Saturday, 30 June 2012

ಸೂರ್ಯತೇಜಕೆ ಬೇರೆ ಬೆಳಕಿನ ಹಂಗೇಕೆ- ಶ್ರೀ ಕೆ ವಿ ಸುರೇಶರ ಪುಸ್ತಕಕ್ಕೆ ಮುನ್ನುಡಿಮಾನ್ಯ ಶ್ರೀ ಕೆ ವಿ ಸುರೇಶ್ ಅವರನ್ನು ಕಳೆದ ಇಪ್ಪತ್ತು ವರ್ಷಗಳಿಂದ ಬಲ್ಲೆ. ವಿದ್ಯಾರ್ಥಿಯಾಗಿ, ಸ್ನೇಹಿತರಾಗಿ, ಶೈಕ್ಷಣಿಕ ಸಾಧಕರಾಗಿ, ಒಂದು ಸಂಸ್ಥೆಯ ಪ್ರಾಚಾರ‍್ಯರಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ..... ಎಲ್ಲಕ್ಕಿಂತ ಮುಖ್ಯವಾಗಿ ಅಗಾಧ ಶಿಕ್ಷಣಪ್ರೇಮಿಯಾಗಿ, ಅಂದುಕೊಂಡ-ಕಂಡುಕೊಂಡ ಗುರಿ ಮುಟ್ಟಿದ ಸಾರ್ಥಕಜೀವಿಯಾಗಿ ನನಗೆ ಪರಿಚಯ. ನನಗವರು ನೀಡುವ ಗುರುಗೌರವ ಅಪರೂಪದ್ದು. ಅದು ಅವರ ಸಜ್ಜನಿಕೆಯ ಹೆಗ್ಗುರುತು.

     ಓದುವ ಮತ್ತು ಬರೆಯುವ ಹಾಗೆಯೇ ಓದಿಸುವ ಮತ್ತು ಬರೆಸುವ ಕಾಯಕ ಇವರಿಗೆ ಪಂಚಪ್ರಾಣ. ಜಗತ್ತಿನ ಎಲ್ಲ ಒಳ್ಳೆಯ ಮತ್ತು ಮಹತ್ವದ ಹಾಗೆಯೇ ಮಹನೀಯರ ಬದುಕು-ಬರೆಹಗಳನ್ನು ಆರಾಧಿಸುವ ಇವರ ವ್ಯಕ್ತಿತ್ವ ಬಲ್ಲವರಿಗೆ ವಿದಿತ. ಜೊತೆಗೆ ಸಾಧಕರನ್ನು ಅವರು ಎಲ್ಲಿಯೇ ಇರಲಿ, ಕರೆದು ಕೂರಿಸಿ ಮಾತು ಕೇಳುವ ಅಗಾಧ ಸಹನಾಮೂರ್ತಿ. ಮಾತ್ರವಲ್ಲ, ತನ್ನ ವ್ಯಾಪ್ತಿಯ-ಕೈಗೆಟುವ ಮಂದಿಗೆ ಮತ್ತು ಕಲಿಕಾರ್ಥಿಗಳಿಗೆ ಕೇಳಿಸುವ ವ್ಯವಸ್ಥೆ ಮಾಡುವ ಚಿಂತನ ಕಾರ‍್ಯಕರ್ತ. ಇದನ್ನವರು ಎಷ್ಟೊಂದು ಪ್ರೀತಿ-ಮಮಕಾರಗಳಿಂದ ಮಾಡುತ್ತಾರೆಂದರೆ ನೋಡುವವರು ಇವರ ಸಂಭ್ರಮ-ಸಂತೋಷಗಳನ್ನು ಕಂಡೇ ಸನ್ನಿವೇಶಕ್ಕೆ ಶ್ರದ್ಧೆಯಿಂದ ಸನ್ನದ್ಧರಾಗಿ ಬಿಡುವರು. ಇದನ್ನೆಲ್ಲ ನಾನು ಇಲ್ಲಿ ಹೇಳುತ್ತಿರುವುದಕ್ಕೆ ಬಲವಾದ ಕಾರಣವಿದೆ:


