Sunday 16 May 2021

ಜಗಜ್ಜ್ಯೋತಿಯ ಹೃದಯದಂತಃಕರಣ-ಲೇಖನ

 

ಜಗಜ್ಜ್ಯೋತಿಯ ಹೃದಯದಂತಃಕರಣ



          ಎನಗಿಂತ ಕಿರಿಯರಿಲ್ಲ; ಶಿವಶರಣರಿಗಿಂತ ಹಿರಿಯರಿಲ್ಲಎಂದ ಬಸವಣ್ಣನವರು ಶರಣ ಚಳವಳಿಯ ನೇತಾರರು. ಸಜ್ಜನ ವ್ಯಕ್ತಿಯಾಗಿ ಮತ್ತು ಪ್ರಖರ ಶಕ್ತಿಯಾಗಿ ಇವರು ನುಡಿದು ಅದರಂತೆ ನಡೆದ ಮತ್ತು ಸುಮಾರು ಸಾವಿರದೈನೂರು ವಚನಗಳನ್ನು ಬರೆದ ಎಲ್ಲವೂ ನಮ್ಮ ಪಾಲಿಗೆ ಮತ್ತು ಬಾಳಿಗೆ ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು!ಅವರೇ ಹೇಳುವಂತೆ ಬೇರೆ ಬಾವಿಯ ತೋಡಿ ಉಪ್ಪನೀರನುಂಬುವುದೇತಕೆ?’
 
          ಅಣ್ಣನವರು ಆ ಕಾಲದಲ್ಲಿದ್ದ ಮೌಢ್ಯ ಮತ್ತು ಕಂದಾಚಾರಗಳನ್ನು ಪ್ರಶ್ನಿಸಿ ಸುಮ್ಮನೆ ಕುಳಿತವರಲ್ಲ, ಪರ್ಯಾಯ ಸಮಾಜವೊಂದನ್ನು ಕಟ್ಟಬಯಸಿದರು. ಮನುಷ್ಯ ಮಾತ್ರವಲ್ಲ, ಸಕಲ ಜೀವಿಗಳಿಗೂ ಲೇಸನು ಬಯಸುವ ಸಮಾನತಾ ರಾಜ್ಯದ ಕನಸದು. ದಾಸ್ ಕ್ಯಾಪಿಟಲ್ ಬರೆದ ಕಾರ್ಲ್‌ಮಾರ್ಕ್ಸ್ ಹುಟ್ಟುವ ಏಳುನೂರು ವರುಷಗಳ ಮುಂಚೆಯೇ ಇಡೀ ಜಗತ್ತಿನಲ್ಲಿ ಸ್ವಾತಂತ್ರ್ಯವೂ ಸಮಾನತೆಯೂ ಇರುವ ಕಲ್ಯಾಣರಾಜ್ಯವನ್ನು ಸಂಸ್ಥಾಪಿಸಲು ಭರದಿಂದ ಹೊರಟಿತ್ತು ಬಸವಪ್ರಣೀತ ಶಿವಶರಣ ಚಳವಳಿ. ಕೊನೆಯಲ್ಲಿ ಮತ್ತದೇ ಪಟ್ಟಭದ್ರರ ಕೈಗೆ ಸಿಕ್ಕು ದುರಂತವಾಯಿತು. ಒಳಿತನ್ನು ಕೆಡುಕು ನುಂಗಿ ನೀರು ಕುಡಿಯಿತು. ಇದರಂಥ ವಿಪರ್ಯಾಸ ಇನ್ನೊಂದಿಲ್ಲ. ಮನುಕುಲದ ದೌರ್ಭಾಗ್ಯವಿದು.
 
