Thursday, 25 November 2010

ವೃತ್ತಿ-ಪ್ರವೃತ್ತಿ-ನಿವೃತ್ತಿ

ವೃತ್ತಿ-ಪ್ರವೃತ್ತಿ-ನಿವೃತ್ತಿ
(ಒಂದು ಪ್ರಬಂಧ ಲಹರಿ)


‘ಕಳೆದುಹೋದ ಸುಖವನ್ನು ನೆನಪಿಸಿಕೊಳ್ಳುವುದೇ ದುಃಖಗಳಲ್ಲಿ ಅತಿ ದುಃಖ’ ಎಂದು ಷೇಕ್ಸ್‍ಪಿಯರ್ ಒಂದೆಡೆ ತಿಳಿಸುವುದನ್ನು ನೆನಪಿಸಿಕೊಳ್ಳುತ್ತಾ ಈ ಬರೆಹಕ್ಕೆ ಅಡಿಯಿಡುವೆ. ವೃತ್ತಿಯಲ್ಲಿ ಪ್ರವೃತ್ತವಾಗಿರುವಾಗಲೇ ನಿವೃತ್ತಿಯ ಮಾತಾದರೂ ಯಾಕೆಂದು ನಾನು ಭಾವಿಸುವುದಿಲ್ಲ. ಇಷ್ಟಕ್ಕೂ ಇಂದಲ್ಲ ನಾಳೆ ನಿವೃತ್ತರಾಗಲೇಬೇಕಾದ ನಾನು ಮತ್ತು ನನ್ನಂಥವರ ಚದುರಿದ ಚಿಂತನೆಯನ್ನು ಹೀಗೆ ದಾಖಲಿಸುವ ಆಸೆಯಷ್ಟೆ.ವೃತ್ತಿಯಿಂದಷ್ಟೇ ನಿವೃತ್ತಿ; ಬದುಕಿನಿಂದೇನೂ ಅಲ್ಲ! ಹಾಗಾಗಿ ನಿವೃತ್ತಿಯ ಮಾತು ವೈರಾಗ್ಯವನ್ನೇನೂ ಪ್ರತಿಪಾದಿಸದು ಅಂತಂದುಕೊಳ್ಳುತ್ತೇನೆ. ಯಾರು ವೃತ್ತಿಯನ್ನು ಪ್ರೀತಿಯಿಂದ ನಿರ್ವಹಿಸಿರುವುದಿಲ್ಲವೋ ಅಂಥವರು ಸಂತೋಷದಿಂದ ನಿವೃತ್ತಿಯನ್ನೂ ಸ್ವೀಕರಿಸಲಾರರು! ಏಕೆಂದರೆ ಉದ್ಯೋಗತೃಪ್ತಿ (ಎob Sಚಿಣisಜಿಚಿಛಿಣioಟಿ) ಎಂಬುದು ಒಂದು ಹಂತದಲ್ಲಿ ಸಮಾಧಾನ ತಂದು ಮತ್ತೊಂದು ಆಯಾಮ, ಅಭಿರುಚಿಯತ್ತ ತುಡಿಯುವ ಅನ್ವೇಷಣಾಯಾತ್ರೆಯನ್ನು ತನ್ನಂತರಂಗದಲ್ಲಿ ಗುಟ್ಟಾಗಿರಿಸಿಕೊಂಡೇ ಇರುತ್ತದೆ.ಇತ್ತೀಚೆಗೆ ನನ್ನ ಸಹೋದ್ಯೋಗಿ ಮಿತ್ರರು ಹೇಳುತ್ತಿದ್ದರು: ಎಲ್ಲಿಯವರೆಗೆ ಈ ಮೇಷ್ಟ್ರತನದ ಸುಖವನ್ನು ಅನುಭವಿಸುವುದು? ಒಂದು ಹಂತದಲ್ಲಿ ಒಳ್ಳೆಯ-ಪರಿಣಾಮಕಾರೀ ಬೋಧಕ ಅಂತಲೋ ಚೆನ್ನಾಗಿ ಕಲಿಸುವವನು ಅಂತಲೋ ಅಂತನ್ನಿಸಿಕೊಂಡ ತರುವಾಯ ದೇಹ-ಮನಸ್ಸು-ಬದುಕುಗಳು ಮತ್ತೊಂದು ಮಗ್ಗುಲಿನತ್ತ ಹೊರಳಬೇಕು. ಇಲ್ಲಿ ನಾನು ಹೇಳ ಹೊರಟಿರುವುದು, ಕಲಿಸುವತನಕ್ಕೆ ರಾಜಿನಾಮೆ ಕೊಡಬೇಕೆಂದಲ್ಲ; ಅದರಾಚೆಗೆ ಮೈ ಚಾಚಬೇಕು. ಹೊಸ ಕಾಲಮಾನದ ವಿಸ್ಮಯಗಳಿಗೆ ತೆರೆದುಕೊಳ್ಳಬೇಕು. ಕಾರಣ, ‘ಇದ್ದಂತೆ ಜಗವಿಹುದು; ನೀನು ಬದಲಾಗು!’ ಚೆನ್ನಾಗಿ ಪಾಠ ಹೇಳುತ್ತಾರೆಂದು ಪದವಿ ತರಗತಿಯಲ್ಲೇ ಒಬ್ಬ ವಿದ್ಯಾರ್ಥಿ ಉಳಿದರೆ ಏನಾಗಬಹುದು? ಹಾಗೆಯೇ ಚೆನ್ನಾಗಿ ಪಾಠ ಹೇಳುತ್ತೇನೆಂದುಕೊಂಡು ಅಲ್ಲಿಯೇ ಪದ್ಮಾಸನ ಹಾಕಿ ‘ಯೋಗಿ’ಯಾಗಿ ಜಪಕ್ಕೆ ಕೂಡಬಾರದು. ಈ ವಿಶ್ವ, ಜಗತ್ತು, ಮನುಷ್ಯಜೀವಿ, ಅವನ ಅಥವಾ ಅವಳ ಜೀವನ. . .