Monday, 14 March 2011

ಶಿಷ್ಯ ಗೆಳೆಯ ರವಿಯ ಕಾವ್ಯಕೊಂದು ಮುನ್-ನುಡಿ


‘ತಣ್ಣನೆಯ ಬೆಂಕಿ’ ತರುವ ಮಧುರ ದುಃಖಕ್ಕೊಂದು ಸಾಂತ್ವನ

(ಶ್ರೀಯುತ ಎಲ್ ಎಚ್ ರವಿಯವರ ಕವನ ಸಂಕಲನಕ್ಕೆ ಮುನ್ನುಡಿಸುತ್ತಾ. . . .)ಶ್ರೀಯುತ ಎಲ್ ಎಚ್ ರವಿ ವಿಶೇಷ ರೀತಿಯವ; ಎಲ್ಲರಂಥಲ್ಲ ಎಂಬುದನ್ನು ಈತ ಬಿಎ ಓದುವ ದಿನಮಾನಗಳಲ್ಲೇ ಕಂಡುಕೊಂಡವನು ನಾನು. ಅಂದಿನಿಂದ ಇಂದಿನವರೆಗೂ ಆತನ ಸಾಹಿತ್ಯಪ್ರೀತಿ ಮತ್ತು ಬದುಕಿನ ರೀತಿ- ಎರಡೂ ಅಚ್ಚಮಲ್ಲಿಗೆಯಂತೆ ಬಿರಿಯುತ್ತಾ, ದೇವ ಪಾರಿಜಾತದೋಪಾದಿಯಲ್ಲಿ ಸುಗಂಧವ ಪಸರಿಸುತಿಹುದು.ಬಿಎ ಓದುವಾಗ, ಕಾಲೇಜು ಸಂಚಿಕೆಗೆ ಈತ ಕೊಟ್ಟಿದ್ದ ಒಂದೆರಡು ಕವನಗಳಿಂದಲೇ ನಾನೀತನ ‘ಉದಯೋನ್ಮುಖ ಪ್ರತಿಭೆ’ಯನ್ನು ಕಂಡುಕೊಂಡೆ. ಕಡುಬಡತನದ ನಡುವೆ ಓದಿ, ವಿದ್ಯಾವಂತನಾಗಿ ಈಗ, ‘ದೂರದ ಭಾರತ’ದಲ್ಲಿ ‘ನವೋದಯ’ವಾಗಿರುವ ರವಿ ಸಹನಾಮಯಿ. ಹಸನ್ಮುಖಿ, ಆತ್ಮಾಭಿಮಾನಿ ಮತ್ತು ಸ್ನೇಹಜೀವಿ. ಒಂದೇ ಪದದಲ್ಲಿಡುವುದಾದರೆ ಮಾನವೀಯ ಮೌಲ್ಯಗಳ ಸಾಕಾರ.ತನ್ನ ಬದುಕನ್ನು ತಾನೇ ಶುದ್ಧಿ-ಶ್ರದ್ಧೆಗಳಿಂದ ಕಟ್ಟಿಕೊಂಡು ಸಂತೃಪ್ತವಾಗಿರುವ ಈ ಭಾಸ್ಕರ ಒಂದು ಕಾಲದ ತನ್ನ ಮನದ ಬೇಗುದಿಯನ್ನು-ಅದು ಪ್ರೀತಿಯ ಕರೆಯೋ ಆತ್ಮದ ಮೊರೆಯೋ- ಕಾವ್ಯಾಂಗನೆಯ ಕೈ ಹಿಡಿದು ಒಂದಷ್ಟು ದಾರಿ ಸವೆಸಿದ ಹೆಜ್ಜೆ ಗುರುತನ್ನು ‘ತಣ್ಣನೆಯ ಬೆಂಕಿ’ಯಾಗಿಸಿದ್ದಾರೆ. ವಿರಹ ನೂರು ತರಹವಾಗದೆ ಒಂದೇ ಬರೆಹವಾಗಿಸಲು ಶ್ರಮಿಸಿದ್ದಾರೆ.