Friday 10 April 2020

ಕರೋನದಿಂದ ಕಲಿಯುವುದೇನು?


ಕರೋನಾದಿಂದ ಕಲಿಯುವುದೇನು?
ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ


    ಲೋಕವನು ಕಲ್ಲವಿಲಗೊಳಿಸುತಿರುವ ಕರೋನಾ ಕುರಿತು ಮಾತಾಡುವುದೇನಿಲ್ಲ; ದಿಗ್ಭ್ರಮೆಯಾದಾಗ ಯಾರಾದರೂ ಮಾತಾಡಲು ಸಾಧ್ಯವೆ? ಲೋಕದ ಜನರನು ಕೇವಲ ಮೂರು ವಿಧಗಳಲ್ಲಿ ವಿಂಗಡಿಸುವಂತಾಗಿದೆ: ಸೋಂಕಿತರು, ಶಂಕಿತರು ಮತ್ತು ಆತಂಕಿತರು! ಎಂಥ ವಿಪರ್ಯಾಸವಲ್ಲವೆ?


           ಕೇವಲ ಕಣ್ಣೀರು, ಆತಂಕ, ಭಯ, ನೋವು, ಸಾವು, ಚಡಪಡಿಕೆ, ಬದುಕಲು ಹೆಣಗುವಿಕೆ, ಸದ್ದಿಲ್ಲದ ಕರಾಳ ಕ್ರೌರ‍್ಯ, ಯಾರ ಮೇಲೋ ಸಿಟ್ಟು ಮತ್ತು ದ್ವೇಷ, ಯಾರಿಂದಲೋ ನಿರೀಕ್ಷೆ ಜೊತೆಗೆ ನಿರಾಶೆ, ಮದ್ದು ಸಿಗಬಹುದೆಂಬ ಆಶಾಭಾವ, ಆರ್ಥಿಕ ನಷ್ಟ, ಆದಾಯ ಕುಸಿತ, ಪ್ರಗತಿಗೆ ಹೊಡೆತ, ಮುಂಜಾಗರೂಕತಾ ಕ್ರಮ, ಸುದ್ದಿ ಮಾಧ್ಯಮಗಳ ಅವಲಂಬನೆ, ಇದ್ದಕ್ಕಿದ್ದಂತೆ ನಮ್ಮವರೆಲ್ಲ ಪರಕೀಯರಾದ ಪಾಪಪ್ರಜ್ಞೆ, ಅಗಾಧ ಪುರುಸೊತ್ತು, ನೆಗಡಿ-ಕೆಮ್ಮಿಗೆ ಸಾವಿನ ಅಧೀರತೆ, ಭಯಾನಕ ಚಿಂತೆ, ನಾವು ಸತ್ತುಹೋಗಬೇಕಲ್ಲಾ ಎಂಬ ದುಃಖ, ಸಾಯದೇ ಬದುಕುವುದು ಹೇಗೆ? ಎಂಬ ಪರಿ ಪರಿ ಪಡಿಪಾಟಲು ಒಟ್ಟಿನಲ್ಲಿ ಕರೋನಾ ನಮ್ಮನ್ನು ಆಧುನಿಕತೆಯ ನಾಗಾಲೋಟದ ಅವಸರ ಜಗತ್ತಿನಲ್ಲಿ ಹಿಂದೆ ತಿರುಗಿ ನೋಡುವಂತೆ ಮಾಡಿದ್ದು ಸತ್ಯಸ್ಯ ಸತ್ಯ.


     ನಾನಿಲ್ಲಿ ಅದರ ರೂಪ-ಸ್ವರೂಪ, ಚಿಕಿತ್ಸೆ, ಹುಟ್ಟು-ಬೆಳವು, ಹೀಗೆ-ಹಾಗೆ ಎಂದು ಹೇಳಲು ಇದನ್ನು ಬರೆಯುತ್ತಿಲ್ಲ. ನಾನು ವೈದ್ಯನೂ ಅಲ್ಲ; ರೋಗಿಯೂ ಅಲ್ಲ! ಇದೊಂದರಿಂದ ನಾವು ಕಲಿತ ಮತ್ತು ಕಲಿಯಬೇಕಾದ ಪಾಠಗಳೇನು? ಎಂದು ಮನದಲ್ಲಿ ಮಗುಮ್ಮಾಗಿ ಮಗುವಿನಂತೆ ನನ್ನನೇ ನಾನು ಕೇಳಿಕೊಳ್ಳುತ್ತಿರುವೆ.