          ಬಸವಣ್ಣನವರು ಉಳಿದ ವಚನಕಾರರಿಗಿಂತ ವಿಭಿನ್ನರಾಗಿ ನಿಲ್ಲುವುದು ಅವರ ತಾಳುವಿಕೆ ಮತ್ತು ವಿನಯವಂತಿಕೆಗಳಿಂದ. ನಮ್ಮೆಲ್ಲ ದುಷ್ಟ ಸ್ವಭಾವಗಳಿಗೆ ಮೂಲ ಕಾರಣವನ್ನು ಅಣ್ಣ ಹುಡುಕಿಕೊಂಡಿದ್ದರು. ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧದೇವ ಹೇಳಿದಂತೆ, ಎಲ್ಲ ದುರ್ವ್ಯಾಪಾರಗಳಿಗೆ ಮೂಲ ಮನುಷ್ಯನ ಅಹಂಕಾರ. ಇದನ್ನು ನಿತ್ಯ ಮನೆಯ ಕಸ ಗುಡಿಸುವ ತೆರದಿ, ಮನಸ್ಸಿನ ಕಸ ಗುಡಿಸಿ, ದೇಹವೆಂಬ ದೇಗುಲವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಂತರಂಗ ಶುದ್ಧಿಯನ್ನು ಸಾಧಿಸಬೇಕು. ಇದೇ ಕೂಡಲಸಂಗನನ್ನು ಒಲಿಸಿಕೊಳ್ವ ಪರಿ ಎಂದರು.
 
          ಎಲ್ಲ ವಚನಕಾರರೂ ಮಂಡೆ ಬೋಳಾದಡೇನು; ಮನ ಬೋಳಾದಡಲ್ಲದೆ ಎಂಬುದನ್ನು ಪರಿಪರಿಯಾಗಿ ಹೇಳಿರುವರಾದರೂ ಬಸವಣ್ಣನವರು ಒಂದು ಕೈ ಮಿಗಿಲು. ಹದಿನೈದು ಕೋಟಿ ವಚನಗಳನ್ನು ಹಾಡಿ ದಣಿದಿತ್ತು ಎನ್ನ ಮನ ಎಂದು ಶರಣರು ಒಂದು ಕಡೆ ಹೇಳಿರುವರು! ಅಂತಹುದರಲ್ಲಿ ನಮಗೆ ಉಪಲಬ್ಧವಿರುವುದು ಕೇವಲ ಹದಿನೈದು ಸಾವಿರ ವಚನಗಳು ಮಾತ್ರ. ಅಂದರೆ ಶೇಕಡಾ ಒಂದರಷ್ಟು! ಇದರಲ್ಲಿ ಬಸವಣ್ಣನವರ ರಚನೆಗಳು ಸಾವಿರದೈನೂರು ಮಾತ್ರ. ಅಂದರೆ ಸಿಕ್ಕಿರುವುದರಲ್ಲಿ ಶೇಕಡಾ ಹತ್ತರಷ್ಟು!! ಇನ್ನುಳಿದ ತೊಂಬತ್ತರಷ್ಟು ವಚನಗಳು ರಚನೆಯಾಗಿರುವುದು ಉಳಿದ ಶಿವಶರಣ ಮತ್ತು ಶರಣೆಯರ ಮೂಲಕ.
 
          ಹೀಗೆ ನೂರಾರು ವಚನಕಾರರು ಅದರಲ್ಲೂ ಬಸವಣ್ಣನವರ ಕಲ್ಯಾಣಕ್ರಾಂತಿಯನ್ನು ಕೇಳಿದ ಮಾತ್ರದಿಂದಲೇ ದೇಶದ ನಾನಾ ಮೂಲೆಗಳಿಂದ ಬಂದಂಥ ಈ ಭಕ್ತಗಡಣವು ಅನುಭವಮಂಟಪವೆಂಬ ಒಂದು ಸೂರಿನ ಕೆಳಗೆ ನೆಲೆ ನಿಂತು, ಸಹಭೋಜನ, ಸಹಬಾಳ್ವೆ ಮತ್ತು ಸಮಾನ ದೃಷ್ಟಿಧೋರಣೆಗಳಿಂದ ಪರಸ್ಪರ ಪ್ರೀತಿ ಗೌರವಗಳನ್ನು ಕೊಟ್ಟು, ಪಡೆದು ಸಂವಾದಿಸುತ್ತಿದ್ದರು ಎಂದರೆ ಮೈಮನ ರೋಮಾಂಚಿತಗೊಳ್ಳುತ್ತದೆ. ಅಂಥ ಒಂದು ಸರಳ ಸುಂದರ ಡೆಮಾಕ್ರಸಿಯೊಂದನ್ನು ಹನ್ನೆರಡನೇ ಶತಮಾನದಲ್ಲಿ ನಮ್ಮ ಕನ್ನಡನಾಡು ಕಾರ‍್ಯರೂಪಕ್ಕಿಳಿಸಿ, ಅನುಭವಿಸಿತ್ತು!
 