ಇದೊಂದು ಖಂಡ-ತುಂಡ ಕಾವ್ಯವೇ ಸರಿ. ಈ ಸಂಕಲನದ ಎಲ್ಲ ಪದ್ಯಗಳೂ ಪರಸ್ಪರ ಸಹಚಾರಿಯಾಗಿವೆ. ಒಂದು ಇನ್ನೊಂದರ ಮುಂದುವರಿಕೆ ಅಥವಾ ಇನ್ನೊಂದು ಬಗೆಯ ಅಭಿವ್ಯಕ್ತಿ ಅಷ್ಟೇ. ಹಾಗಾಗಿ ಇದು ಖಂಡಕಾವ್ಯ. ಹೃದಯ ಮತ್ತು ಮನಸ್ಸುಗಳು ತಂತಿ ಕಡಿದ ವೀಣೆಯಂತಾಗಿರುವುದರಿಂದ ಇದು ತುಂಡಾದ ಕಾವ್ಯ ಕೂಡ. ಇನ್ನೂ ಒಂದರ್ಥದಲ್ಲಿ ನೇರವೂ ನಿರ್ದಿಷ್ಟವೂ ಪ್ರಾಮಾಣಿಕವೂ ಆದ ‘ಖಂಡತುಂಡ’ ಧ್ವನಿ ಇಲ್ಲಿ ಕತ್ತಿಯಲಗಿನಂತೆ ಮೊಳಗಿದೆ; ಸಾಲುಸಾಲಲ್ಲಿ ಅನುರಣಿಸಿದೆ.

                           ***************************

‘ನೀರು ಎಷ್ಟೇ ಬಿಸಿಯಿದ್ದರೂ ಅದು ಉರಿವ ಬೆಂಕಿಯನ್ನು ಆರಿಸಬಲ್ಲುದು’ ಎಂದು ಒಂದೆಡೆ ಮಾನ್ಯ ಗುರುನಾನಕರು ಹೇಳಿರುವ ಮಾತು ಇಲ್ಲಿ ನೆನಪಾಗುತ್ತಿದೆ. ‘ನೀ ನುಡಿಯದಿರಲೇನು ಬಯಲಾಗಿಹುದೆಲ್ಲ, ಕಣ್ಣಂಚಿನಾ ಕೊನೆಯ ಭಾವದಲ್ಲಿ. . . . .’ ಎಂದು ಕವಿ ಎದೆಬಿರಿದು ಅಳುವಾಗಲೆಲ್ಲ ರವಿಯ ಪದ್ಯಗಳು ಸಾಕ್ಷಾತ್ಕರಿಸುವುವು.ಪ್ರೇಮ ಮತ್ತು ಮೋಹಗಳು ಕೈತಪ್ಪಿದಾಗ, ಹೃದಯದ ಕದ ಶಾಶ್ವತ ಮುಚ್ಚಿಬಿಟ್ಟಾಗ, ಅಂದುಕೊಂಡ ಲೆಕ್ಕಾಚಾರದ ಫಲಿತ ಯದ್ವಾತದ್ವಾ ದಾಖಲಾದಾಗ ಆ ಹಿಂದಣ ಸವಿನೆನಪಿನ ಹೃದಯ ಚಿತ್ತಾರವ ನೆನೆದು ಕವಿ ಅಳುವುದಿಲ್ಲ; ಕವಿತೆಯಲ್ಲಿ ತನ್ನಾಳದ ಅಳಲನ್ನು ಲೇಖಿಸುತ್ತಾನೆ. ರವಿ ಕಂಡುಕೊಂಡ ಈ ಕವಿಮಾರ್ಗ ಅತ್ಯಂತ ಪ್ರಬುದ್ಧತೆಯಿಂದ ಕೂಡಿದೆ; ನಿರಪಾಯಕಾರಿಯಾಗಿದೆ.