     ದೇವರ ಶಾಪವೆಂದರೆ ಇದೇ ಇರಬೇಕು, ನಿಸರ್ಗದಿಂದ ದೂರ ಸರಿದಿದ್ದರ ಪ್ರತಿಫಲ ಇದಾಗಿರಬೇಕು, ಖ್ಯಾತ ಗೀತ ರಚನೆಕಾರರಾದ ಶ್ರೀ ಯೋಗರಾಜಭಟ್ಟರು ಹೇಳಿದರೆನ್ನಲಾದ ಮಾತೊಂದು ನನ್ನನ್ನು ಕಾಡುತ್ತಿದೆ: “ಅಕಸ್ಮಾತ್ ನರಮನುಷ್ಯರೆಲ್ಲ ಭೂಲೋಕಕ್ಕೆ ವೈರಸ್‍ಗಳಾಗಿದ್ದು, ಈ ಕರೋನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ವಾಗಿದ್ದರೆ ಏನು ಮಾಡುವುದು?” ವೈರಸ್ಸನ್ನು ವೈರಿಯೆಂದುಕೊಂಡಿರುವ ನಾವೇ ಭೂಮಿಗೆ ವೈರಸ್‍ಗಳಾಗಿದ್ದೇವೆ ಎಂದು ಕೊಂಡರೆ ಹೊರ ಬರುವ ಸತ್ಯ ಏನಿದೆ? ಅದನ್ನು ಕುರಿತು ಮನುಕುಲ ಆಲೋಚಿಸಬೇಕಿದೆ.


    

     ನಮ್ಮ ಜೀವನ ಹಳಿ ತಪ್ಪಿದ್ದರಿಂದಲೇ ಅಲ್ಲವೆ? ಇಂಥ ಅನಾಹುತ ಆಗುತ್ತಿರುವುದು. ‘ಇದರಲ್ಲಿ ನನ್ನ ಪಾತ್ರವಿಲ್ಲ, ನಾನು ಸರಳ-ವಿರಳ’ ಎಂದು ಏನೇ ಬೊಬ್ಬೆ ಹೊಡೆದುಕೊಂಡರೂ ಯಾರು ಕೇಳುತ್ತಾರೆ? ನಿಸರ್ಗಕ್ಕೆ ಎಲ್ಲರೂ ಒಂದೇ! ಈ ಅಖಂಡ ವಿಶ್ವದಲ್ಲಿ ಎಲ್ಲವೂ ಪರಸ್ಪರ ಮತ್ತು ವೃತ್ತದೊಳಗೆ ಬರುವ ಸಹ ಸಂಬಂಧಿಕರು!! ಒಂದೇ ಸರಪಳಿಯಲ್ಲಿ ಬಂಧಿತವಾಗಿರುವ ಕೊಂಡಿಗಳು ನಾವು. ಯಾರೋ ತಪ್ಪು ಮಾಡಿದರೆ ಮತ್ತಾರೋ ಶಿಕ್ಷೆ ಅನುಭವಿಸಲೇಬೇಕು, ಇದು ನಿಸರ್ಗ ನಿಯಮ.


     ಇದು ಆಹಾರದಿಂದ ಒದಗಿ ಬಂದ ಅನಾಹುತವೋ? ಜೈವಿಕ ಅಸ್ತ್ರವೋ? ದೇಶಗಳ ಚಿತಾವಣೆಯೋ? ಭೂಮಿಯ ಅಂತ್ಯಕಾಲವೋ? ಆಗಿನಿಂದಲೂ ಪ್ರಳಯವೆಂದು ಬಡಬಡಿಸಿದವರ ಭವಿಷ್ಯವಾಣಿಯ ನಿಜರೂಪವೋ? ದೈವ ನಿಯಾಮಕವೋ? ವಿಧಿ ಲಿಖಿತವೋ? ಏನೇ ಹೆಸರು ಕೊಟ್ಟು ಚರ್ಚಿಸುತ್ತಾ, ಯಾರನ್ನೋ ದೂಷಿಸುತ್ತಾ ನಮ್ಮ ಅಸಹನೆ-ಅಸಮಾಧಾನ-ಸಿಟ್ಟುಗಳನ್ನು ಹೊರ ಹಾಕಬಹುದು. ಇದನ್ನೇ ಅಲ್ಲವೇ ನಾವೀಗ ಮಾಡುತ್ತಿರುವುದು!? ನನ್ನ ಪ್ರಶ್ನೆಯೇನೆಂದರೆ ನಾವು ಇನ್ನಾದರೂ ಬದಲಾಗುತ್ತೇವೆಯೇ? ‘ನಾಯಿಯ ಬಾಲ ಡೊಂಕು ಅಲ್ಲವೇ?’ ಎಂದುಕೊಂಡು ‘ನಾನು ಸರಿಯಿದ್ದೇನೆ; ಉಳಿದವರು ಸರಿಯಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನೇ ಮುಂದುವರಿಸುತ್ತೇವೆಯೇ?



     ಸಮ ಸಮಾಜ ನಿರ್ಮಾಣದ ಕನಸನ್ನು ಸಾಕಾರ ಮಾಡಿಕೊಳ್ಳಲು ನಾವು ಹೆಣಗಾಡುತ್ತಿರುವಾಗ ಈ ‘ಕರೋನ’ ಮಾಡಿದ್ದೇನು: ಮನುಷ್ಯರನ್ನು ಮುಟ್ಟದೇ ಇರಬೇಕಾದ, ದೂರವೇ ಉಳಿಯಬೇಕಾದ ಘನಘೋರ ದುಃಸ್ಥಿತಿ!


     ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಶಾಸನ-ಕಾನೂನುಗಳನ್ನು ರೂಪಿಸಿಕೊಂಡು ಹೋರಾಡುತ್ತಾ, ಮನಃ ಪರಿವರ್ತನೆಯನ್ನು ಮಾಡುತ್ತಾ ‘ನಾವೆಲ್ಲರೂ ಒಂದೆ: ಜಾತಿ ಒಂದೆ, ಕುಲ ಒಂದೆ, ನಾವು ಮನುಜರು’ ಎಂದು ಹಾಡುತ್ತಾ ಪ್ರಜಾಪ್ರಭುತ್ವದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಎತ್ತಿ ಹಿಡಿಯುತ್ತಾ ಬದುಕುತ್ತಿದ್ದ ನಮಗೆ ಈ ಕರೋನಾ ಮಹಾಮಾರಿ ಕೊಟ್ಟ ‘ಏಟನ್ನು’ ಕುರಿತು ಆಲೋಚಿಸಬೇಕಿದೆ.


     ಮತಧರ್ಮಗಳನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತಾಡುವವರು ಜನರಲ್ಲಿ ಆತ್ಮವಿಶ್ವಾಸವನ್ನು ತುಂಬದೇ ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಮಂದಿ ಹೀಗೆ ಸಾವನ್ನಪ್ಪುತ್ತಿದ್ದರೆ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದೇವೆ. ಸರ್ಕಾರ, ವೈದ್ಯಕೀಯ ಜಗತ್ತು ಮತ್ತು ಆರಕ್ಷಕ ವಲಯಗಳು ನಮ್ಮನ್ನು ಎಚ್ಚರಿಸುತ್ತಾ ಅಭೂತಪೂರ್ವ ಸೇವೆ ನೀಡುತ್ತಿವೆ. ಇಷ್ಟಾದರೂ ‘ಈ ಭುವಿಯ ಕೇಂದ್ರ ಮನುಷ್ಯನಲ್ಲ’ ಎಂಬುದನ್ನು ಕರೋನ ಸ್ಪಷ್ಟಪಡಿಸಿದೆ. ‘ಕಣ್ಣಿಗೆ ಕಾಣದ ನಾಟಕಕಾರ; ನಿನಗೇ ನನ್ನ ನಮಸ್ಕಾರ’ ಎಂಬ ಹಾಡನ್ನು ಗುನುಗಬೇಕಿದೆ. ಸೂಕ್ಷ್ಮ ವೈರಾಣುವೊಂದು ಹೀಗೆ ಸ್ಥೂಲ ಜಗತ್ತನ್ನು ಆಪೋಶನ ತೆಗೆದುಕೊಳ್ಳುತ್ತದೆಂದು ಯಾರು ತಾನೇ ಊಹಿಸಿದ್ದರು?