ಎಲ್ಲವೂ ಚಲನೆಯಲ್ಲಿದ್ದರೆ ಮಾತ್ರ ಅಸ್ತಿತ್ವಕ್ಕೆ ಅರ್ಥ! ಡಾ. ಕೆ ವಿ ನಾರಾಯಣ ಅವರು ಹೇಳುವಂತೆ, ಬದಲಾದ ಕಾಲಕ್ಕೆ ಶಿಕ್ಷಕರೂ ಬದಲಾಗಬೇಕು; ಈಗ ಕಲಿಸುವವರು ಎಂಬ ಅಹಮ್ಮನ್ನು ಬಿಟ್ಟು ಕಲಿಕೆಗೆ ನೆರವಾಗುವವರು ಎಂಬ ವಿನಯ ಹೊಂದಬೇಕು!! ಇಷ್ಟಕ್ಕೂ ಕಲಿಸುವುದು ವೃತ್ತಿಯಾದರೆ ಕಲಿಕಾ ಪದ್ಧತಿಗಳನ್ನು ಅಭ್ಯಸಿಸುವುದು ಪ್ರವೃತ್ತಿಯ ಕಕ್ಷೆಗೆ ಬರುವುದು. ಅಳವಡಿಕೆಗೆ ಅವಕಾಶವಿಲ್ಲವೆಂದಾದರೆ ಕನಿಷ್ಠಪಕ್ಷ ನೂತನ ಪ್ರಯೋಗಗಳನ್ನಾದರೂ ತಿಳಿಯಲು, ಅಂತರ್ಜಾಲಾಡಲು ಏನು ಅಡ್ಡಿ!ಒಂದು ಅನುಭವದ ಸುಖವನ್ನು ಪೂರ್ಣ ಹೊಂದಿದ ಆನಂತರ ಅದರಲ್ಲಿ ಮತ್ತೆ ಮತ್ತೆ ಹೊರಳಬಾರದು. ಹೂವು ಅರಳಿದ ಮೇಲೆ ಬಾಡುವುದು ನಿಸರ್ಗನಿಯಮ. ಹಾಗೆಯೇ ನಂನಮ್ಮ ವೃತ್ತಿಯ ಮಜಲೂ! ನಾಲ್ಕನೆಯ ಆಯಾಮವನ್ನು ಅನುಭವಿಸಿದ ಆಧ್ಯಾತ್ಮಿಕ ಚೇತನಕ್ಕೆ ‘ಮೂರನೆಯ ಆಯಾಮ-ಒಂದು ಅದ್ಭುತ’ ಎಂಬ ಪುಸ್ತಕವು ಉಪ್ಪಿಲ್ಲದ ಸಾರಿನಂತೆ, ಸಪ್ಪೆ, ಸಪ್ಪೆ.ಹಾಗಾಗಿ, ವರ್ತಮಾನದಲ್ಲಿ ‘ಎಚ್ಚರ’ವಿಟ್ಟು ಬದುಕಿದ, ಪಾಲಿಗೆ ಬಂದದ್ದನ್ನು ನಮ್ರತೆಯಿಂದ ಸ್ವೀಕರಿಸಿ ದುಡಿದ ಚೇತನ ನಿಜವಾದ ವರ್ಧಮಾನ! ಯಾವ ಬಂದಳಿಕೆ, ಹಳಹಳಿಕೆಗಳಿಲ್ಲದೇ ನಿವೃತ್ತಿಯ ಹಂತವನ್ನು ಹಸನ್ಮುಖಚಿತ್ತದಿಂದ ಸ್ವೀಕರಿಸುವುದು. ಪೂರ್ಣಚಂದ್ರ ತೇಜಸ್ವಿ ಹೇಳುವುದು ಈ ಅರ್ಥದಲ್ಲೇ: ‘ಜ್ಞಾನವೆಂದರೆ ಅಜ್ಞಾನದ ಅರಿವು; ಅಜ್ಞಾನವೆಂದರೆ ಜ್ಞಾನದ ಮರೆವು’ಇಂದಿನದನ್ನು ನಾಳೆಗೆ ಮುಂದೂಡುವ ಮನಸ್ಸು ಎಂದೂ ಇಂದನ್ನು ಅನುಭವಿಸಲಾರದು! ಇಷ್ಟಕ್ಕೂ ನಾಳೆಯೆಂಬುದು ನಮ್ಮ ಕೈಯಲ್ಲಿಲ್ಲದ ಸೂರ‍್ಯಚಂದಿರ. ಆ ನಾಳೆಯು ಬಂದರೂ ನಾಳೆಯಾಗಿ ಬರುವುದಿಲ್ಲ, ‘ಇಂದಾಗಿ’ ಬರುತ್ತದೆ. ಹಾಗೆ ನೋಡಿದರೆ ಯಾರಿಗೂ ‘ನಾಳೆ’ ನಾಳೆಯಾಗುವುದೇ ಇಲ್ಲ. ಹೀಗಿರುವಾಗ ವರ್ತಮಾನವೇ ವರ್ಧಮಾನ. ಅಷ್ಟಲ್ಲದೆ ಕವಿ ಹಾಡುತ್ತಾನೆಯೇ: ‘ನಿನ್ನೆ ನಿನ್ನೆಗೆ ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ಇಂತಿರುವಲ್ಲಿ, ವೃತ್ತಿ-ಪ್ರವೃತ್ತಿಗಳ ನಡುವೆ ವ್ಯತ್ಯಾಸ ಮಾಡಿಕೊಂಡು-ವೃತ್ತಿಯ ನಂತರವೂ ಪ್ರವೃತ್ತಿಗಳ ಮುಂದುವರಿಕೆ ಸಾಧ್ಯವೆಂಬ ಅರಿವು ಯಾರಲ್ಲಿರುವುದೋ ಅವರು ನಿವೃತ್ತಿಯನ್ನು ಆನಂದದಿಂದ ಅದಕ್ಕಿಂತ ಹೆಚ್ಚಾಗಿ ಯಾವ ಓರೆಕೋರೆ, ವ್ಯಂಗ್ಯಗಳನ್ನು ಲಗತ್ತಿಸದೆ, ಸ್ಥಿತಪ್ರಜ್ಞ ಮನಸ್ಥಿತಿಯಲ್ಲಿ ಸ್ವೀಕರಿಸುವರು. ಗುರುಗಳಾದ ಹಾ ಮಾ ನಾಯಕರು ತಮ್ಮ ‘ಸೂಲಂಗಿ’ಯಲ್ಲಿ ಬರೆಯುತ್ತಾರೆ: ‘ಮನುಷ್ಯ ಸ್ಥಿತಪ್ರಜ್ಞನಾಗಿದ್ದರೆ ಸಾಲದು, ಸ್ಥಿತಿಪ್ರಜ್ಞನೂ ಆಗಿರಬೇಕು.’ನಡೆದು ಬಂದ ದಾರಿಯನ್ನು ನೆನಪಿಸಿಕೊಂಡರೆ ನಮ್ಮಲ್ಲಿ ಯಾವುದೇ ಕರೆಕರೆ ಇರಬಾರದು. ಇಂಥ ರಿಗ್ರೆಟ್ಸ್‍ಗಳನ್ನಿಟ್ಟುಕೊಂಡು ಬಾಳಾಟ ಮಾಡಿ, ಕರ್ತವ್ಯದಿಂದ ನಿವೃತ್ತಿಯಾಗುವಾಗ್ಗೆ ಸುಖ-ನೆಮ್ಮದಿಗಳೆರಡೂ ಮರೀಚಿಕೆಯಾದೀತು. ರಿಟೈರ್‍ಮೆಂಟು ಒಂದು ಅನಿವಾರ‍್ಯ ಮತ್ತು ಸಹಜ ಘಟನೆ. ಅದನ್ನು ಒಪ್ಪಿಕೊಳ್ಳದೇ ಸಿನಿಕರಾಗುವುದು ಏಕೆ? ಏಕೆಂದರೆ ನಿವೃತ್ತಿಯೆಂಬುದು ಕೇವಲ ನೌಕರರು-ಅಧಿಕಾರಿಗಳ ಖಾಸಗೀ ಸಂಗತಿಯಲ್ಲ; ಅದು ಕೌಟುಂಬಿಕ ಮತ್ತು ಸಾಮಾಜಿಕ ಪರಿಪ್ರೇಕ್ಷ್ಯವನ್ನೂ ಹೊಂದಿದೆ. ಸಂಪಾದನೆ ನಿಂತು ಹೋದ ಮೇಲೆ ಮನೆಯವರು ಕೀಳಾಗಿ ಕಾಣಬಹುದು, ವ್ಯಕ್ತಿತ್ವಕ್ಕೆ ಬೆಲೆ ಕೊಡುವುದನ್ನು ನಿಲ್ಲಿಸಬಹುದು, ತನ್ನ ಮಾತನ್ನು ಇನ್ನು ಮನೆಯಲ್ಲಿ ಯಾರೂ ಕೇಳಲಾರರು, ಈವರೆಗೆ ಅಧಿಕಾರ ಚಲಾಯಿಸುವಾಗ ಉಂಟಾದ ಏರುಪೇರುಗಳ ಅಡ್ಡಪರಿಣಾಮ ಎದುರಾಗಬಹುದು..... ಇನ್ನೂ ಮುಂತಾದ ಕೀಳರಿಮೆ-ಸಂಕೋಚಗಳು ಮನದಲ್ಲಿ ಮೂಡಿ ತನ್ನನ್ನು ತಾನೇ ಹೀಗಳೆದುಕೊಳ್ಳುವ ಸಾಧ್ಯತೆ. ಜೊತೆಗೆ, ಹೊಂದಿದ ಅಧಿಕಾರ, ಪದವಿ, ಕುರ್ಚಿ, ಮೊಹರು, ಸಹಿ ಯಾವುದನ್ನೂ ಇನ್ನು ಬಳಸುವಂತಿಲ್ಲ ಅಥವಾ ಅವಕ್ಕಿನ್ನು ತನ್ನ ಜರೂರತ್ತಿಲ್ಲ ಎಂಬ ಹತಾಶೆ. ಹೀಗೆಲ್ಲ ನಂನಮ್ಮ ಗೆಸ್ಟಾಲ್ಟ್‍ಗಳು ಪುಂಖಾನುಪುಂಖವಾಗಿ ಮೈದಳೆಯುವಾಗ ನಿರಾಶೆ, ವಿಕ್ಷಿಪ್ತತೆ, ಯಾತನೆ, ಅಗಲಿಕೆ, ಹಳವಂಡ, ಅತೃಪ್ತಿ ಎಲ್ಲವೂ ಮನವನ್ನಾವರಿಸಿ ಖಿನ್ನತೆಗೆ ದೂಡುತ್ತವೆ. ಇನ್ನು ಮಕ್ಕಳ ಮದುವೆಯ ಜವಾಬ್ದಾರಿ, ಮಕ್ಕಳ ವಿದ್ಯಾಭ್ಯಾಸದ ಮುಗಿಯದ ದಾರಿ, ಪತ್ನಿ ಅಥವಾ ಪತಿಯ ರೋಗರುಜಿನ, ಸಂಬಂಧಿಕರ ಸಹ-ವಾಸದಲ್ಲಿ ಇನ್ನೂ ಮುಂದುವರಿದಿರುವ ಕೋರ್ಟು-ಕಟ್ಟಳೆ ವ್ಯಾಜ್ಯ... ಇಂಥವಿದ್ದರಂತೂ ನಿವೃತ್ತಿಯ ದುಃಖಕ್ಕೆ ಅಸಹಾಯಕತೆಯ ಅಳಲು ಜೊತೆಯಾಗಿ, ಕಣ್ಣೀರಧಾರೆ- ಜಲಲ ಜಲಲ ಜಲಧಾರೆ.ವೃದ್ಧಾಪ್ಯಕ್ಕೂ ನಿವೃತ್ತಿಗೂ ಎಡೆಬಿಡದ ನಂಟು; ದೈಹಿಕ ರೋಗಗಳ ಗಂಟು. ಅಂಥವುಗಳಿಂದ ಉಂಟಾಗುವ ಅಸಹಾಯಕತೆ, ಸಾನುಕಂಪ ಪಡೆಯುವ ಕೆಟ್ಟ ಅಭ್ಯಾಸ, ಕೈಗೆಟುಕದ ದ್ರಾಕ್ಷಿ ಹುಳಿಯೆಂಬ ತೀರ್ಮಾನ, ಕಾಲಕೆಟ್ಟಿತೆಂಬ ಲೋಕ ತಿದ್ದುವ ವ್ಯರ್ಥಪ್ರಯತ್ನ, ತಾನೊಬ್ಬನೇ ಸತ್ಯಸಂಧ, ಪ್ರಾಮಾಣಿಕ ದುಡಿಮೆಗಾರನಾಗಿದ್ದೆ, ತನ್ನಿಂದಲೇ ಮಳೆ-ಬೆಳೆ ಎಂಬ ಸ್ವಂತಕೀರ್ತನ-ಸ್ವ ಅಭಿನಂದನ!ಇವೆಲ್ಲವೂ ನಿವೃತ್ತಿಯ ದಿನಗಳು ಹಾಗೂ ನಿವೃತ್ತಿಯ ನಂತರದ ದಿನಗಳನ್ನು ಅಲಂಕರಿಸಿ ಆಟವಾಡಿಸುತ್ತವೆ. ಆವರೆಗೂ ಕಾಣದಿದ್ದ ತನ್ನ ಮತ್ತೊಂದು ಮುಖ ಪ್ರದರ್ಶಿತಗೊಂಡು ಸುತ್ತಲ ಸಾಮಾಜಿಕರಿಗೆ ಅಸಹ್ಯ ತರಿಸುತ್ತವೆ. ಹೇಳಿದ್ದನ್ನೇ ಹೇಳುತ್ತಿರುವ, ಅನಿಸಿಕೆಗಳೆಲ್ಲ ಉಪದೇಶಗಳಾಗಿ ಪರಿಣಮಿಸುತ್ತಿರುವ, ತನ್ನ ವಯಸ್ಸು-ಅಂತಸ್ತುಗಳು ತಂದುಕೊಟ್ಟ ‘ಹಿರೀತನ’ವೆಂಬ ಹೊಸ ಪದವಿಯನ್ನು ‘ಎಂಜಾಯ್’ ಮಾಡುವ ನಿವೃತ್ತರು ಎಲ್ಲ ಅರ್ಥದಲ್ಲೂ ದೂರು-ದರ್ಶನ ಅಥವಾ ದೂರ-ದರ್ಶನ!ಹೀಗಾಗಬಾರದು ಬದುಕು; ನಿವೃತ್ತರು ತಮ್ಮ ಘನತೆ ಕಳೆದುಕೊಳ್ಳುತ್ತ ಮೂಲೆ ಸೇರಬಾರದು. ಹಾಗಾದರೆ, ತಮ್ಮ ವೃತ್ತಿಯ ವೇಳೆಯಲ್ಲಿ ಹಂತಹಂತವಾಗಿ ‘ನಿವೃತ್ತಿ’ಯ ದಿನಗಳಿಗೆ ಮಾನಸಿಕವಾಗಿ ಮಾತ್ರವಲ್ಲ, ಆ ಬಿಡುವಿನ ವೇಳೆಯನ್ನು ಬಳಸಿಕೊಳ್ಳುವ ಸೃಜನಮಾರ್ಗಕ್ಕೆ ಸಜ್ಜಾಗಬೇಕು! ‘ಈ ಪ್ರಪಂಚದಲ್ಲಿರುವ ಎರಡು ದುರಂತ: ನಮಗೆ ಬೇಕಾದ್ದು ದೊರೆಯದೇ ಇರುವುದು; ಇನ್ನೊಂದು, ದೊರೆತುಬಿಡುವುದು’ ಎಂಬ ಆಸ್ಕರ್ ವೈಲ್ಡ್‍ನ ಮಾತು ಮನನೀಯ.·        ತನ್ನ ಕೋಳಿಯಿಂದಲೇ ಬೆಳಗಾಗುವುದಿಲ್ಲ.

·        ತಾನಷ್ಟೇ ಕಛೇರಿಗೆ-ಸಂಸ್ಥೆಗೆ-ಕಾರ್ಖಾನೆಗೆ ಅನಿವಾರ‍್ಯವಲ್ಲ.

