಬಸವಣ್ಣನವರು ಯಾವುದನ್ನು ದೇವರನ್ನಾಗಿ ಕಂಡರು? ಎಂಬುದನ್ನು ಸಂಗ್ರಹರೂಪದಲ್ಲಿ ಅವರ ವಚನಗಳ ಮೂಲಕವೇ ತಿಳಿಸಿ ಕೊಟ್ಟಿದ್ದಾರೆ. ಬಸವಣ್ಣನವರು ದೇವರು ಎಂದು ತಿಳಿಯುವ ಜನರಿಗೆ, ಬಸವಣ್ಣನವರ ದೇವರು ಯಾವುದು? ಎಂದು ತಿಳಿಯುವಂತೆ ಹಕ್ಕೊತ್ತಾಯ ಮಾಡಿದ್ದಾರೆ. ಬಸವಣ್ಣನವರೇ ದೇವರು ಎಂದೂ ಬಸವಣ್ಣನವರ ದೇವರು ಎಂದೂ ಓದಿಕೊಳ್ಳಲು ಸಾಧ್ಯವಿದೆ. ಇಷ್ಟೆಲ್ಲ ವಿಚಾರಗಳು ಅತ್ಯಂತ ಸರಳ ಭಾಷಾಶೈಲಿಯಲ್ಲಿ ನಿರೂಪಿತವಾಗಿದೆ ಎಂಬುದೇ ಈ ಪುಸ್ತಕದ ಹೆಗ್ಗಳಿಕೆ!



******ಬಸವಜಯಂತಿ*******

Re-search: It is purely Science based but itself is an ART


ಸಂಶೋಧನೆಯು ಶಾಸ್ತ್ರವೂ ಹೌದು; ಕಲೆಯೂ ಹೌದು 

       ಶಬ್ದಮಣಿದರ್ಪಣವೆಂಬ ಹಳಗನ್ನಡ ವ್ಯಾಕರಣವನ್ನು ಸಂಪಾದಿಸಿ, ಮೌಲಿಕ ಮುನ್ನುಡಿ ಬರೆದ ಡಿ ಎಲ್ ನರಸಿಂಹಾಚಾರ್ ಅವರು ಮೊದಲ ಬಾರಿಗೆ ಶಮದವು ಶಾಸ್ತ್ರವೂ ಹೌದು; ಕಾವ್ಯವೂ ಹೌದು ಎಂದರು! ಈ ಮಾತು ಈಗ ತಕ್ಷಣ ನೆನಪಾಗುತ್ತಿದೆ.

 ಸಂಶೋಧನೆ ಎಂಬುದು ತನಗೆ ತಾನೇ ಸ್ವತಂತ್ರವಲ್ಲ. ಅದರಲ್ಲೂ ಮಾನವಿಕ, ಭಾಷೆ-ಸಾಹಿತ್ಯಗಳಂಥ ಸಾಪೇಕ್ಷವಾದೀ ಜ್ಞಾನಶಿಸ್ತುಗಳಲ್ಲಿ ಈ ಮಾತು ಚೆನ್ನಾಗಿ ಒಪ್ಪುತ್ತದೆ.

    ಶಾಸ್ತ್ರ ಎಂಬುದು ವ್ಯವಸ್ಥಿತ ಚೌಕಟ್ಟು, ಕರಾರುವಾಕ್ಕಾದ ನಿರ್ಣಯ, ಸರ್ವರೀತಿಯಲ್ಲೂ ಒಪ್ಪತಕ್ಕ ತೀರ್ಮಾನ ಮತ್ತು ನಿರ್ದಿಷ್ಟ ತಾತ್ತ್ವಿಕ ನೆಲೆಗಟ್ಟುಗಳನ್ನು ಸೂಚಿಸುವ ಪದ. ಹಾಗೆಯೇ ಕಲೆ ಎಂಬುದು ವ್ಯಕ್ತಿಗತ ಶೈಲಿ, ಹಲವು ಮಗ್ಗಲುಗಳ ನೋಟವೈವಿಧ್ಯ, ಸ್ವೋಪಜ್ಞವಾದ ಕೌಶಲ್ಯಗಳಿಂದ ಕೂಡಿದ ವಿಶಿಷ್ಠ ಪ್ರತಿಪಾದನೆ, ಕಾಲ್ಪನಿಕ ಮತ್ತು ಊಹಾತ್ಮಕ ಸಂದೇಹಗಳ ಸ್ಥಿರೀಕರಣ, ಒಪ್ಪತಕ್ಕ ಉದಾಹರಣೆಗಳಿಂದ ಸಮರ್ಥನೆ ಎಂಬ ವಿಚಾರಗಳನ್ನು ಸಂಕೇತಿಸುವ ಪದ.

