Tuesday 22 May 2012

ಉಷಾ ನರಸಿಂಹನ್-ಕವನ ಸಂಕಲನಕ್ಕೆ ಮುನ್ನುಡಿ





ಬೆಳಕಾದ ಬೆಂಕಿಯ ಕುರಿತು

(ಶ್ರೀಮತಿ ಉಷಾ ನರಸಿಂಹನ್ ಅವರ ಎರಡನೆಯ ಕವನ ಸಂಕಲನಕ್ಕೆ ಮುನ್ನುಡಿ)




ಹೇಳದಿರೆ ತಾಳಲಾರಳು ಕವಯಿತ್ರಿಯು....! ಕವಿತೆಯೇ ಹಾಗೇ!! ಬೇರೆಲ್ಲ ಪ್ರಕಾರಗಳಿಗಿಂತ ಕವಿತೆಯಲ್ಲಿ ಇರುವ ಗೂಢತೆಯೇ ಮತ್ತೆ ಮತ್ತೆ ಅದರ ಸಹ-ವಾಸವನನುಭವಿಸುವ ಸೆಳೆತಕ್ಕೆ ಹಚ್ಚುವುದು. ಅಂಗರಾಗದನುಭೂತಿಗಷ್ಟಷ್ಟು ದಿವ್ಯವಿಭೂತಿಯ ಸವರಿ, ಜನ್ಮಾಂತರದನುಬಂಧವ ಅನಂತಗಾನವಾಗಿಸುವ ಶಕ್ತಿ ಇರುವುದು ಅಂಗನೆಗೆ ಮತ್ತು ಕಾವ್ಯಾಂಗನೆಗೆ ಮಾತ್ರ. ಅದಕ್ಕಾಗಿಯೇ ಕವಿಕುವೆಂಪು ಹೇಳಿದ್ದು: ಅನಂತ ತಾನ್ ಅನಂತವಾಗು, ಆಗು-ಆಗು. ಅರಿವಾಗು, ಅರಿವ ಗುರುವಾಗು. ಓ ಅಲ್ಪವೇ, ಅನಂತದಿಂ ಗುಣಿಸಿಕೊ ಅನಂತವಾಗುವೆ ಎಂದು. ಕಾವ್ಯಧರ್ಮದಿಂದ ಜೀವನಧರ್ಮವನ್ನರಿಯುವ ಕಾಯಕಕ್ಕೆ ಇದುವೇ ಕವಿ-ರಾಜಮಾರ್ಗ!



ಉಷಾ ಅವರ ಎರಡನೆಯ ಕವನಸಂಕಲನವಿದು. ಮೊದಲ ಸಂಗ್ರಹ ‘ಪಯಣಕ್ಕೆ ಮುನ್ನ’ ಓದಿ ಬೆರಗಾಗಿದ್ದೆ ಮತ್ತು ಪತ್ರಿಸಿದ್ದೆ. ಜೊತೆಗೆ ಅವರ ಮೊದಲ ಕಥಾಸಂಕಲನಕ್ಕೆ ಮುನ್ನುಡಿಸಿಯೂ ಇದ್ದೆ.  ಆ ತರುವಾಯ ಪ್ರಕಟವಾದ ಅವರ ಎರಡು ಆಕರ್ಷಕ ಕಾದಂಬರಿಗಳನ್ನು ಓದಿ ಅವರ ಪ್ರತಿಭಾ ಸಾಮರ್ಥ್ಯಕ್ಕೆ ತಲೆದೂಗಿದ್ದೆ. ಒಂದಾದ ಮೇಲೊಂದು ಪ್ರಶಸ್ತಿ ಸಮ್ಮಾನಗಳು ದೊರಕಿದ ಹೊತ್ತಲ್ಲಿ ಖುಷಿ ಖುಷಿಯ ಅಭಿನಂದನೆ ತಿಳಿಸಿದ್ದೆ. ಇದೀಗ ಮತ್ತೆ ಅವರ ಒತ್ತಾಯದ ಮೇರೆಗೆ ಈ ಕವಿತಾ ಸಂಕಲನಕ್ಕೆ ಮುನ್ನುಡಿಯ ನೆವದಲ್ಲಿ ಒಂದಷ್ಟನ್ನು ಹಂಚಿಕೊಳ್ಳಲು ಹೊರಟಿದ್ದೇನೆ. ಓದುತ್ತಿರುವವರು ದಯವಿಟ್ಟು ಸಹಿಸಿಕೊಳ್ಳಿ. ಆ ನಂಬಿಕೆ ನನಗಿದೆ. ಏಕೆಂದರೆ, ಸಹನಾವಂತರಷ್ಟೇ ಕಾವ್ಯವನ್ನು ತಿಳಿಯುವುದು ಮತ್ತು ತಿಳಿಸುವುದು. ‘ಸಹನೆ ವಜ್ರದ ಕವಚ’ವಂತೆ.