ಸಾಕಷ್ಟು ಕಟ್ಟಿದ ಮತ್ತು ಕಟ್ಟಿಕೊಡುವ ಕೃಷಿ ಮಾಡಿರುವ ಮತ್ತು ಮಾಡುತ್ತಿರುವ ಸುರೇಶ್ ಅವರು ಶಾಲಾ ಸಂಚಿಕೆಗಳನ್ನು ಶ್ರಮಪಟ್ಟು ಸಂಪಾದಿಸಿರುವರಾದರೂ ತಾವೇ ತಮ್ಮ ಸ್ವಂತದ್ದನ್ನು ಪ್ರಕಟಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಖಾತೆ ಓಪನಾಗಿದೆ. ಹಾಗಾಗಿ, ಇದು ಅವರ ಸಂಗ್ರಹವಾದರೂ ಅವರ ಅಭಿರುಚಿ ಮತ್ತು ಅಭಿವ್ಯಕ್ತಿಗಳಿಗೆ ಹಿಡಿದ ಕೈಗನ್ನಡಿ. ಹಲವು ವರ್ಷಗಳಿಂದ ಅವರು ಓದಿದ ಘನತರ ಹೊತ್ತಗೆಗಳಲ್ಲಿದ್ದ ತೂಕದ ಮಾತುಗಳನ್ನು ತನ್ನಂಥ ಸಮಾನ ಮನಸ್ಕರ ಗಮನಕ್ಕೆ ತರುವ ಕೈಂಕರ‍್ಯದ ದ್ಯೋತಕ.


     ಒಬ್ಬ ನಿಜದ ಪುಸ್ತಕಪ್ರೇಮಿಯ ಲಕ್ಷಣವಿದು. ಮುಂದಿನ ಪೀಳಿಗೆಗೆ ಕೊಡುವ ಏಕೈಕ ಆಸ್ತಿ ಏನೆಂಬುದನ್ನು ಇವರು ಅರಿತವರು. ಹಾಗಾಗಿ, ಈ ಸಂಬಂಧದ ಡಿಟಿಪಿ ಮಾಡಿದ ಹಾಳೆಗಳನ್ನು ನನಗವರು ಕೊಟ್ಟು ತಿದ್ದಲು ಹೇಳಿದರು, ಗುರುಗಳೇ, ಪ್ರಕಟಿಸಬಹುದೇ? ಎಂದರು. ನನ್ನ ಸೀರಿಯಸ್ ಅಭಿಪ್ರಾಯ ನಿರೀಕ್ಷಿಸಿದರು. ಖಂಡಿತ ಪ್ರಕಟಿಸಿ, ಆನಂತರ ನೀವೇ ಸ್ವಂತ ಬರೆದದ್ದನ್ನು ಪ್ರಕಟಿಸಲೇಬೇಕು ಎಂಬ ಷರತ್ತಿನ ಅಂಗೀಕಾರ ತಿಳಿಸಿದೆ. ಏಕೆಂದರೆ ಸ್ವಂತದ್ದನ್ನು ಪ್ರಕಟಿಸುವ ವಿಶ್ವಾಸ ಮೂಡುವುದು ಒಮ್ಮೊಮ್ಮೆ ಈ ರೀತಿಯಿಂದ. ಇಂಥ ಸಂಗ್ರಹಗಳು ಅಂಥವಕ್ಕೆ ಚಿಮ್ಮುಹಲಗೆಯಾದೀತೆಂಬ ದೂರದ ಧೈರ‍್ಯ ನನ್ನದು. ಆಲಿಸಿಕೊಂಡು ಉತ್ತೇಜಿತರಾದ ಸುರೇಶ್ ಅವರು ಈ ಬೆಳಕಿನ ಮಾತುಗಳ ಸಂಗ್ರಹಕ್ಕೆ ಮೊದಲ ಮಾತುಗಳನ್ನು ನೀವೇ ಬರೆಯಬೇಕೆಂದು ಒತ್ತಾಯ ಮಾಡಿದ್ದರ ಪ್ರತಿಫಲನ- ಈ ಸಾಲುಗಳ ಕಂಪನ!