          ಶೂನ್ಯಸಿಂಹಾಸನಾಧೀಶರಾದ ಅಲ್ಲಮಪ್ರಭುಗಳು ದೇವರಂತಿದ್ದು ಮಾರ್ಗದರ್ಶನ ನೀಡುತ್ತಿದ್ದರು. ಮಿಕ್ಕಂತೆ ಬಸವಣ್ಣನವರು ಇದರ ಸಂಚಾಲಕರಾಗಿ ನಡೆಸಿಕೊಂಡು ಹೋದರು. ಬಿಜ್ಜಳರಾಜನ ಆಸ್ಥಾನದಲ್ಲಿ ವಿತ್ತಮಂತ್ರಿಯಾಗಿ ತಮ್ಮ ಕಾಯಕ-ದಾಸೋಹ, ನುಡಿನಡೆಶುದ್ಧಿ, ಗುರುಲಿಂಗಜಂಗಮ ಮೊದಲಾದ ಗಹನತತ್ತ್ವಗಳನ್ನು ಅನುಷ್ಠಾನಕ್ಕೆ ತಂದು ಊರ ಮುಂದೆ ಹಾಲ ಹಳ್ಳ ಹರಿಸಿದರು. ದುಡಿಯದೇ ತಿನ್ನಬಾರದು; ಶಿವ ಮೆಚ್ಚುವುದಿಲ್ಲ ಎಂಬ ಅಣ್ಣನ ಒಂದೇ ಮಾತು ಸಮಾಜದಲ್ಲಿ ಬೇರೂರಿದ್ದ ಜಡತೆಯನ್ನು ಹೋಗಲಾಡಿಸಿತು. ತಾನು ಆಚರಿಸದೇ ಉಪದೇಶ ಮಾಡಬಾರದು ಎಂಬ ಒಂದೇ ನಡತೆ ಜನರಲ್ಲಿ ಆತ್ಮಗೌರವ ಮತ್ತು ಸಂವೇದನಾಶೀಲತೆಯನ್ನು ಹರಡಿತು. ದೇಹವೇ ದೇಗುಲ, ಸ್ಥಾವರಕ್ಕಳಿವುಂಟು; ಜಂಗಮಕ್ಕಳಿವಿಲ್ಲ, ಕರಸ್ಥಲಲಿಂಗ ಎಂಬ ಹೊಸ ಕಾಣ್ಕೆಯು ಧಾರ್ಮಿಕ ಸಮಾನತೆಯನ್ನು ಸಾಧಿಸಿಬಿಟ್ಟಿತು!
 
          ಕಾಯಕವೇ ಕೈಲಾಸ ಎಂಬ ಒಂದೇ ದರ್ಶನೋಕ್ತಿಯು ವೃತ್ತಿಗೌರವ ಮತ್ತು ಘನತೆಯನ್ನು ತಂದಿಕ್ಕಿತು. ಮಾತ್ರವಲ್ಲ, ಪರೋಕ್ಷವಾಗಿ ಆರ್ಥಿಕ ಸದೃಢತೆಯನ್ನು ಸಾಧಿಸಿತು. ಜಾತಿ ಮತ್ತು ವೃತ್ತಿ ತಾರತಮ್ಯ ಕಣ್ಮರೆಯಾಗಿ ಮನುಷ್ಯ ಘನತೆಯೇ ಮುಂದಾಗಿ ಜೀವ-ದೇವ ಸಂಗಮವೇ ಆಯಿತು. ಒಂದೇ ಮಾತಿನಲ್ಲಿ ಹೇಳುವುದಾದರೆ, ಚಲನಶೀಲ ಸಮಾಜವನ್ನು ಬಸವಣ್ಣ ಪ್ರಣೀತ ಶರಣಸಮೂಹ ಪರಿಚಯಿಸಿತು. ಹೀಗಾಗಿಯೇ ಸಾಮಾಜಿಕ, ಧಾರ್ಮಿಕ, ಆರ್ಥಿಕ ರಂಗಗಳು ಹೊಸ ಗಾಳಿ, ಹೊಸ ನೀರು ಮತ್ತು ಹೊಸ ಉಮೇದುಗಳಿಂದ ಕಂಗೊಳಿಸಿದವು. ಪ್ರಕೃತಿಯಲ್ಲಿ ನಿತ್ಯ ವಸಂತ ಮೂಡಿತು. ತಂಗಾಳಿ ಸೋಂಕಿತು. ಧಾರಾಳ ಮಳೆ-ಬೆಳೆ ಲಭಿಸಿ, ಉಳಿದವರಿಗೆ ಪವಾಡಸದೃಶವೆನಿಸಿತು.
 