·        ಈ ಎಲ್ಲ ಗಾಳಿಬೆಳಕು ತುಂಬಿದ ಲೋಕ ಮತ್ತು ವ್ಯವಸ್ಥೆ ನನಗೆ ಅನಿವಾರ‍್ಯವೇ ವಿನಾ ನಾನು ವ್ಯವಸ್ಥೆಗಲ್ಲ.

·        ಕೌಶಲ್ಯ-ಪರಿಣತಿ-ಅನುಭವ-ಆಲೋಚನೆ-ಅಧ್ಯಯನ-ಐಡಿಯಾ-ಸೃಷ್ಟಿಶೀಲತೆ ಇತ್ಯಾದಿಗಳು ನನ್ನಾಚೆಗೂ ಇರುವಂಥವು; ನನ್ನನ್ನು ಮೀರಿಸುವ ಕಾಯಕಜೀವಿಗಳೂ ಅತ್ಯದ್ಭುತ ಪ್ರತಿಭಾಶಾಲಿಗಳೂ ಇರಲು, ನಾ ಬಿಟ್ಟ ಖಾಲಿಕುರ್ಚಿಯನ್ನು ಅಲಂಕರಿಸಲು ಸಾಧ್ಯ.

·        ಎಷ್ಟು ಹೊತ್ತು ಕೆಲಸ ಮಾಡಿದೆ? ಎಂಬುದು ವ್ಯವಸ್ಥೆಯ ಲೆಕ್ಕಕ್ಕೆ ಬೇಕಿರುವಂತೆಯೇ ಏನು ಮಾಡಿದೆ? ಅಥವಾ ಮಾಡಿದ್ದರಲ್ಲಿ ಉಪಯೋಗವೆಷ್ಟು? ಎಂಬುದು ನೌಕರನ ವ್ಯಕ್ತಿತ್ವದ ಲೆಕ್ಕ!

·        ವ್ಯವಸ್ಥೆ/ಪ್ರಾಧಿಕಾರ ಕೊಡಮಾಡುವ ಅಧಿಕಾರವನ್ನು ಭಾಗಶಃ ಬಳಸಬೇಕೆಂಬ ಜಾಣ್ಮೆ ಮತ್ತು ಮುತ್ಸದ್ಧಿತನ......ಹೀಗೆಲ್ಲ ಚೆಕ್‍ಲಿಸ್ಟ್ ತಯಾರಿಸಿಕೊಂಡು ಅದರ ಸಾಧಕ-ಬಾಧಕಗಳನ್ನು ಆಗಿಂದಾಗ್ಗೆ ಪರಿಶೀಲಿಸುತ್ತಾ, ಮೌಲ್ಯಮಾಪನ ಮಾಡಿಕೊಳ್ಳುತ್ತ ಕರ್ತವ್ಯದಲ್ಲಿದ್ದರೆ, ನಿವೃತ್ತಿಯ ದಿನಗಳಲ್ಲಿ ನಡೆದು ಬಂದ ದಾರಿಯು ದುಃಸ್ವಪ್ನವಾಗುವುದು ತಪ್ಪೀತು.ಏನೆಲ್ಲ ರೀತಿಯಲ್ಲೂ ನಿವೃತ್ತಿಗೆ ಸಜ್ಜಾಗುವುದೊಂದೇ ನೌಕರರ ಮುಂದಿರುವ ಗುರಿ! ಹಣಕಾಸಿರಲಿ, ಅರ್ಧ ಮುಗಿದ ಯೋಜನೆಯಿರಲಿ, ನನಸಾಗದ ಕನಸುಗಳಿರಲಿ, ಚಿಕ್ಕದು-ಪುಟ್ಟದು ಎಂಬ ಕೀಳಂದಾಜು ಮಾಡದೆ ಆತ್ಮಾವಲೋಕನಕ್ಕೆ ಕೈ ಹಾಕುವುದು. ‘ನೀರು ಎಷ್ಟೇ ಬಿಸಿಯಿದ್ದು ಕುದಿಯುತ್ತಿದ್ದರೂ, ಅದು ಬೆಂಕಿಯನ್ನು ಆರಿಸಬಲ್ಲದು’ ಅಂತ ಗುರುನಾನಕ್ ಹೇಳುತ್ತಾರೆ. ನಾವಷ್ಟೇ ನಮ್ಮನ್ನು ಚೆನ್ನಾಗಿ ಅರಿತವರು ಎಂಬುದೇ ನಿಜದ ಅರಿವು. ನಿವೃತ್ತಿಯ ತರುವಾಯದ ದಿನಗಳು (ವರ್ಷಗಳಲ್ಲ!) ಆನಂದದಾಯಕವಾಗಿರಲು ತನ್ನ ಹವ್ಯಾಸ-ಪ್ರವೃತ್ತಿ-ಇಷ್ಟದ ಕೆಲಸಗಳನ್ನು ಮುಂಚಿತವಾಗಿಯೇ ಗುರುತಿಸಿ, ಸಿದ್ಧ ಮಾಡಿಟ್ಟುಕೊಂಡರೆ ‘ಹೆಣ’ಗಾಡುವುದು ತಪ್ಪುತ್ತದೆ.