Saturday 31 March 2012

Re-search: It is purely Science based but itself is an ART


ಸಂಶೋಧನೆಯು ಶಾಸ್ತ್ರವೂ ಹೌದು; ಕಲೆಯೂ ಹೌದು 

       ಶಬ್ದಮಣಿದರ್ಪಣವೆಂಬ ಹಳಗನ್ನಡ ವ್ಯಾಕರಣವನ್ನು ಸಂಪಾದಿಸಿ, ಮೌಲಿಕ ಮುನ್ನುಡಿ ಬರೆದ ಡಿ ಎಲ್ ನರಸಿಂಹಾಚಾರ್ ಅವರು ಮೊದಲ ಬಾರಿಗೆ ಶಮದವು ಶಾಸ್ತ್ರವೂ ಹೌದು; ಕಾವ್ಯವೂ ಹೌದು ಎಂದರು! ಈ ಮಾತು ಈಗ ತಕ್ಷಣ ನೆನಪಾಗುತ್ತಿದೆ.

 ಸಂಶೋಧನೆ ಎಂಬುದು ತನಗೆ ತಾನೇ ಸ್ವತಂತ್ರವಲ್ಲ. ಅದರಲ್ಲೂ ಮಾನವಿಕ, ಭಾಷೆ-ಸಾಹಿತ್ಯಗಳಂಥ ಸಾಪೇಕ್ಷವಾದೀ ಜ್ಞಾನಶಿಸ್ತುಗಳಲ್ಲಿ ಈ ಮಾತು ಚೆನ್ನಾಗಿ ಒಪ್ಪುತ್ತದೆ.

    ಶಾಸ್ತ್ರ ಎಂಬುದು ವ್ಯವಸ್ಥಿತ ಚೌಕಟ್ಟು, ಕರಾರುವಾಕ್ಕಾದ ನಿರ್ಣಯ, ಸರ್ವರೀತಿಯಲ್ಲೂ ಒಪ್ಪತಕ್ಕ ತೀರ್ಮಾನ ಮತ್ತು ನಿರ್ದಿಷ್ಟ ತಾತ್ತ್ವಿಕ ನೆಲೆಗಟ್ಟುಗಳನ್ನು ಸೂಚಿಸುವ ಪದ. ಹಾಗೆಯೇ ಕಲೆ ಎಂಬುದು ವ್ಯಕ್ತಿಗತ ಶೈಲಿ, ಹಲವು ಮಗ್ಗಲುಗಳ ನೋಟವೈವಿಧ್ಯ, ಸ್ವೋಪಜ್ಞವಾದ ಕೌಶಲ್ಯಗಳಿಂದ ಕೂಡಿದ ವಿಶಿಷ್ಠ ಪ್ರತಿಪಾದನೆ, ಕಾಲ್ಪನಿಕ ಮತ್ತು ಊಹಾತ್ಮಕ ಸಂದೇಹಗಳ ಸ್ಥಿರೀಕರಣ, ಒಪ್ಪತಕ್ಕ ಉದಾಹರಣೆಗಳಿಂದ ಸಮರ್ಥನೆ ಎಂಬ ವಿಚಾರಗಳನ್ನು ಸಂಕೇತಿಸುವ ಪದ.

   ಸಂಶೋಧನೆಯು ಇವೆರಡೂ ಆಗಿದೆ. ಅದರಲ್ಲೂ ಭಾಷಾಸಾಹಿತ್ಯಗಳನ್ನು ಅರಿಯುವ ನಿಟ್ಟಿನಲ್ಲಿ ಸತ್ಯದ ಹುಡುಕಾಟ ಮಾಡುವ ಸಂದರ್ಭದಲ್ಲಂತೂ ಈ ಮಾತು ಸತ್ಯಸ್ಯ ಸತ್ಯ.

    ಸಂಶೋಧನಾಧ್ಯಯನ ಕೈಗೊಳ್ಳುವ ಮೊದಲಿಗೆ ಆಯ್ದುಕೊಳ್ಳುವ ಕ್ಷೇತ್ರ ಮತ್ತು ವಿಷಯಗಳಿಂದಲೇ ಈ ಸಂಗತಿಯನ್ನು ಸಾಬೀತು ಮಾಡಬಹುದು. ಉದಾಹರಣೆಗೆ, ಕುವೆಂಪು ಕಥಾಸಾಹಿತ್ಯದಲ್ಲಿ ಧಾರ್ಮಿಕ ಸಂಗತಿಗಳು, ಶಬ್ದಮಣಿದರ್ಪಣ-ಒಂದು ಸಾಂಸ್ಕೃತಿಕ ಅಧ್ಯಯನ, ಕನ್ನಡ ರಾಮಾಯಣಗಳ ತೌಲನಿಕ ಅಧ್ಯಯನ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ಮನೋವೈಜ್ಞಾನಿಕ ನೆಲೆಗಳು ಇತ್ಯಾದಿ.