   ಸಂಶೋಧನೆಯು ಇವೆರಡೂ ಆಗಿದೆ. ಅದರಲ್ಲೂ ಭಾಷಾಸಾಹಿತ್ಯಗಳನ್ನು ಅರಿಯುವ ನಿಟ್ಟಿನಲ್ಲಿ ಸತ್ಯದ ಹುಡುಕಾಟ ಮಾಡುವ ಸಂದರ್ಭದಲ್ಲಂತೂ ಈ ಮಾತು ಸತ್ಯಸ್ಯ ಸತ್ಯ.

    ಸಂಶೋಧನಾಧ್ಯಯನ ಕೈಗೊಳ್ಳುವ ಮೊದಲಿಗೆ ಆಯ್ದುಕೊಳ್ಳುವ ಕ್ಷೇತ್ರ ಮತ್ತು ವಿಷಯಗಳಿಂದಲೇ ಈ ಸಂಗತಿಯನ್ನು ಸಾಬೀತು ಮಾಡಬಹುದು. ಉದಾಹರಣೆಗೆ, ಕುವೆಂಪು ಕಥಾಸಾಹಿತ್ಯದಲ್ಲಿ ಧಾರ್ಮಿಕ ಸಂಗತಿಗಳು, ಶಬ್ದಮಣಿದರ್ಪಣ-ಒಂದು ಸಾಂಸ್ಕೃತಿಕ ಅಧ್ಯಯನ, ಕನ್ನಡ ರಾಮಾಯಣಗಳ ತೌಲನಿಕ ಅಧ್ಯಯನ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ಮನೋವೈಜ್ಞಾನಿಕ ನೆಲೆಗಳು ಇತ್ಯಾದಿ.

    ಹಾಗೆಯೇ ಮುಂದುವರಿದು, ಅಧ್ಯಾಯಗಳನ್ನು ವಿಂಗಡಿಸಿಕೊಳ್ಳುವಾಗ ಮತ್ತದೇ ಸಂಶೋಧಕರ ವೈಯಕ್ತಿಕ ನೆಲೆ-ನಿಲುವು ಅಂದರೆ ಕಲಾತ್ಮಕ ವಿಷಯಗಳು ಮಹತ್ವ ಪಡೆಯುತ್ತವೆ. ಆದರೆ ಅಧ್ಯಾಯಗಳನ್ನು ವಿಂಗಡಿಸಿಕೊಳ್ಳುವಾಗ ಶಾಸ್ತ್ರೀಯ ಸಂಗತಿ ಅಂದರೆ ಸೈದ್ಧಾಂತಿಕ ನೆಲೆಗಳು ಹಿನ್ನೆಲೆಯಲ್ಲಿದ್ದು, ಪೋಷಿಸುತ್ತವೆ.

    ಒಟ್ಟಾರೆ, ಸಂಶೋಧಕರಲ್ಲಿ ಕಲಾತ್ಮಕ ಮತ್ತು ಶಾಸ್ತ್ರಾತ್ಮಕ-ಎರಡೂ ಆಯಾಮಗಳು ಅಧ್ಯಯನ ಸಂದರ್ಭದಲ್ಲಿದ್ದು, ಅಧ್ಯಯನದ ಫಲಿತಗಳನ್ನು ಕಟ್ಟಿಕೊಡುತ್ತವೆ. ಇವು ಬೇರೆ ಬೇರೆಯೆನಿಸಿದರೂ ಅಂತಿಮವಾಗಿ ಪರಸ್ಪರ ಪೂರಕವಾಗಿದ್ದು, ದುಡಿಯುತ್ತವೆ. ಆದ್ದರಿಂದ ಈ ಪ್ರಶ್ನೆ ಕೇಳಿಕೊಂಡು ವರ್ಗೀಕರಿಸುವ ತನಕ ವ್ಯತ್ಯಾಸ ತಿಳಿಯುವುದಿಲ್ಲ.