     ಹಾಗೆ ನೋಡಿದರೆ, ಈ ಪುಸ್ತಕದ ಶೀರ್ಷಿಕೆಯೇ ಅರ್ಥಪೂರ್ಣ. ಬೆಳಕು ಎಂಬುದು ಬೆಂಕಿಯಿಂದ ಹುಟ್ಟಿದ್ದಾದರೂ ಬೆಂಕಿಯಲ್ಲ; ಇದು ಎಲ್ಲ ರೀತಿಯ ದಾರಿಗಳನ್ನು ತೋರುವ ದಿಕ್ಕು. ಬೆಳಕಿನ ಹಾದಿ ಎಂಬುದೇ ಅರ್ಥ ಮಾಡಿಸುವ ಮತ್ತು ಅರ್ಥೈಸುವ ವಿಧಾನ. ಸುಡುವ ಬೆಂಕಿಯಲ್ಲೂ ಬೆಳಕಿರುತ್ತದೆ. ಆ ಬೆಳಕನ್ನು ಬಳಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳುವುದು ಅವರವರಿಗೆ ಬಿಟ್ಟದ್ದು. ಜೀವ-ಜೀವನಕ್ಕೆ ಸಾರ್ಥಕ್ಯ ತರುವ ಬೆಳಕನ್ನು ಬದಿಗಿರಿಸಿ, ಬರಿ ಬೆಂಕಿಗೇ ಕೈ ಹಾಕಿದರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ಆದರೆ ಬೆಳಕಿನ ಮೂಲ ಬೆಂಕಿಯೇ! ಸೂರ‍್ಯ ಮುಳುಗಿದನೆಂದು ಪರಿತಪಿಸುವವರು ನಕ್ಷತ್ರಗಳನ್ನು ನೋಡುವ ಭಾಗ್ಯದಿಂದ ವಂಚಿತರಾಗುವರಲ್ಲ ಹಾಗೆ. ಇಷ್ಟಕ್ಕೂ ಲೋಕ ನಡೆಯುವುದು ಇಂಥ ಎರಡು ಅತಿಗಳ ತುದಿಯಲ್ಲೇ. ವಿದ್ಯುತ್ತು ಎಂಬುದು ನೀರಿನಿಂದ ಉತ್ಪತ್ತಿಯಾದರೂ ಅದು ಆ ನೀರಿಗೇ ಶತ್ರು! ಮರದೊಳಗಿನ ಕಿಚ್ಚು, ನನೆಯೊಳಗಿನ ಸಸಿ, ಶೂನ್ಯದೊಳಗಡಕವಾಗಿಹ ಸೃಷ್ಟಿ ಎಲ್ಲವೂ ಮೇಲ್ನೋಟಕ್ಕೆ ವಿರುದ್ಧ. ಒಳಗಣ್ಣು ತೆರೆದರೆ ಸತ್ಯ ಸಾಕ್ಷಾತ್ಕಾರ. ಅಂಥ ಒಳಗಣ್ಣನ್ನು ತೆರೆಸುವ ಯಾವುದೇ ಮಾತುಗಳು ನಮ್ಮಗಳ ಪಾಲಿಗೆ ಲೋಕವಿವೇಕ. ಇಂಥ ವಿವೇಕದ ಬೆಳಕಿನೆಡೆಗೆ ಕರೆದೊಯ್ಯುವ ಮಾತುಗಳನ್ನು ಅದರಲ್ಲೂ ತಮಗಿಷ್ಟವಾದ ಸೂಕ್ತಿ ಸುಧಾರ್ಣವದತ್ತ ಸಹೃದಯರನ್ನು ಸೆಳೆಯುವಲ್ಲಿ ಸುರೇಶರ ಈ ಪುಸ್ತಕ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ನಾವೆಲ್ಲ ಓದಿ ಮರೆತ, ಮರೆತಿರಬಹುದಾದ ಚಿಂತನೋಕ್ತಿಗಳನ್ನು ಈ ಮೂಲಕ ಮತ್ತೆ ಮನನ ಮಾಡಿಸುತ್ತಿದ್ದಾರೆ. ಸುರೇಶರಿಗೆ ಧನ್ಯವಾದಗಳು.


     ಹೀಗೆ ಈ ರೀತಿಯ ಸಮಾರಾಧನೆಯಲ್ಲಿ ಸಮಾಧಾನ ಕಾಣಲು ಹೊರಟ ಇವರಿಗೆ ನಾನು ಮತ್ತು ನನ್ನಂಥ ಅವರೆಲ್ಲ ಗೆಳೆಯರು ಅಭಿನಂದನೆ ಸಲ್ಲಿಸುತ್ತ, ಮತ್ತಷ್ಟು ಹೊತ್ತಗೆಗಳನ್ನು ಹೊತ್ತು-ಗೊತ್ತಿಲ್ಲದೆ ತರುತ್ತಿರಲಿ, ತರುವಂತಾಗಲಿ ಎಂದು ಹಾರೈಸುತ್ತೇನೆ.     


ದಿನಾಂಕ: 29-06-2012