          ಬಸವಣ್ಣನವರು ಬಾಹ್ಯಕ್ಷೇತ್ರದಲ್ಲಿ ಎಲ್ಲರ ಸಹಾಯ ಸಹಕಾರಗಳಿಂದ ತಾವಂದುಕೊಂಡದ್ದನ್ನು ನಿರ್ಮಿಸುತ್ತಾ, ಆಂತರ್ಯದಲ್ಲಿ ಮಾತ್ರ ಆಧ್ಯಾತ್ಮಿಕ ಸಾಧನೆಯನ್ನು ತೀವ್ರತರವಾಗಿ ನಡೆಸುತ್ತಾ ವಿನೀತರಾಗುತ್ತಾ ಶಿವಸಾಯುಜ್ಯಕ್ಕೆ ಹಾತೊರೆಯುತ್ತಿದ್ದರು. ಏಕಾಂತವನ್ನೂ ಲೋಕಾಂತವನ್ನೂ ಈ ತಪೋಮಹಿಮ ಅದು ಹೇಗೆ ಸರಿದೂಗಿಸಿಕೊಂಡು ಹೋಗುತ್ತಿದ್ದರು ಎಂಬುದೇ ಅದ್ಭುತ ಪವಾಡ!
 
          ಒಂದು ಜೀವಕೋಶದ ರಚನೆ ಮತ್ತು ಈ ವಿಶ್ವದ ಸಂರಚನೆ ಎರಡೂ ಒಂದೇ ಹಾಗೂ ಒಂದರಿಂದಲೇ ವಿಕಸಿತವಾದವು ಎಂಬ ಅದ್ವೈತಭಾವ ಬಸವಣ್ಣನವರದು. ಹಾಗಾಗಿಯೇ ಇವರ ವಚನಗಳು ಸಾಧಕನ ಸಾಧನೆಯ ಹಂತದಲ್ಲಿ ಎದುರಾದ ಎಲ್ಲ ಎಡರು ತೊಡರುಗಳನ್ನೂ ಮನಸ್ಸಿನ ಮರ್ಕಟ ವಿನ್ಯಾಸಗಳನ್ನೂ ಯಾವ ಅಳುಕಿಲ್ಲದೇ ತೆರೆದಿಡುತ್ತವೆ. ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು! ತೇಲಲೀಯದು ಗುಂಡು; ಮುಳಗಲೀಯದು ಬೆಂಡು!! ಇಂತಪ್ಪ ಸಂಸಾರ ಶರಧಿ.......ಯನ್ನು ಈ ಲೋಕಬಂಧು ಇನ್ನಿಲ್ಲದಂತೆ ಪರಿಪರಿಯಾಗಿ ವರ್ಣಿಸುತ್ತಾರೆ. ಹಾಗೆಯೇ ಅಹಂಭಾವ ಕಳೆದುಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗನಾಗಿ ಶಿವಭಕ್ತರಿಗೆ ನೈವೇದ್ಯವಾಗಿ ಬಿಡಬೇಕೆಂದು ಹಲುಬುತ್ತಾರೆ. ಹಮ್ಮು ಬಿಮ್ಮು ಕಳೆದುಕೊಂಡು, ತನ್ನ ತಾನರಿತು ನುಡಿಯೆಲ್ಲ ತತ್ತ್ವವಾದ ಅಪೂರ್ವ ವಿನಯ ವಿನಮ್ರತೆಗಳಿಂದ ಕಂಗೊಳಿಸುತ್ತಾ ಅಪಾರ ಮುಗ್ಧತೆಯ ಮಗುವಾಗಿ ಮಾರ್ಪಾಟಾದ ಬಸವಣ್ಣನವರು ನೊಂದವರ ಕಣ್ಣೀರನೊರೆಸುತ್ತಾ ಗುರುಲಿಂಗಜಂಗಮರ ಸೇವೆ ಮಾಡುತ್ತಾ ಜಗಜ್ಜ್ಯೋತಿಯಾದರು; ಎಲ್ಲರ ಮನೆಯ ಬೆಳಕಾದರು; ನೇರವಾಗಿ ಹೃದಯಕ್ಕೆ ಲಗ್ಗೆಯಿಟ್ಟು ಅಲ್ಲಿ ಶಾಶ್ವತವಾಗಿ ನೆಲೆಯೂರಿದರು.
 