ಇಲ್ಲಿಯ ಪದ್ಯಗಳೆಲ್ಲ ಒಂದೇ ಜೀವಸಂವಾದದ ಬೇರೆ ಬೇರೆ ಮಗ್ಗುಲಿನ ಲಹರಿಗಳು. ಇದರಲ್ಲಿ ಬರುವ ನಿರೂಪಕಿ ತನ್ನೊಳಗನ್ನು ಕೆದಕುತ್ತಾ ಕವಿತೆಯೇ ಆಗುತ್ತಾಳೆ. ಎಲ್ಲವನ್ನೂ ಒಪ್ಪಿಕೊಂಡೂ ಉಳಿಯುವ ಹಳಹಳಿಕೆಗೆ ಕನ್ನಡಿಯಾಗುತ್ತಾಳೆ. ನೀನೇ ಬರಬಾರದೇ ಎಂದವಳು ಬರುವೆಯಾದರೆ ಬಂದುಬಿಡು ಎಂದು ಗೋಗರೆಯುತ್ತಾಳೆ. ಉತ್ತರೆಯ ಖಾತ್ರಿಮಳೆಗೆ ಬುವಿಯಾಗಲಿಲ್ಲ ಎಂದು ಹಳಹಳಿಸುತ್ತಾಳೆ. ಸುಖ ಕೊಳ್ಳಲು ಸುರಿಯುವ, ಸುರಿದುಕೊಳ್ಳಲು ಹಾತೊರೆಯುವ ಕೃತಕ ಪುಳಕಕ್ಕೆ ಛೀಮಾರಿ ಹಾಕುತ್ತಾಳೆ. ಪಥಗಳೆಲ್ಲ ಪಂಥಗಳಾದ ವಿಪರ‍್ಯಾಸವನ್ನು ವಿಡಂಬಿಸುತ್ತಾಳೆ. ತನ್ನ ತೋಳಲ್ಲೇ ಒರಗಿದ ಕಂದನಲ್ಲಿ ದೈವವ ಕಂಡು ಧನ್ಯಳಾಗುತ್ತಾಳೆ. ಆಧುನಿಕ ಮಕ್ಕಳು ಮುಂಬರುವ ಸಾಫ್ಟವೇರ್ ಬೀಜಗಳಾಗಿ ಈಕೆಗೆ ಕಂಡಾಗ ಕನಿಕರಿಸುತ್ತಾಳೆ. ಗುರು ಒಪ್ಪಿದ ಘಳಿಗೆಯನ್ನು ಸಂಭ್ರಮಿಸುತ್ತಾಳೆ. ಸೋಗಲಾಡಿ ವಿಟನಿಗೆ ಲಗಾಡಿಯಾಗಲೇಬೇಕಾದ ದುರಂತವನ್ನೂ ದಾಖಲಿಸುತ್ತಾಳೆ. ಕಾಮದ ಕೆಸರಿನಲ್ಲಿ ಪ್ರೇಮದ ಕಮಲ ಅರಳುವ ಕ್ರಿಯೆಗೆ ಕರಗುತ್ತಾಳೆ. ಹೀಗೆ ಈ ಸಂಕಲನದ ನಿರೂಪಕಿ ಎಲ್ಲವನ್ನೂ ಗ್ರಹಿಸಿದ-ವಿಶೇಷವಾಗಿ ಗುರುತಿಸಿದ ಸಂವೇದನಾಶೀಲೆ.



      ಮೊದಲ ಸಂಗ್ರಹದ ಪದ್ಯಗಳ ಭಾವಾನುಭವ ಮುಂದಕ್ಕೆ ಹೋಗಿದೆ. ಮಾಗಿದೆ. ತನ್ನ ನಿಜಪಯಣವನ್ನಾರಂಭಿಸಿದೆ. ಅದರ ಪ್ರಭಾವ-ಪರಿಮಳವನ್ನು ನಯವಾಗಿ ಬಿಡಿಸಿಕೊಂಡು ಮತ್ತೊಂದು ಆಯಾಮವನ್ನು ಕಾಣಿಸಿಕೊಡಲು ಹೊರಟಂತಿದೆ. ಅತ್ಯಂತ ಗಮನಾರ್ಹವೆಂದರೆ ಉಷಾ ಅವರು ತಮ್ಮ ಕಾವ್ಯದ ಕೇಂದ್ರ, ಆಶಯ ಮತ್ತು ಅಭಿವ್ಯಕ್ತಿಯ ಲಯವನ್ನು ಕಂಡುಕೊಂಡಿರುವುದು. ಶ್ರದ್ಧೆ-ಕಾಂಕ್ಷೆ-ತಾಜಾಭಿವ್ಯಕ್ತಿ-ಭಾಷೆಯ ಫಲುಕು-ಮುಲುಕುಗಳ ಸರಾಗ, ಆಶಯದ ಅಚ್ಚುಕಟ್ಟು-ಬಂಧ, ಲಯಗಳ ಅನುಪ್ರಾಸ ಇತ್ಯಾದಿಗಳಿಂದ ಕಂಗೊಳಿಸುತ್ತವೆ. ಜೊತೆಗೆ, ಭಾವವು ತೀವ್ರಗೊಂಡಾಗ, ಉಕ್ಕುಕ್ಕಿ ಬಂದಾಗಲಷ್ಟೇ ಪೆನ್ನಿಡುವವರಿವರು. ಪೆನ್ನಿಟ್ಟರೋ....ಧುಮುಧುಮು ಎಂದು ದುಡುಕಿ-ತುಳುಕಿ ಬರುವಳು, ಕಾವ್ಯಜಾಹ್ನವಿ.