ಹಸಿರು ತೋರಣ ಬಾಡಿರಬಹುದು; ಆದರೆ ನೆನಪು ಹಸಿಯಾಗಿದೆ. ಪ್ರೀತಿಯುಸಿರು ಬಿರುಗಾಳಿಗೆ ಸಿಕ್ಕ ತರಗೆಲೆಯಾಗಿರಬಹುದು; ವಿಷಾದದ ಉಚ್ಛ್ವಾಸ-ನಿಶ್ವಾಸಗಳು ಇನ್ನೂ ಬಿಸಿಯಾಗಿದೆ. ಈ ಹಸಿ-ಬಿಸಿಯನ್ನು ರವಿ ಕವಿಯಾಗಿ ಕಸಿ ಮಾಡಿದ್ದಾರೆ. ಸರಳತೆಯಲ್ಲೇ ಸಹಜತೆ ತಂದಿದ್ದಾರೆ. ಅಲ್ಲಲ್ಲಿ ಕೆಎಸ್‍ನ ಕವಿತೆಯ ಲಯ, ಛಂದೋವಿನ್ಯಾಸಗಳು ನೆನಪಾಗುತ್ತವೆ. ಆದರೆ ಇದು ಅನುಕರಣೆಯಾಗಿ ಬಂದಿಲ್ಲ; ಪ್ರೇರಣೆಯಾಗಿ ಪುಟಿದೆದ್ದಿದೆ.ಬರೀ ಖಂಡ-ತುಂಡ ಕವಿತೆಯಲ್ಲವಿದು; ಆತ್ಮಚರಿತ sಸಹ. ಒಂದು ಕಾಲದ ನಿರೂಪಕನ ಹೆಜ್ಜೆಗಳು ಹಾದು ಹೋದ ಮತ್ತು ಹಾಗೇ ಮರಳಿ ಬಂದ ಮಣ್ಣಕಣಗಳು ಪಾದಗಳಲ್ಲಿ ಇನ್ನೂ ಜಿನುಗುತ್ತಿರುವಾಗಲೇ ಅದರ ಕಂಪು ಪದ್ಯದ ಪದಗಳಲ್ಲಿ ಹಾಗೆಯೇ ಹರಡಿದೆ.     ನಾನು-ನೀನು ಮತ್ತು ಅವನು: ಈ ಮೂವರು ಬಹುತೇಕ ಪದ್ಯಗಳಲ್ಲಿ ಪ್ರಸ್ತಾವಿತಗೊಳ್ಳುವುದಕ್ಕೆ ಬಲವಾದ ಕಾರಣವಿದೆ; ಹಿನ್-ನೆಲೆಯೂ ಇದೆ. ಆಗ ಆಗಿಹೋದ ಘಟನಾವಳಿಗಳನ್ನು ಈಗ ಸ್ಮರಿಸಿ, ಹೃದಯ ಹಿಂಡಿದ ವೇದನೆಯನ್ನೇ ನಿ-ವೇದಿಸುವಾಗ ನಿರ್ದಿಷ್ಟ ಕಾಲದ ಅಂತರವಿದೆ. ವಿರಹದ ಯಾತನೆಯೇ ಪದ್ಯವಾಗುವಾಗ ಎಲ್ಲೂ ಸಿಡಿಮಿಡಿಯಿಲ್ಲ; ‘ಹೊಡಿಬಡಿ’ಯಿಲ್ಲ. ವ್ಯಾಕುಲವಿದ್ದರೂ ನೈರಾಶ್ಯವಿಲ್ಲ. ಹಪಹಪಿಸಿದರೂ ಚಡಪಡಿಸುವುದಿಲ್ಲ. ಬೈಯ್ಯುವುದಿಲ್ಲ; ಬೈದುಕೊಳ್ಳುವುದಿಲ್ಲ. ತನ್ನ ದಡ್ಡತನವನ್ನು ಅರ್ಥಮಾಡಿಕೊಳ್ಳಲು ಸಹಕರಿಸಿದ ಪ್ರೇಮಿಯ ಬುದ್ಧಿವಂತಿಕೆಯನ್ನು ನಿರೂಪಕ ಗುರುತಿಸುವಲ್ಲಿ ಒಂದು ವಿಧವಾದ ಆರೋಗ್ಯವಿದೆ. ಇದು ನನ್ನನ್ನು ಸೆಳೆದ ಪರಿ.     