     ಇನ್ನು ಸಂಶೋಧನೆಯ ಸಂದರ್ಭದಲ್ಲಿ ನಡೆಸುವ ಕ್ಷೇತ್ರಕಾರ‍್ಯ, ದತ್ತಾಂಶ ಸಂಗ್ರಹಣೆ, ರೂಪಿಸಿಕೊಳ್ಳುವ ಪ್ರಶ್ನಾವಳಿಗಳು, ಹೊಳೆಯುವ ಮೂಲರೂಪ/ಊಹನೆಗಳು, ದತ್ತಾಂಶ ವರ್ಗೀಕರಣ, ಸಂಯೋಜನ, ಮರು ಹೊಂದಾಣಿಕೆ ಮುಂತಾದವುಗಳಲ್ಲಿ ಶಾಸ್ತ್ರೀಯ ಹಿನ್ನೆಲೆಯಿದ್ದರೆ, ಅವನ್ನು ಹೊಂದಿಸುವ, ಹೊಂದಾಣಿಸುವ ನಿಟ್ಟಿನಲ್ಲಿ ಆಯಾ ಸಂಶೋಧಕರ ವ್ಯಕ್ತಿಗತ ನೈಪುಣ್ಯ ಅಂದರೆ ಕಲಾತ್ಮಕ ಭಾಗ ಸಹಾಯ ನೀಡುವುದು.

     ಅನುಬಂಧ ಮತ್ತು ಪರಿಶಿಷ್ಠಗಳಲ್ಲಿ ಹಾಗೂ ಪರಾಮರ್ಶನ ವಿಭಾಗಗಳಲ್ಲಿ ಅಳವಡಿಸಿಕೊಳ್ಳುವ ಕ್ರಮಗಳು ಶಾಸ್ತ್ರೋಕ್ತ ಅಂದರೆ ಸೈದ್ಧಾಂತಿಕ ಎನಿಸಿದರೆ, ಅವನ್ನು ಸಾದರಪಡಿಸುವ ಕ್ರಮದಲ್ಲಿ ವ್ಯಕ್ತಿವಿಶಿಷ್ಠತೆ ಅಂದರೆ ಕಲೆಯ ಅಂಶ ಎದ್ದು ಕಾಣುತ್ತದೆ.