     ಕತೆ-ಕವಿತೆ-ಕಾದಂಬರಿ-ಪ್ರಬಂಧ....ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತದೇಕ ನಿಷ್ಠೆಯಿಂದ ಕೃಷಿ ಮಾಡುತ್ತ, ಆ ನಿಷ್ಠೆಗೆ ತಾನಾಗಿ ಒಲಿದು ಬಂದ ಪ್ರಶಸ್ತಿ-ಪುರಸ್ಕಾರಗಳ ಮೆಚ್ಚುಗೆಯನ್ನು ಇನ್ನಷ್ಟು ಬರೆಯಲು ಕೊಟ್ಟ ಪ್ರೋತ್ಸಾಹವೆಂದುಕೊಳ್ಳುತ್ತ ಸಾಹಿತ್ಯ ಸಮಾರಾಧನೆಯಲ್ಲಿ ಮುಳುಗಿರುವ ಇವರ ಸಾಧನೆ ನಿಜಕ್ಕೂ ಯಾರೂ ಹೆಮ್ಮೆ ಪಡುವಂಥದು. ಅದರಲ್ಲೂ ಕವಿತೆಯ ತೀವ್ರತೆ ಹಾಗೂ ಮಾರ್ಮಿ-ಕತೆಗಳ ಜಾಡನ್ನು ಬಲ್ಲ ಇವರದು ಭರವಸೆಯ ವ್ಯವಸಾಯ. ‘ಬದುಕು ಇಟ್ಟಿಗೆಯಂತೆ, ಸುಟ್ಟ ಮೇಲಷ್ಟೇ ಗಟ್ಟಿ’ ಎಂಬ ಮತ್ತು ‘ಕಳಿತಲ್ಲದೆ ತೊಟ್ಟುಗಳಚದು ಮಾವು’ ಎಂಬ ಇವರವೇ ಸಾಲುಗಳು ಇವರ ಬರೆಹವನ್ನು ಅರ್ಥೈಸುತ್ತವೆ.



ಇದರಲ್ಲಿರುವ ನಲವತ್ತು ಪದ್ಯಗಳಲ್ಲಿ ಮೂವತ್ತಕ್ಕೂ ಹೆಚ್ಚು ಹಲವು ಕಾರಣಗಳಿಂದ ಮುಖ್ಯವಾಗುತ್ತವೆ. ಒಂದು ಸಂಗ್ರಹದ ಅರ್ಧದಷ್ಟು ಪದ್ಯಗಳು ಮಹತ್ವವೆನಿಸಿದರೇ ಅದು ಯಶಸ್ಸಿನ ಮಾಪಕ. ಅಂಥದ್ದರಲ್ಲಿ ಇದು ಸ್ವಲ್ಪದ ಸಾಧನೆಯಲ್ಲ. ಈಗ ಬರೆಯುತ್ತಿರುವ ಕವಿ-ಕವಯಿತ್ರಿಯರ ಸಾಲಿನಲ್ಲಿ ಉಷಾ ಅವರ ಬರೆಹ ವಿಭಿನ್ನತೆ-ಸ್ವೋಪಜ್ಞತೆ-ಪ್ರಯೋಗಶೀಲತೆಗಳಿಂದಲೇ ಕಣ್ಣಿಗೊತ್ತಿಕೊಳ್ಳುವಂತಿವೆ. ಖಂಡಿತ ಅರ್ಥವತ್ತಾಗಿವೆ, ಸಮಕಾಲೀನರಿಗೆ ಸವಾಲಾಗಿವೆ, ಸಾಕಷ್ಟು ಕಲಿಯುವುದಿದೆ, ಉಳಿದವರು! ಕವಿತೆಗಳ ಸಾಲುಗಳು ಸಾಲು ಸಾಲು ಸುತ್ತುವರೆದು ಮುದ ನೀಡುತ್ತವೆ. ಆ-ನಂದದ ದೀಪವಾಗಿ ಕಣ್ಣಬೆಳಕಲ್ಲಿ ಮತ್ತೆ ಜೀವ ಪಡೆದು ಅನುರಣಗೊಳ್ಳುತ್ತವೆ. ನಾನಂತೂ ಮತ್ತೆ ಓದಿದೆ. ಅರ್ಥವಾಗಲಿಲ್ಲವೆಂದಲ್ಲ; ಅರ್ಥವಾಗಿದ್ದಕ್ಕೆ! ಓದುವಾಗ ಆಗುವ ತೋಷವನ್ನು ಪುನರ್ ಅನುಭವಿಸಲು.