     ಖಂಡಿತ ಒಳ್ಳೆಯ ಕಾಲ ಬರುತ್ತದೆ, ವೈದ್ಯಕೀಯ ವಿಜ್ಞಾನವು ಈ ಸವಾಲನ್ನು ಎದುರಿಸಿ, ಸೂಕ್ತ ಮದ್ದು ಮತ್ತು ಚಿಕಿತ್ಸಾ ವಿಧಾನಗಳನ್ನು ರೂಪಿಸಿ ಕೊಡುತ್ತದೆ, ಆದರೆ ಅದಕ್ಕೆ ಸಮಯ ಬೇಕಾಗಿದೆ; ಅಲ್ಲಿಯವರೆಗೂ ಈ ಮಾರಣಹೋಮ. ಮುಂದೊಂದು ದಿನದಲ್ಲಿ ಕರೋನವನ್ನು ನಮ್ಮ ರೋಗ ನಿರೋಧಕ ಶಕ್ತಿ ಅರಗಿಸಿಕೊಳ್ಳಬಹುದು; ಇತರ ವೈರಾಣುಗಳಂತೆ ಚಿಕಿತ್ಸೆಗೆ ಬಗ್ಗಬಹುದು. ಇದನ್ನೆಲ್ಲ ನಾವು ಜಗತ್ತಿನ ಇತಿಹಾಸದಿಂದ ತಿಳಿಯಬಹುದಾಗಿದೆ. ಆದರೆ ಇಂಥ ಡೆಡ್ಲಿ ವೈರಾಣು ಲೋಕದ ಸಮಸ್ತವನ್ನೂ ಅಲ್ಲಾಡಿಸುತಿರುವ ಪರಿ ಮಾತ್ರ ಭೀಕರ! ನಮ್ಮ ಪುರಾಣದಲ್ಲಿ ಬರುವ ರಕ್ತ ಬೀಜಾಸುರನ ಕತೆಯಂತೆಯೇ!!


     ಆದರೆ ನಮ್ಮ ಅಲೋಚನಾ ಕ್ರಮ ಮತ್ತು ಜೀವನಶೈಲಿಗಳು ಬದಲಾಗದೇ ಇದ್ದರೆ ‘ಇಂಥ ಅಪಾಯ’ ಮುಂದೊಂದು ದಿನ ಖಂಡಿತ ಮನುಕುಲ ಮಾತ್ರವಲ್ಲ ಸಕಲ ಜೀವಿಗಳನೂ ಆಪೋಶನ ತೆಗೆದುಕೊಳ್ಳುವ ‘ಸದ್ದಿಲ್ಲದ ಪ್ರಳಯ’ವಾಗುವುದರಲ್ಲಿ ಸಂಶಯ ಕಾಣುತ್ತಿಲ್ಲ. ಪ್ರಕೃತಿಯು ಆಗಾಗ ಎಚ್ಚರಿಕೆಯ ಗಂಟೆಯನು ಬಾರಿಸುತ್ತಲೇ ಇರುತ್ತದೆ; ನಾವು ಮಾತ್ರ ಎಂದಿನಂತೆ ಕೇಳಿಸಿದರೂ ಕೇಳಿಸದ ಹಾಗೆ ಜಾಣಗಿವುಡರಾಗಿ ಬದುಕುತ್ತಲೇ ಇರುತ್ತೇವೆ. ಏನಾದರಿರಲಿ: ಪಾಠ ಕಲಿಯೋಣ ಮತ್ತು ‘ಅರಿ’ಯನ್ನು ಅರಿತು ಬಾಳೋಣ. ಲೋಕಾ ಸಮಸ್ತಾ ಸುಖಿನೋಭವಂತು.


 -ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
   

ದಿವಂಗತ ಪಾಟೀಲ ಪುಟ್ಟಪ್ಪನವರನ್ನು ಕುರಿತು


ಕನ್ನಡದ ಸಾಕ್ಷಿ: ಧೀಮಂತ ಮತ್ತು ನಿರ್ಭೀತ ಪಾಪು

ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ

ನಡೆನುಡಿ: 9900119518


     ಕನ್ನಡ ನಾಡಿನ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದು ತಮ್ಮ ಬರೆಹ ಮತ್ತು ಬದುಕಿನಿಂದ ನಾಡು ಮತ್ತು ನುಡಿಗೆ ಶಕ್ತಿಯುಣಿಸಿ, ಜೀವಧಾತುವಾದವರು ಇಬ್ಬರು ಪುಟ್ಟಪ್ಪಂದಿರು! ಒಬ್ಬರು ಕೆ ವಿ ಪುಟ್ಟಪ್ಪ: ರಸಋಷಿಯಾಗಿ ಕನ್ನಡಮ್ಮನನ್ನು ಮಾನಸ ಸರೋವರದಲ್ಲಿ ಮಡಿ ಮಾಡಿ ಗೌರೀಶಂಕರವನ್ನು ಹತ್ತಿಸಿ ಧನ್ಯರಾಗಿಸಿದವರು. ಮತ್ತೊಬ್ಬರು ಇತ್ತೀಚೆಗೆ ನಿಧನರಾದ ಅದಮ್ಯ ಕ್ರಿಯಾಶೀಲ ಚೇತನ ನಿಷ್ಠಾವಂತ ಪತ್ರಿಕೋದ್ಯಮಿಯಾದ ಪಾಟೀಲ ಪುಟ್ಟಪ್ಪನವರು.



     ಹುಬ್ಬಳ್ಳಿ ಮೂಲದ ಪಾಟೀಲ ಪುಟ್ಟಪ್ಪನವರು 1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಾವೇರಿಯ ಕುರುಬಗೊಂಡ ಹಳ್ಳಿಯಲ್ಲಿ ಜನಿಸಿ, ಗ್ರಾಮೀಣ ಪ್ರತಿಭೆಯಾಗಿ ವ್ಯಾಸಂಗ ಮಾಡಿದ ಪಾಪು ಅವರು ಮೊದಲಿಗೆ ಪ್ರಾರಂಭಿಸಿದ್ದು ವಕೀಲಿ ವೃತ್ತಿಯನ್ನು. ಕಕ್ಷಿಗಾರರಿಲ್ಲದೇ ಉದ್ಯೋಗವನ್ನರಸಿ ಮುಂಬೈಗೆ ಪಯಣಿಸಿದರು. ಅಲ್ಲಿ ಪತ್ರಿಕಾ ಕಚೇರಿಗಳ ನಂಟಿನಿಂದಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ ಕುದುರಿತು. ಬಾಂಬೆಯ ಕ್ರಾನಿಕಲ್ ಪತ್ರಿಕೆಯ ಮತ್ತು ಆ ಪತ್ರಿಕೆಯವರ ಸ್ನೇಹದಿಂದ ಅಮೆರಿಕೆಗೆ ತೆರಳುವಂತಾಯಿತು. ಜರ್ನಲಿಸಂನಲ್ಲಿ ಎಂಎಸ್‍ಸಿ ಪದವಿ ಗಳಿಸಿ, ಅಲ್ಲಿ ನಿಲ್ಲದೇ ಭಾರತಕ್ಕೆ ಹಿಂದಿರುಗಿ ಬಂದು, ವಿಶಾಲ ಕರ್ನಾಟಕ, ನವಯುಗ, ಮನೋರಮ, ಸ್ತ್ರೀ ಮಾಸಿಕ ಮತ್ತು ಪ್ರಪಂಚ ಎಂಬ ಪತ್ರಿಕೆಗಳನ್ನು ಶುರು ಮಾಡಿದರು.




     ಇವರ ಮೊನಚಿನ ಬರೆಹಕ್ಕೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಹುದ್ದೆ ನಿರಾಯಾಸವಾಗಿ ಒಲಿದು ಬಂತು. ನಾವೆಲ್ಲ ಯುವಕರಾಗಿದ್ದಾಗ ಪಾಪು ಅವರ ಹೆಸರು ಈ ಮೂಲಕವೇ ತಿಳಿದದ್ದು. ಈಗಿನ ವಿಶ್ವೇಶ್ವರಭಟ್‍ರ ಸಂಪಾದಕತ್ವದಲ್ಲಿ ಬರುತ್ತಿರುವ ವಿಶ್ವವಾಣಿ ಎಂಬ ಹೆಸರಿನ ಪತ್ರಿಕೆಯನ್ನು ಪಾಪು ಅವರೇ ಮೊದಲು ಶುರು ಮಾಡಿದ್ದು. ಆಡಳಿತದಲ್ಲಿ ಮತ್ತು ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ದುರವಸ್ಥೆ ಕಂಡು ರೋಸಿ ಹೋಗಿದ್ದ ಪಾಪು ಅವರು ಕನ್ನಡ ಬಳಕೆಗೆ ಇನ್ನಿಲ್ಲದಂತೆ ಆಗ್ರಹಿಸಿದರು. ಇದೊಂದು ಚರಿತ್ರಾರ್ಹ ಸಾಧನೆಯೇ ಸರಿ.