ಈ ಮುಂಚೆ ಎಲ್ಲ ದಿಕ್ಕಿಗೂ ಕೈಚಾಚಿ ಕುಶಲ ವಿಚಾರಿಸುತ್ತಿದ್ದ ವ್ಯಕ್ತಿತ್ವವೀಗ ಕೆಲಸದಿಂದ ನಿವೃತ್ತಿಯಾದ ಮೇಲೆ ತನ್ನ  ‘ಆತ್ಮೀಯ ವಲಯ’ವನ್ನಷ್ಟೇ ಗುರುತಿಸಿಕೊಂಡು ಅಷ್ಟರಲ್ಲೇ ಬದುಕಬೇಕಿದೆ. ನೂರೆಂಟು ಕಡತಗಳಿಂದ, ಜಂಜಡಗಳಿಂದ ಮುಕ್ತಿ ಸಿಕ್ಕಿದೆ. ತನ್ನ ವೈಯಕ್ತಿಕತ್ವ (Iಟಿಜiviಜuಚಿಟiಚಿಣಥಿ) ವನ್ನು ಹೊಂದಲು (ಕರ್ತವ್ಯದಲ್ಲಿದ್ದಾಗ ಸಾಮಾಜಿಕ ಸಹವಾಸ ಇದ್ದುದರಿಂದ ತನ್ನ ವ್ಯಕ್ತಿತ್ವ-Peಡಿsoಟಿಚಿಟiಣಥಿ-ವನ್ನು ಪ್ರದರ್ಶಿಸಲಾಗುತ್ತಿತ್ತು), ಅನುಭವಿಸಲು ಈಗ ಪ್ರಶಸ್ತ ಕಾಲ. ಲೋಕಕ್ಕೆ ತೋರಗೊಡುವುದು ವ್ಯಕ್ತಿತ್ವವಾದರೆ, ನನ್ನೊಳಗಿಗೆ ಮಾತ್ರ ಗೊತ್ತಿರುವ ನಿಜದ ನೆಲೆಯನ್ನು ವೈಯಕ್ತಿಕತ್ವ ಎಂದು ಆಚಾರ‍್ಯ ರಜನೀಶರು ಸ್ಪಷ್ಟಪಡಿಸಿ ಕೊಟ್ಟಿದ್ದಾರೆ. ಹೀಗಾಗಿ, ವಯಸ್ಸು ಮತ್ತು ಮನಸ್ಸುಗಳು ಪರಿಪಕ್ವಗೊಂಡು ಲೋಕಹಿತವನ್ನು ಧ್ಯಾನಿಸುವ ದಿನಗಳಿವು. ಲೋಕವಿವೇಕವನ್ನು ಈಗಲೂ ಹೊಂದುವುದಿಲ್ಲವಾದರೆ ಇನ್ನು ಯಾವಾಗ? ‘ಯಾವುದೇ ಆಯ್ಕೆಯ ಅಗತ್ಯವಿಲ್ಲ; ನರಳಾಟಕ್ಕೆ ಕಾರಣ, ಆಯ್ಕೆ ಮಾಡಿಕೊಳ್ಳುವುದೇ ಆಗಿದೆ’ ಎಂಬುದನ್ನು ಸಹ ಓಶೋ ಹೇಳುವಾಗ ನಮಗೆ ವಿವೇಕದೊಂದಿಗೆ ವಿವೇಚನವೂ ಜೊತೆಗೂಡಬೇಕೆಂದು ತಿಳಿಯುವುದು.‘ಯಾವ ಜವಾಬ್ದಾರಿಯೂ ಇಲ್ಲದವರು ಮಾತ್ರ ಎಲ್ಲ ಜವಾಬ್ದಾರಿಗಳನ್ನೂ ಸ್ವೀಕರಿಸುತ್ತಾರೆ’ ಎಂಬ ಮಾತೊಂದಿದೆ. ಇಂಥವರು ಸ್ವತಃ ಹೊಸ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದರಿಂದ ಸ್ವಂತತೃಪ್ತಿಗಾಗಿ- ಕೈಗೊಂಡ ಕಾರ‍್ಯವನ್ನು ಸಮರ್ಪಕವಾಗಿ ಮುಗಿಸಲು ಉತ್ಸುಕರಾಗುವರು. ಹಾಗೇ ನಿವೃತ್ತರು ಕೆಲಸದಿಂದ ಬಿಡುಗಡೆ ಹೊಂದಿರಬಹುದು; ಆದರೆ ಸಂತೃಪ್ತ ಭಾವದಿಂದ ನಿವೃತ್ತರಾದವರು ತಮ್ಮ ಪ್ರವೃತ್ತಿಗಳಿಂದ ದೂರ ಸರಿಯುವುದಿಲ್ಲ. ಐiಜಿe begiಟಿs ಚಿಣ ಜಿoಡಿಣಥಿ ಎಂಬುದು ಬದುಕಿನಲ್ಲಿ ನೆಲೆ ಕಂಡುಕೊಂಡ ಸಮಾಧಾನವನ್ನು ತಿಳಿಸಿದರೆ, ಐiಜಿe begiಟಿs ಚಿಣ sixಣಥಿ ಎಂಬುದು ಮಾತ್ರ ನಿವೃತ್ತರ ಮಹದಾನಂದವನ್ನೇ ಗುರಿಯಾಗಿಸಿಕೊಂಡು ಹೇಳುವ ಮಾತು. ಏನೆಲ್ಲ ಜರೂರತ್ತು, ಜಂಜಡಗಳಿಂದ ಒದ್ದಾಡಿದ ಮನಸ್ಸು, ಬಾಸಿಸಂನಿಂದ ಸುಸ್ತಾದ ವಯಸ್ಸು (ಬಾಸ್ ಆಗಿಯೋ, ಬಾಸ್‍ನಿಂದಾಗಿಯೋ!) ಇದೀಗ ಒದಗಿಬಂದ ಬಿಡುವೆಂಬ ಹೊಸ ಹರಯದಿಂದ ತನ್ನ ಇಷ್ಟದ ಹವ್ಯಾಸಗಳತ್ತ ಪೂರ್ಣ ಗಮನ ಕೊಡಬಲ್ಲದು. ಹಾಗೆ ನೋಡಿದರೆ, ನೌಕರರ ಪುನರ್ಜನ್ಮವೆಂದೇ ನಿವೃತ್ತಿ ನಂತರದ ದಿನಗಳನ್ನು ಕರೆದರೆ ತಪ್ಪೇನಿಲ್ಲ! ಈ ಪುನರ್ಜನ್ಮವು ಕಷ್ಟದ್ದಲ್ಲ, ಇಷ್ಟದ್ದು. ಯೋಜಿತ ಬದುಕು ಇಂಥ ಹೊಸ ಮಜಲನ್ನು ಉತ್ಸಾಹದಿಂದಲೇ ನಡೆಸಲು ಸನ್ನದ್ಧಗೊಳ್ಳುವುದು. ಇದಕ್ಕಾಗಿ ಕೌಟುಂಬಿಕ ನೆಮ್ಮದಿ ಹಾಗೂ ಆರೋಗ್ಯದ ಅನಿವಾರ‍್ಯತೆಯಿದೆ, ಇಲ್ಲವೆಂದಲ್ಲ. ದೇಹಾರೋಗ್ಯ ಕೈಕೊಟ್ಟರೂ ಮನಸ್ಸಿನಾರೋಗ್ಯ ನಂನಮ್ಮ ಕೈಯಲ್ಲಿದ್ದರೆ ಅರ್ಧಯುದ್ಧವನ್ನು ಮುಗಿಸಿದಂತೆಯೇ. ಸಾಹಿತ್ಯ-ಸಂಗೀತ-ಧಾರ್ಮಿಕತೆ-ಅಧ್ಯಾತ್ಮ ಇನ್ನಿತರ ಲೋಕೋತ್ತರ ಸಂತೋಷ ತರುವ ಹತಾರ (ಣooಟ) ಗಳಿಂದ ಇಂಥ ಸಾರ್ಥಕ್ಯ ಹೊಂದಬಹುದು.ಬಹಳಷ್ಟು ಮಂದಿ, ನಿವೃತ್ತಿಯನ್ನು ಎಲ್ಲ ಮುಗಿದ ಮರಣಕ್ಕೆ ಸಂವಾದಿಯನ್ನಾಗಿಸಿಕೊಂಡು ‘ಸ್ವಯಂ ಸೃಷ್ಟಿಸಿಕೊಂಡ ನರಕ’ದಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ. ಇಂಥ ಅವಿವೇಕಕ್ಕೆ ಯಾವ ಔಷಧದಂಗಡಿಯಲ್ಲೂ ಮದ್ದು ಸಿಗಲಾರದು. ಹಗ್ಗದ ಬಣ್ಣಕ್ಕೆ ಮನಸೋತು, ಉರುಳು ಹಾಕಿಕೊಂಡಂತೆ! ಅಜ್ಞಾನವನ್ನು ಹೋಗಲಾಡಿಸಬಹುದು, ಶತಪ್ರಯತ್ನದಿಂದ; ಆದರೆ ಅವಿವೇಕವನ್ನು ಅಷ್ಟು ಸುಲಭವಾಗಿ ಒದ್ದೋಡಿಸಲಾಗದು. ಸಾಕಷ್ಟು ಪೂರ್ವತಯಾರಿ ಹಾಗೂ ಆತ್ಮವಿಮರ್ಶೆಗಳಿಂದ ಕಟ್ಟಿಕೊಂಡ ಮನದಪಕ್ವತೆಯೊಂದೇ ನಿವೃತ್ತಿಯ ಬದುಕನ್ನು ಹಸನಾಗಿಸಲು ಸಾಧ್ಯ. ಹಾಗಂತ ತೀರಾ ಯೌವನದ ಎರಡನೇ ಇನ್ನಿಂಗ್ಸ್ ಎಂದೇನೂ ಭಾವಿಸಬೇಕಿಲ್ಲ. ಹೀಗೆ ಭಾವಿಸುವುದನ್ನು ಮನದಪಕ್ವತೆ ಎಂದು ಕರೆಯಲಾಗದು. ಮಾಗಿದ ಮನುಷ್ಯ- ಆಯಾಯ ಕಾಲಘಟ್ಟ, ವಯೋಮಾನಗಳ ಅನುಭವದಿಂದ ಪಾಠ ಕಲಿತವ- ಹೀಗೆ ಭಾವಿಸಲಾರ. ‘ಯಯಾತಿ’ಯ ಪುನರ್ ಯೌವನವನ್ನು ದೂರದಿಂದ ಕಂಡವರಿಗೆ ಅಸೂಯೆಯೇ ಆಗಬಹುದು; ಆದರೆ ಸ್ವತಃ ಯಯಾತಿಗೆ ಅದರಂಥ ‘ಹಿಂಸೆ’ ಮತ್ತೊಂದಿರಲಾರದು. ಸಾವಿಲ್ಲದ ಬದುಕೆಂಬುದು ಬಹುದೊಡ್ಡ ನರಕದ ಕಾರ್ಖಾನೆಯೇ ಸರಿ. ಏಕೆಂದರೆ ದೇಹಕ್ಕೆ ಸಾವಿರುವುದರಿಂದ ಮನುಷ್ಯಜೀವಿ ಇಂಥ ಜೀವನೋತ್ಸಾಹ ಮತ್ತು ಜೀವನಪ್ರೀತಿಗಳನ್ನು ವ್ಯಕ್ತಪಡಿಸುವುದು. ಇಲ್ಲದಿದ್ದರೆ ಜೀವಿಸುವ ‘ಮಹಾ ಬೋರಿ’ನ ಸಾಹಸ ಎಂಥವರಿಗೂ ಜುಗುಪ್ಸೆ ತರಿಸುತ್ತಿತ್ತು. ಏಕೆಂದರೆ, ವಿರಹವು ಹೇಗೆ ನೋವನ್ನು ತರುವುದೋ ಸುಖದ ಚರಮಸೀಮೆಯ ತರುವಾಯದ ನಂತರದ ಕ್ರಿಯೆ ಕೂಡ ನೋವನ್ನು ತರುವುದು ಎಂಬ ತಿಳಿವಳಿಕೆ ಇಟ್ಟುಕೊಳ್ಳಬೇಕು.     ‘ಮುಗಿಯದ ಅರಮನೆ ಈ ಸಂಸಾರ, ಸದಾ ರಿಪೇರಿಗೆ ತಕ್ಕ ವಿಚಾg’ ಎಂದು ಕೆಎಸ್‍ನ ಯಾವ ಧ್ವನಿಯಿಟ್ಟು ಹಾಡಿದರೊ? ಆದರೆ ಈ ಬದುಕಿನ ನಿರರ್ಥಕತೆಯಲ್ಲೂ ಸಾರ್ಥಕ್ಯ ಕಾಣಲು ಹಪಹಪಿಸುವ, ಹಾತೊರೆಯುವ, ಚಡಪಡಿಸುವ ಆರೋಗ್ಯಕಾರೀ ಲವಲವಿಕೆ ಕೆಲವರಲ್ಲಾದರೂ ಇದೆಯೆಂಬ ಅದಮ್ಯ ನಂಬಿಕೆಯೇ ಸಾಕು, ನಮ್ಮನ್ನೂ ಆ ಗುಂಪಿನಲ್ಲಿ ಗುರುತಿಸಿಕೊಳ್ಳಲು ಜೀವ ಪತರಗುಟ್ಟುತ್ತದೆ!ವಿಷಯದ ಕೊನೆಗೆ ಬರುತ್ತ, ವೃತ್ತಿಯಿಂದ ನಿವೃತ್ತಿಯಾದರೇನಂತೆ, ಪ್ರವೃತ್ತಿಗಳಿಂದ ವಿಮುಖರಾಗುವುದು ಬೇಡ! ನಗುತ್ತ, ನಗುವನ್ನು ಹಂಚುತ್ತ, ದುಃಖ ಮರೆಸುತ್ತ, ಕಣ್ಣೀರು ಒರೆಸುತ್ತ, ಮಾಗಿದ ಮನಸ್ಸಿನ ಅದ್ಭುತಚೋದ್ಯವನ್ನು ಇನ್ನಷ್ಟು ಸಮೀಪದಿಂದ ವೀಕ್ಷಿಸುತ್ತ, ‘ವೈರಾಗ್ಯ ಮತ್ತು ಸಾಕ್ಷಿತ್ವ’ ವನ್ನು ದಯಮಾಡಿ ಪ್ರತಿಪಾದಿಸದೆ, ಕೇವಲ ಅಳವಡಿಸಿಕೊಂಡು ಆರಾಮವಾಗಿರಲು ಸಾಧ್ಯ. ಈ ಜೀವನಶೈಲಿಯು ಕಷ್ಟಸಾಧ್ಯವಿರಬಹುದು; ಆದರೆ ಅಸಾಧ್ಯವೇನೂ ಅಲ್ಲ ಎಂಬುದು ನನ್ನ ಅಂಬೋಣ. ನೆರೆಮನೆಯ ದುಃಖಕ್ಕೆ ಅಳುವುದು ಬೇಡ; ಸೆರೆಮನೆಯನ್ನೂ ಅರಮನೆಯಾಗಿಸಿಕೊಳ್ವ ಕಲಾವಂತಿಕೆ ಪ್ರ-ಬುದ್ಧರದಾಗಿರುವುದು ನೋಡ!ಬಾರದು ಬಪ್ಪದು; ಬಪ್ಪುದು ತಪ್ಪದು ಎಂದು ಬಸವಣ್ಣನವರು ವಿಧಿವಾದವನ್ನು ಸಂಗ್ರಹಿಸಿ ಕೊಡುತ್ತಾರೆ. ಸಾಕ್ಷೀಭಾವವಿಟ್ಟು ಬದುಕು ನಡೆಸಿದರೆ ಇದರ ಅರಿವಾಗುವುದು ಖಂಡಿತ. ಯುವಕನೊಬ್ಬನು ಗೌತಮಬುದ್ಧರನ್ನು ಕೇಳಿದನಂತೆ: ನಾನೊಬ್ಬ ಪ್ರೇಮಿ, ನೀವೂ ಪ್ರೇಮದ ಬಗ್ಗೆ ಪ್ರವಚನ ಕೊಡುವಿರಿ, ನಮ್ಮಿಬ್ಬರ ನಡುವೆ ಏನು ವ್ಯತ್ಯಾಸ? ಆಗ ಸಂಬುದ್ಧರು ನಸುನಕ್ಕು ಅರಿವನ್ನು ಬಿತ್ತಿದರಂತೆ: ‘ನಿನ್ನ ಪ್ರೀತಿ ಕೈಯಲ್ಲಿರುವ ಗುಲಾಬಿ ನನ್ನ ಪ್ರೀತಿ ಗಿಡದಲ್ಲಿ ಅರಳಿರುವ ಹೂವು!’


             ದಿನಾಂಕ: 24-11-2010, ಕನಕದಾಸರ ಜಯಂತಿ