       ಒಂದೇ ವಿಷಯವನ್ನು ಇಬ್ಬರು ಸಂಶೋಧಕರು ಕೈಗೆತ್ತಿಕೊಂಡು ಎರಡು ವಿಭಿನ್ನ ನೆಲೆಗಳಲ್ಲಿ ಅಧ್ಯಯನ ಕೈಗೊಂಡರೆಂದು ಅಂದುಕೊಳ್ಳೋಣ: ಅವರುಗಳು ಅಳವಡಿಸಿಕೊಳ್ಳುವ ತಾತ್ತ್ವಿಕ ಹಿನ್ನೆಲೆ ಒಂದೇ ಆಗಿದ್ದರೂ ಪ್ರತಿಪಾದನೆಯಲ್ಲಿ ಬಳಸುವ ಭಾಷೆ-ಶೈಲಿಗಳು ಬೇರೆಯಾಗಿರಬಹುದು. ಉದಾಹರಣೆಗೆ ಕೆಎಸ್‍ನ ಅವರ ಕವಿತೆಗಳನ್ನು ಮೂವರು ಸಂಶೋಧಕರು ಅಧ್ಯಯನ ಮಾಡಿದರೂ ಅವರ ನವ್ಯಚಹರೆಯ ಪದ್ಯಗಳನ್ನು ವಿಮರ್ಶಿಸಿ, ಅಂತಿಮ ಮಾತು ಹೇಳುವಾಗ ಬೇರೊಂದು ಸತ್ಯವನ್ನು ನುಡಿಯಬಹುದು. ಅವರ ಮನೆಯಿಂದ ಮನೆಗೆ ಪದ್ಯವನ್ನು ಒಬ್ಬರು ಹುಟ್ಟು-ಸಾವುಗಳ ಸಂಕೇತ ಎಂದರೆ ಇನ್ನೊಬ್ಬರು ಮುಂದುವರಿದು, ಕೆಎಸ್‍ನ ಅವರು ನವೋದಯದಿಂದ ನವ್ಯದೆಡೆಗೆ ಹೊರಳುವ ಸಂದರ್ಭದಲ್ಲಿ ಬರೆದದ್ದು ಎಂದು ಕಾಲಾನುಕ್ರಮ ಇಟ್ಟುಕೊಂಡು ಸಾಧಿಸಬಹುದು. ಇನ್ನೊಬ್ಬರು ಕವಿಯನ್ನೇ ಸಂದರ್ಶಿಸಿ, ಅದರ ಹಿನ್ನೆಲೆಯಲ್ಲಿ ಅಡಿಗರ ಮೋಹನ ಮುರಲಿಗೆ ನನ್ನ ಪ್ರತಿಕ್ರಿಯೆ; ಲೌಕಿಕಕ್ಕೆ ಲೋಕೋತ್ತರದ ಸ್ಪರ್ಶ ಎಂದು ನಿರ್ಧರಿಸಬಹುದು. ಇಲ್ಲೆಲ್ಲ ಸಂಶೋಧಕರ ಕಲಾತ್ಮಕ ಸಾಧ್ಯತೆಗಳನ್ನು ಕಾಣಬಹುದಾಗಿದೆ.

     ಸಂಶೋಧನೆ ಎಂಬುದು ಮಾನವಿಕಗಳಲ್ಲಿ ವ್ಯವಸ್ಥಿತ ಕ್ರಮ-ಶ್ರಮಗಳನ್ನು ಅಳವಡಿಸಿಕೊಂಡು ವಿಚಾರ ಮಾಡಲಾದ ವಿಮರ್ಶೆ ಎಂಬ ತೀರ್ಮಾನಕ್ಕೆ ಬರುವುದಾದರೆ ಶಾಸ್ತ್ರವೂ ಹೌದು; ಕಲೆಯೂ ಹೌದು ಎಂದು ಒಪ್ಪಲೇಬೇಕು.  ಇನ್ನೂ ಮುಂದುವರಿದು, ಸಂಶೋಧನೆ ಎಂದರೆ ಗಂಭೀರ ಸತ್ಯಗಳನ್ನು ಕಾಣಿಸಿಕೊಡುವ ಮಾರ್ಗೋಪಾಯ. ಅದು ತನ್ನೊಡಲಲ್ಲಿ ನಿರ್ದಿಷ್ಟ ದಾರಿಗಳಿಂದ (ಶಾಸ್ತ್ರೀಯ/ವೈಜ್ಞಾನಿಕ) ಊಹಾತ್ಮಕ ನಿಲುವು (ತಾರ್ಕಿಕ/ತಾತ್ತ್ವಿಕ)ಗಳ ಮೂಲಕ ಕಂಡುಕೊಳ್ಳುವ ವಿಶಿಷ್ಠ ಸಾಧ್ಯತೆ (ಕಲಾತ್ಮಕ) ಎನ್ನಬಹುದು.


(ಗೆಳೆಯ ಎಚ್ ಎಸ್ ಸತ್ಯನಾರಾಯಣ, ಬೆಂಗಳೂರು- ಇವರು ಕೇಳಿದ ಪ್ರಶ್ನೆಗೆ ಕೊಟ್ಟ ಬರೆಹದುತ್ತರ)

 30-03-2012 ರ ರಾತ್ರಿ 11.50