ಇಂಥ ‘ಸ್ವಯಂಕೃತ’ವನ್ನು ಕಾವ್ಯವಾಗಿಸುವುದು ಎಚ್ಚರದ ಮತ್ತು ಸವಾಲಿನ ವಿಷಯ. ಅಪ್ರಾಮಾಣಿಕÀವಾಗದೆ, ಆತ್ಮವಂಚನೆÀ ಮಾಡಿಕೊಳ್ಳದೆ ಸತ್ಯವನ್ನು ಸ್ವಂತಭಾವಗಳೊಂದಿಗೆ ಬೆರೆಸಿ ಬರೆಯುವುದಿದೆಯಲ್ಲ,  ಅದು ಕಷ್ಟದ ಕಾಯ-ಕ. ಇಂಥಲ್ಲಿ ರವಿ ಗೆದ್ದಿದ್ದಾರೆ. ತನ್ನ ಸುಸಂಸ್ಕೃತ ಮತ್ತು ಸಂಭಾವಿತ ಮನೋಧರ್ಮದ ಕಾರಣದಿಂದಲೇ ನಿರೂಪಿತ ಮನಸ್ಸು ತನ್ನ ಅ-ವಿವೇಕವನ್ನು ಒಪ್ಪಿಕೊಳ್ಳುತ್ತದೆ; ಅದೃಷ್ಟಹೀನತೆಗಾಗಿ ಮರುಗುತ್ತದೆ. ತನ್ನವಳಾಗದವಳನ್ನು ತನ್ನವಳೆಂದುಕೊಂಡ ಭ್ರಮೆಯನ್ನು ಸಾದರಪಡಿಸುತ್ತದೆ.     ತೊರೆ-ದು ಹೋದವಳು ಕವಿತೆಯಲ್ಲಿ ದೊರೆಯಾಗಿದ್ದಾಳೆ. ನೊರೆ-ತೊರೆಯಾಗಿ ಹರಿಯುವ ನಾದವಿಷಾದದ ನದಿಯಾಗಿದ್ದಾಳೆ. ಪ್ರತಿಸಾಲಲ್ಲೂ ಈ ದುರಂತಕಲರವವೇ ನಿನದಿಸುತ್ತದೆ. ಬಹುದೂರ ಹೋದವಳು, ಮತ್ತೆ ಬರದ-ಎಂದೂ ಸಿಗದ ಅವಳ ಅಂತರಂಗದ ಆಳ ಈಗ ಅವನಿಗೆ ಗೊತ್ತಾಗಿದೆ. ಅವನ ಪ್ರೇಮಾನುಭವವು ಸುಡುವಾಸ್ತವವನ್ನು ಅರಿತು ತಣ್ಣನೆಯ ಬೆಂಕಿಯಾಗಿದೆ. ಬೆಂಕಿ ನಂದಿಲ್ಲ; ತಣ್ಣಗಾಗಿದೆಯಷ್ಟೆ. ಮಳೆಯಲ್ಲಿ ಮರ ನೆನೆದು ಒದ್ದೆಯಾಗಬಹುದು; ಆದರೆ ಅದರೊಳಗಿನ ಕಿಚ್ಚು ಸುಪ್ತವಾಗಿಯೇ ಇರುತ್ತದೆ. ಈ ಸಂಕಲನದ ವಿಶೇಷವೆಂದರೆ ಎದೆಯುರಿ ರೋಷವಾಗಿಲ್ಲ, ಬೆಂಕಿ ದ್ವೇಷವಾಗಿಲ್ಲ, ಮೌನರೋದನದ ಕಣ್ಣೀರು ಬಿಸಿಯುಸಿರನ್ನು ತಣ್ಣಗಾಗಿಸಿದೆ. ವರ್ತ-ಮಾನದ ಔಚಿತ್ಯವನ್ನು ಅರ್ಥಮಾಡಿಸಿದೆ. ‘ಕಳೆದು ಹೋದ ಸುಖವನ್ನು ನೆನಪಿಸಿಕೊಳ್ಳುವುದೇ ದುಃಖಗಳಲ್ಲಿ ಅತಿ ದೊಡ್ಡ ದುಃಖ’ ಎಂಬ ಖಲೀಲ್ ಗಿಬ್ರಾನನ ನುಡಿ ಇಲ್ಲಿಯ ಇಂಚಿಂಚಲ್ಲಿ ಧ್ವನಿತಗೊಂಡಿದೆ.                     ***************************************ಇಂಥ ವಿರಹದ ಬರಹಕ್ಕೆ ಪಂಚಭೂತ ಅಲ್ಲಲ್ಲ, ಪಂಚವೂ ಭೂತವಾಗಿ ಕಾಡಿದೆ. ತೊರೆದು ಹೋದವಳನ್ನು ಮನವು ನೆನೆ ನೆನೆ ನೆನೆದು ಪ್ರತಿ-ಧ್ವನಿಯಾಗಿಬಿಟ್ಟಿದೆ. ಮೂಕಹಕ್ಕಿ ಬುಗುರಿಯಂತೆ ಸುತ್ತುತ್ತಲೇ ಹುಡುಕುತ್ತಿದೆ. ಹೋದೆಯಾ ದೂರ. . . ಎಂದು ಅಲವತ್ತುಕೊಂಡು ಮುಹೂರ್ತ ಮೀರಿದ ಹೊತ್ತಿನಲ್ಲಿ ಹನಿ-ಕಂಬನಿಗೊಂಡಿದೆ. ನಂಬುಗೆಯ ಹಾದಿಗಿಲ್ಲ ಸು-ಸೂತ್ರ. ನೆನಪು ನಂದಾದೀಪವಾಗಿಲ್ಲ; ನಂದಿದ ದೀಪವಾಗಿದೆ. ದೂರತೀರಯಾನವು ತನ್ನ ಹೊಣೆ-ಬರಹವನ್ನು ಪ್ರ-ಗಾಥಿಸಿದೆ; ಕವನಿಸುವುದರ ಮುಖೇನ.ಹೀಗೆ ಶಿಷ್ಯನೂ ಆತ್ಮೀಯನೂ ಹಿತೈಷಿಯೂ ಆದ ರವಿಯ ಈ ಕಿರಣಾಂಶು ದಿಟ್ಟವಾಗಿ ದಿಟವ ನುಡಿದಿದೆ. ವಿಶೇಷವಾಗಿ ಕ್ರಿಯಾಪದಗಳ ಅಚ್ಚಗನ್ನಡವು ಅರ್ಥದ ಅನೇಕ ಮಗ್ಗಲುಗಳನ್ನು ಪರಿಚಯಿಸಿದರೆ, ಪದ್ಯದ ಲಯ, ಬಳುಕು ಹಾಗೂ ಛಂದೋಪರಿವೇಷವು ಸಹಜತೆಯಿಂದ ಕೂಡಿದೆ. ಬಲವಂತವಾಗಿ ಕವಿತೆಯಾಗಿಸುವ ಕಸರತ್ತು ಇಲ್ಲಿಲ್ಲ. ತನ್ನನುಭವಕ್ಕೆ ಸಾಧಾರಣೀಕರಣ ತೊಡಿಸುವಲ್ಲಿ ಕವಿಯತ್ನಕ್ಕೆ ಸೋಲಾಗಿಲ್ಲ.ಕೂತರೆ ಬರೆಯುವಲ್ಲಿ, ಭವಿಸಿದ್ದನ್ನು ಬಿತ್ತರಗೊಳಿಸುವಲ್ಲಿ ಈತನಿಗೆ ಅನನ್ಯಶಕ್ತಿಯಿದೆ. ಪದ್ಯದ ಪಾದಗಳ ರಸದೂಟೆ ಒಡೆದು ಅರ್ಥಚಿಲುಮೆ ಚಿಮ್ಮುವ ತಾದಾತ್ಮ್ಯದಲ್ಲಿ ಇದು ವಿದಿತವಾಗುವುದು. ಇಂಥ ಚಿತ್ರಕಸಾಮರ್ಥ್ಯ ಇಲ್ಲಿಗೇ ನಿಲ್ಲದೆ, ರವಿಯ ಕಾವ್ಯ ಹೀಗೇ ಮುಂದುವರಿಯಲಿ; ಜೀವಯಾನದ ಮತ್ತಷ್ಟು ಮಧುರಾನುಭೂತಿ ಅಭಿವ್ಯಕ್ತಗೊಳ್ಳಲಿ, ಕತೆಯಾಗಿ, ಕವಿತೆಯಾಗಿ. . . . ಇದು ನನ್ನ ಮನದುಂಬಿದ ಹಾರೈಕೆ. 08-03-2011