Thursday 17 July 2014

ಅರ್ಥ ಹಚ್ಚುವ ವ್ಯರ್ಥಾಲಾಪ- ಚಿತ್ರಕವಿತ




                  ಅರ್ಥ ಹಚ್ಚುವ ವ್ಯರ್ಥಾಲಾಪ

ಪ್ರೊ. ಡಿ. ಅಣ್ಣಾಜಿಗೌಡ ಅವರು,  ಪ್ರಾಂಶುಪಾಲರು- ಇವರು ದಿನಾಂಕ 16-07-2014 ರಂದು ಚಿತ್ರವೊಂದನ್ನು ತೋರಿಸಿ, 

ಕೇಳಲಾದ ಪ್ರಶ್ನೆಗೆ ಹೀಗೆ ಪದ್ಯವೊಂದನ್ನು ಬರೆಯುವುದರ ಮೂಲಕ ಪ್ರತಿಕ್ರಿಯಿಸಿದ ಬಗೆ............




ಏಕೆ

ಈ ಕಾಯುವಿಕೆ


ಎಂದು ಕೇಳುವಂತಿಲ್ಲ:


ಕಾದರೆ ತಾನೆ ಕಾಯಿ ಹಣ್ಣಾಗುವುದು


ಹಣ್ಣು ಮಣ್ಣಾಗಿ, ಆ ಮಣ್ಣಿನಿಂ ಬೀಜ ಮೊಳೆತು ಮರವಾಗುವುದು......       




ನೀವು ಹೀಗೆ ಅಕ್ಕಪಕ್ಕ ನಿಂತರೂ ಯಾರು ಯಾರನೂ ನೋಡದೆ


ನೋಡುತಿರುವುದಿನ್ನೇನು? ಇನ್ನೆಲ್ಲಿಗೆ ಹೊರಡುವಾತುರವೇನು!?


ಯಾವ ಬಂಡಿಯ ಹಾದಿ ಕಾಯುತಿರುವಿರಿ;


ಯಾರು ಯಾರನು ಆಲಿಸುತಿರುವಿರಿ? ಇನ್ನೂ ಪಯಣಿಸುವ ತವಕ ಹೊಂದಿರುವಿರಿ!


ಬರಲಿರುವ ನೆಂಟರಿಷ್ಟರ ಬರ ಮಾಡಿಕೊಳ್ಳುವ ರೀತಿ-ನೀತಿಯೇ?




ಏನನಂದುಕೊಂಡರೂ ನೀವು ನೊಂದುಕೊಳ್ಳುವುದಿಲ್ಲ, ಏಕೆಂದರೆ


ಕಾಲರಾಯನು ಅನವರತ ನಡೆದ ಹೆಜ್ಜೆ ಸಪ್ಪಳ ಮೊಗದಲಿ ಅಪ್ಪಳಿಸಿದೆಯಲ್ಲ!




                ***************************




ಚಿತ್ರದಲಿ ಕಂಡ ರೂಪಿಂಗೆ ಪತ್ರ ಬರೆಯಲಾದೀತೆ?


ವಿವರ ಕೊಟ್ಟು ಪ್ರವರ ಓದಲಾದೀತೆ??




ಎಷ್ಟು ಮಾತಾಡಿದರೂ ನಿಮ್ಮ ಮೌನಕೆ ಅರ್ಥ ಸಿಕ್ಕುವುದಿಲ್ಲ


ಯಾವ ನುಡಿಯ ಬೆಡಗೂ ನಿಮ್ಮನರಿಯುವುದಿಲ್ಲ, ಏನಿದ್ದರೂ ನಮ್ಮದು ಅರ್ಥ ಹಚ್ಚುವ ವ್ಯರ್ಥ ಸಾಹಸ.........




ಸೂರ‍್ಯ ಮುಳುಗಿದನೆಂದು ಅತ್ತು ಒಳಗೆ ಕೂತರೆ


ತಪ್ಪಿ ಹೋಗುವುದಂತೆ ಹೊಳೆವ ಚಂದ್ರ-ತಾರೆ


-ಹಾಗಾಗಿ,


ಈ ಅಷ್ಟೂ ಮಂದಿಯ ಭಂಗಿ, ತುಸುವೇ ಬಾಗಿ- ‘ಕಾಯುವುದೇ ತಪಂ’ ಎಂದು ಹೀಗೆ


ಹುಮ್ಮಸ್ಸಿನುತ್ಸಾಹ-ಮುಪ್ಪಾದರೂ ದೇಹ


ಕಾತರದಿಂದಿರುವುದ ನೋಡಿದರೆ: ನಮಗದು ಪಾಠ!




ಕಾಯಬೇಕು; ಕಾಯ ಮಾಗಬೇಕು; ಕಾಯುವುದು ತಪ್ಪಲ್ಲ; ತಪಸ್ಸು ಎಂದು ತಿಳಿಯಬೇಕು,




ಕಾದ ನೀರೂ ಬೆಂಕಿಯನಾರಿಸಬಲ್ಲುದೆಂಬ


ಸತ್ಯ ನಮಗಿನ್ನಾದರೂ ಅರಿವಾಗಬೇಕು. 



– ಮಂಜುರಾಜ್ ಎಚ್ ಎನ್, ಕನ್ನಡ ವಿಭಾಗ,  17-07-2014, ಬೆಳಗ್ಗೆ 10  ಗಂಟೆ