    ಹಾಗೆಯೇ ಮುಂದುವರಿದು, ಅಧ್ಯಾಯಗಳನ್ನು ವಿಂಗಡಿಸಿಕೊಳ್ಳುವಾಗ ಮತ್ತದೇ ಸಂಶೋಧಕರ ವೈಯಕ್ತಿಕ ನೆಲೆ-ನಿಲುವು ಅಂದರೆ ಕಲಾತ್ಮಕ ವಿಷಯಗಳು ಮಹತ್ವ ಪಡೆಯುತ್ತವೆ. ಆದರೆ ಅಧ್ಯಾಯಗಳನ್ನು ವಿಂಗಡಿಸಿಕೊಳ್ಳುವಾಗ ಶಾಸ್ತ್ರೀಯ ಸಂಗತಿ ಅಂದರೆ ಸೈದ್ಧಾಂತಿಕ ನೆಲೆಗಳು ಹಿನ್ನೆಲೆಯಲ್ಲಿದ್ದು, ಪೋಷಿಸುತ್ತವೆ.

    ಒಟ್ಟಾರೆ, ಸಂಶೋಧಕರಲ್ಲಿ ಕಲಾತ್ಮಕ ಮತ್ತು ಶಾಸ್ತ್ರಾತ್ಮಕ-ಎರಡೂ ಆಯಾಮಗಳು ಅಧ್ಯಯನ ಸಂದರ್ಭದಲ್ಲಿದ್ದು, ಅಧ್ಯಯನದ ಫಲಿತಗಳನ್ನು ಕಟ್ಟಿಕೊಡುತ್ತವೆ. ಇವು ಬೇರೆ ಬೇರೆಯೆನಿಸಿದರೂ ಅಂತಿಮವಾಗಿ ಪರಸ್ಪರ ಪೂರಕವಾಗಿದ್ದು, ದುಡಿಯುತ್ತವೆ. ಆದ್ದರಿಂದ ಈ ಪ್ರಶ್ನೆ ಕೇಳಿಕೊಂಡು ವರ್ಗೀಕರಿಸುವ ತನಕ ವ್ಯತ್ಯಾಸ ತಿಳಿಯುವುದಿಲ್ಲ.

     ಇನ್ನು ಸಂಶೋಧನೆಯ ಸಂದರ್ಭದಲ್ಲಿ ನಡೆಸುವ ಕ್ಷೇತ್ರಕಾರ‍್ಯ, ದತ್ತಾಂಶ ಸಂಗ್ರಹಣೆ, ರೂಪಿಸಿಕೊಳ್ಳುವ ಪ್ರಶ್ನಾವಳಿಗಳು, ಹೊಳೆಯುವ ಮೂಲರೂಪ/ಊಹನೆಗಳು, ದತ್ತಾಂಶ ವರ್ಗೀಕರಣ, ಸಂಯೋಜನ, ಮರು ಹೊಂದಾಣಿಕೆ ಮುಂತಾದವುಗಳಲ್ಲಿ ಶಾಸ್ತ್ರೀಯ ಹಿನ್ನೆಲೆಯಿದ್ದರೆ, ಅವನ್ನು ಹೊಂದಿಸುವ, ಹೊಂದಾಣಿಸುವ ನಿಟ್ಟಿನಲ್ಲಿ ಆಯಾ ಸಂಶೋಧಕರ ವ್ಯಕ್ತಿಗತ ನೈಪುಣ್ಯ ಅಂದರೆ ಕಲಾತ್ಮಕ ಭಾಗ ಸಹಾಯ ನೀಡುವುದು.

     ಅನುಬಂಧ ಮತ್ತು ಪರಿಶಿಷ್ಠಗಳಲ್ಲಿ ಹಾಗೂ ಪರಾಮರ್ಶನ ವಿಭಾಗಗಳಲ್ಲಿ ಅಳವಡಿಸಿಕೊಳ್ಳುವ ಕ್ರಮಗಳು ಶಾಸ್ತ್ರೋಕ್ತ ಅಂದರೆ ಸೈದ್ಧಾಂತಿಕ ಎನಿಸಿದರೆ, ಅವನ್ನು ಸಾದರಪಡಿಸುವ ಕ್ರಮದಲ್ಲಿ ವ್ಯಕ್ತಿವಿಶಿಷ್ಠತೆ ಅಂದರೆ ಕಲೆಯ ಅಂಶ ಎದ್ದು ಕಾಣುತ್ತದೆ.