     ಇವೆಲ್ಲದರ ನಡುವೆಯೇ ಅವರ ಲೇಖನಿಯಿಂದ ಹಲವಾರು ಕೃತಿಗಳು ಹೊರಬಂದವು. ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆಯ ನುಡಿಗಳು ಎಂಬ ಕಥಾಸಂಕಲನಗಳು. ನನ್ನೂರು ಈ ನಾಡು, ಹೊಸದನ್ನು ಕಟ್ಟೋಣ, ಬದುಕುವ ಮಾತು ಎಂಬ ಪ್ರಬಂಧ ಸಂಕಲನಗಳು. ಸಿದ್ದಪ್ಪ ಕಂಬಳಿ ಮತ್ತು ಹೊಸಮನಿ ಸಿದ್ದಪ್ಪನವರು ಎಂಬ ಜೀವನ ಚರಿತ್ರೆಗಳು ಇವರ ಬರೆಹದ ಸಾಕ್ಷೀಪ್ರಜ್ಞೆಯಾಗಿವೆ.




     ಇವರನ್ನು ಹುಡುಕಿ ಬಂದ ಪ್ರಶಸ್ತಿ-ಪುರಸ್ಕಾರಗಳು ಹಲವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಸಂಸತ್ತಿನ ರಾಜ್ಯಸಭಾ ಸದಸ್ಯತ್ವ ಎರಡು ಬಾರಿ, ಕರ್ನಾಟಕ ಸರ್ಕಾರ ಕೊಡ ಮಾಡುವ ಟಿಎಸ್ಸಾರ್ ಪತ್ರಿಕಾ ಪ್ರಶಸ್ತಿ ಹೀಗೆ. 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ.




     ಓದುಗರ ಜ್ಞಾನ ವಿಸ್ತಾರಕ್ಕೆಂಬಂತೆ ಪ್ರಪಂಚ ಎಂಬ ಸುಂದರ ವಾರಪತ್ರಿಕೆಯನ್ನು ನಡೆಸಿದರು. ವರ್ತಮಾನದ ಏನೆಲ್ಲ ವಿಚಾರಗಳಿಗೆ ಕೈಗನ್ನಡಿಯಾಗಿ ತಮ್ಮ ಬರೆಹವನ್ನು ನಡೆಸಿ, ವಿವಿಧ ಪತ್ರಿಕೆಗಳಲ್ಲಿ ಅಂಕಣ ನಿರ್ವಹಿಸಿದ ಕೀರ್ತಿ ಪಾಪು ಅವರದು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಬೆಳೆಸಿದ್ದರಲ್ಲಿ ಇವರ ಪಾತ್ರ ಯಾವತ್ತೂ ಸ್ಮರಣೀಯ. ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವ ಪಾಪು ಅವರದು. ಕೆಲವೊಂದು ಸಂದರ್ಭದಲ್ಲಿ ಡಾ. ಶಿವರಾಮ ಕಾರಂತರನ್ನು ನೆನಪಿಸುವ ಖಂಡತುಂಡ ನೇರ ನಡೆನುಡಿಯ ಗಜಗಾಂಭೀರ‍್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅವರು ನಡೆಸಿದ ಹೋರಾಟ ಅನನ್ಯ ಮತ್ತು ಅಸಾಮಾನ್ಯ. ಇವೆಲ್ಲ ಆಗಿರುವುದರ ಜೊತೆಗೆ ಅವರದು ಸುಸಂಸ್ಕೃತ ಮನಸ್ಸು. ಜೀವನದ ಎಲ್ಲ ಆಗುಹೋಗುಗಳಿಂದ ಅನುಭವದ ಪಾಠ ಕಲಿತ ಮತ್ತು ಕಲಿಸುವ ಅದಮ್ಯ ಜೀವನೋತ್ಸಾಹದ ಚಿಲುಮೆ ಆದರ್ಶನೀಯ. ಒಂದುನೂರ ಒಂದು ವರ್ಷಗಳ ತುಂಬು ಬದುಕು ಇವರದು. ಇಂದಿನ ನಮ್ಮ ಕನ್ನಡವು ತಲೆಯೆತ್ತಿ ನಿಂತು ತನ್ನ ಸರೀಕರೊಂದಿಗೆ ತುಂಬು ವಿಶ್ವಾಸದಿಂದ ಮಾತಾಡುವಂತಾಗಿದೆಯೆಂದರೆ ಇಂಥವರ ಅಪ್ರತಿಮ ಹೋರಾಟ ಮತ್ತು ಕಾಳಜಿಯುತ ಅನುಷ್ಠಾನದಿಂದ ಎಂದರೆ ಅತಿಶಯೋಕ್ತಿಯಲ್ಲ.




                 **********************


 - ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, 


  ದಿನಾಂಕ 15-04-2020 ರಂದು ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