          ಹಬ್ಬಕೆಂದು ತಂದ ಹರಕೆಯ ಕುರಿಯೊಂದು ತೋರಣ ಕಟ್ಟಲೆಂದು ತಂದಿಟ್ಟಿದ್ದ ಮಾವಿನ ಚಿಗುರನ್ನು ತಿನ್ನುತ್ತಿದೆ! ಕೆಲವೇ ನಿಮಿಷಗಳಲ್ಲಿ ತನ್ನನ್ನು ಕೊಲ್ಲುತ್ತಾರೆಂದು ಆ ಕುರಿಯು ತಿಳಿಯದೇ!! ಈ ವಚನ ಬರೆಯುತ್ತಾ ಅಣ್ಣನವರು ಕೊನೆಗೆ ಸಮಾಪ್ತಿ ಮಾಡುವುದು ಹೀಗೆ: ಕೊಂದವರುಳಿದರೇ ಕೂಡಲಸಂಗಮದೇವಾ?’ ಹೀಗೆ ಜನರಲ್ಲಿ ಅಹಿಂಸೆಯನ್ನು ಬೋಧಿಸುತ್ತಾ ದಯೆಯನ್ನು ಬಿತ್ತಿ ಬೆಳೆದರು. ದಯೆಯಿಲ್ಲದಾ ಧರ್ಮ ಅದೇವುದಯ್ಯ?’ ಎಂದರು. ಬಾರದು ಬಪ್ಪದು; ಬಪ್ಪುದು ತಪ್ಪದುಎನ್ನುವುದರ ಮೂಲಕ ವಿಶ್ವನಿಯಮವನ್ನು ಅರಿತು ಬದುಕು ಎಂದಚ್ಚರಿ ಮೂಡಿಸಿದರು. ನಿಮ್ಮ ಶರಣರ ಪಾದಎಂದು ಬಾಗುತ್ತಾ ಭಕ್ತಿಯ ಪರಾಕಾಷ್ಠೆ ತಲಪಿದರು.
 

          ಕಲ್ಯಾಣಕ್ರಾಂತಿಯು ವಿಫಲಗೊಂಡು, ಬಿಜ್ಜಳನ ಹತ್ಯೆಯಾಗಿ, ಶಿವಶರಣರು ದಿಕ್ಕಾಪಾಲಾಗಿ ಹೋದ ಮೇಲೆ, ಕರ್ಪೂರವೊಂದು ಸುವಾಸನೆ ಬೀರುತ್ತಾ, ಸುತ್ತಲೆಲ್ಲ ಪಸರಿಸಿ ತಾನಿಲ್ಲವಾಗುವ ಹಾಗೆ ತಾವು ನಂಬಿ, ಆರಾಧಿಸಿ, ಅರ್ಚಿಸುತಿದ್ದ ಸಂಗಮನಲ್ಲಿ ಲೀನವಾದರು. ಇಂಥ ವಿಶ್ವಜ್ಯೋತಿ, ಸಮಾನತೆಯ ಸಖ, ಆಧ್ಯಾತ್ಮಿಕ ಗುರುವು ಶಿವನನ್ನು ಪೂಜಿಸುತ್ತಾ, ಕೂಡಲಸಂಗಮದೇವ ಎಂದರು; ನಮ್ಮ ಪಾಲಿಗೆ ಬಸವಣ್ಣನವರೇ ದೇವರಾದರು. ಇಂಥವರು ದೇವರಲ್ಲದೇ ಇನ್ನಾರನ್ನು ದೇವರೆನ್ನಬೇಕು? ತಲೆಯೊಳಗೆ ಮಿದುಳಲ್ಲ, ಹೃದಯವನ್ನಿರಿಸಿ ಕೇಳಿಸಿ, ನೀವೇ ತೀರ್ಮಾನಿಸಿ.

 

              **************