       ಒಂದೇ ವಿಷಯವನ್ನು ಇಬ್ಬರು ಸಂಶೋಧಕರು ಕೈಗೆತ್ತಿಕೊಂಡು ಎರಡು ವಿಭಿನ್ನ ನೆಲೆಗಳಲ್ಲಿ ಅಧ್ಯಯನ ಕೈಗೊಂಡರೆಂದು ಅಂದುಕೊಳ್ಳೋಣ: ಅವರುಗಳು ಅಳವಡಿಸಿಕೊಳ್ಳುವ ತಾತ್ತ್ವಿಕ ಹಿನ್ನೆಲೆ ಒಂದೇ ಆಗಿದ್ದರೂ ಪ್ರತಿಪಾದನೆಯಲ್ಲಿ ಬಳಸುವ ಭಾಷೆ-ಶೈಲಿಗಳು ಬೇರೆಯಾಗಿರಬಹುದು. ಉದಾಹರಣೆಗೆ ಕೆಎಸ್‍ನ ಅವರ ಕವಿತೆಗಳನ್ನು ಮೂವರು ಸಂಶೋಧಕರು ಅಧ್ಯಯನ ಮಾಡಿದರೂ ಅವರ ನವ್ಯಚಹರೆಯ ಪದ್ಯಗಳನ್ನು ವಿಮರ್ಶಿಸಿ, ಅಂತಿಮ ಮಾತು ಹೇಳುವಾಗ ಬೇರೊಂದು ಸತ್ಯವನ್ನು ನುಡಿಯಬಹುದು. ಅವರ ಮನೆಯಿಂದ ಮನೆಗೆ ಪದ್ಯವನ್ನು ಒಬ್ಬರು ಹುಟ್ಟು-ಸಾವುಗಳ ಸಂಕೇತ ಎಂದರೆ ಇನ್ನೊಬ್ಬರು ಮುಂದುವರಿದು, ಕೆಎಸ್‍ನ ಅವರು ನವೋದಯದಿಂದ ನವ್ಯದೆಡೆಗೆ ಹೊರಳುವ ಸಂದರ್ಭದಲ್ಲಿ ಬರೆದದ್ದು ಎಂದು ಕಾಲಾನುಕ್ರಮ ಇಟ್ಟುಕೊಂಡು ಸಾಧಿಸಬಹುದು. ಇನ್ನೊಬ್ಬರು ಕವಿಯನ್ನೇ ಸಂದರ್ಶಿಸಿ, ಅದರ ಹಿನ್ನೆಲೆಯಲ್ಲಿ ಅಡಿಗರ ಮೋಹನ ಮುರಲಿಗೆ ನನ್ನ ಪ್ರತಿಕ್ರಿಯೆ; ಲೌಕಿಕಕ್ಕೆ ಲೋಕೋತ್ತರದ ಸ್ಪರ್ಶ ಎಂದು ನಿರ್ಧರಿಸಬಹುದು. ಇಲ್ಲೆಲ್ಲ ಸಂಶೋಧಕರ ಕಲಾತ್ಮಕ ಸಾಧ್ಯತೆಗಳನ್ನು ಕಾಣಬಹುದಾಗಿದೆ.

     ಸಂಶೋಧನೆ ಎಂಬುದು ಮಾನವಿಕಗಳಲ್ಲಿ ವ್ಯವಸ್ಥಿತ ಕ್ರಮ-ಶ್ರಮಗಳನ್ನು ಅಳವಡಿಸಿಕೊಂಡು ವಿಚಾರ ಮಾಡಲಾದ ವಿಮರ್ಶೆ ಎಂಬ ತೀರ್ಮಾನಕ್ಕೆ ಬರುವುದಾದರೆ ಶಾಸ್ತ್ರವೂ ಹೌದು; ಕಲೆಯೂ ಹೌದು ಎಂದು ಒಪ್ಪಲೇಬೇಕು.  ಇನ್ನೂ ಮುಂದುವರಿದು, ಸಂಶೋಧನೆ ಎಂದರೆ ಗಂಭೀರ ಸತ್ಯಗಳನ್ನು ಕಾಣಿಸಿಕೊಡುವ ಮಾರ್ಗೋಪಾಯ. ಅದು ತನ್ನೊಡಲಲ್ಲಿ ನಿರ್ದಿಷ್ಟ ದಾರಿಗಳಿಂದ (ಶಾಸ್ತ್ರೀಯ/ವೈಜ್ಞಾನಿಕ) ಊಹಾತ್ಮಕ ನಿಲುವು (ತಾರ್ಕಿಕ/ತಾತ್ತ್ವಿಕ)ಗಳ ಮೂಲಕ ಕಂಡುಕೊಳ್ಳುವ ವಿಶಿಷ್ಠ ಸಾಧ್ಯತೆ (ಕಲಾತ್ಮಕ) ಎನ್ನಬಹುದು.


(ಗೆಳೆಯ ಎಚ್ ಎಸ್ ಸತ್ಯನಾರಾಯಣ, ಬೆಂಗಳೂರು- ಇವರು ಕೇಳಿದ ಪ್ರಶ್ನೆಗೆ ಕೊಟ್ಟ ಬರೆಹದುತ್ತರ)

 30-03-2012 ರ ರಾತ್ರಿ 11.50

0 Comments:

Post a Comment

Subscribe to Post Comments [Atom]

<< Home