ಕಾವ್ಯವನ್ನು ನಾನು ಅರ್ಥವಿಸುವ ಬಗೆಯೇ ಬೇರೆ. ಪದ್ಯ ಬರೆವವರಿಗೆ ಕೊಡುವ ಸುಖ-ಸವಲತ್ತನ್ನು ನಾನೂ ಅನುಭವಿಸಿದವನು. ಅತ್ಯಂತ ಖಾಸಗಿಯಾದದ್ದು ಮತ್ತು  ಅಷ್ಟೇ ಜಗಜ್ಜಾಹೀರು ಮಾಡಬಹುದಾದದ್ದು. ಹಸಿಬಿಸಿಯ ಕಸಿಗೊಳಿಸುವ ಕಸರತ್ತಿನ ಕೈಂಕರ‍್ಯ. ಅರೆಬರೆ ಭಾವಗಳ ಹಾಗಾಗಿಯೇ ಗೊತ್ತಾದಷ್ಟು ಗೊತ್ತುಮಾಡಲನುವಾಗುವ ನೀರ ಮೇಲಿನ ಹೆಜ್ಜೆ. ಬರೆದವರ ಅರ್ಥ ಓದಿದವರಲ್ಲಿ ಅನೇಕಾರ್ಥಗಳಾಗುವ ಆ ಮೂಲಕ ಜೀವ-ಜೀವನಶೋಧಗೊಳ್ಳುವ ಮಾಯಾವಿಯಿದು. ಅದರಲ್ಲೂ ಕವಯಿತ್ರಿಯರ ಸಾಲುಗಳಲ್ಲಿ ಜಿನುಗುವ ಭಾವಸ್ರೋತ ನಮ್ಮಂಥವರಿಗೆ ಮೊದಲು ಕುತೂಹಲದ ಗೂಡು; ಆನಂತರ ಸತ್ಯಸಾಕ್ಷಾತ್ಕಾರದ ಸೊಗಡು. ‘ಕವಿತೆ ಹೆಣ್ಣು; ಗದ್ಯ ಗಂಡು’ ಎಂದಿದ್ದೆ ಒಂದು ಕಡೆ. ಏಕೆಂದರೆ ಕವಿತೆಯದು ಗುಟ್ಟುಗಳ, ನಾನಾ ನಮೂನೆಯ ಮಟ್ಟುಗಳ ತನ್ನೊಡಲಲ್ಲಿ ಜತನÀವಾಗಿರಿಸಿ, ನೋವ ನುಂಗಿ ನಲಿವ ಕಾಣಿಸಲು ಸರ್ವಥಾ ಯತ್ನ. ಗದ್ಯವಾದರೋ ವಾಚ್ಯ. ಹೀಗೆ ಆರಂಭಿಸಿ ಹಾಗೆ ಮುಗಿಸುವ, ವಾಕ್ಯಗಳು ಕೇಳುವ ಅದರದೇ ಚೌಕಟ್ಟಿಗೆ ಸೀಮಿತ. ಪದ್ಯವೋ ಒಳಾರ್ಥಕ್ಕೆ ನಿರಂತರ ತುಡಿಯುವ ತುಮುಲ-ನಿರ್ಮಲ.



ನೇರವಂತ ಪ್ರಾಮಾಣಿಕ ಸ್ಥೈರ‍್ಯದಿಂ ಪುಟ್ಟಿದ ನಿರ್ಭಿಡೆಯೇ ಇವರ ಪದ್ಯಗಳ ತೇಜಸ್ಸು. ಅಗಾಧ ಸೈರಣೆ ಇವುಗಳ ಹಿಂದಿನ ಮನಸ್ಸು. ಬದುಕಿನ ಸಾಕಾರವು ಸಕಾರಾತ್ಮಕ ಚಿಂತನೆಯಿಂದ ಹರಳುಗಟ್ಟಿ ಸಾಲಾಗಿ ಸ್ರವಿಸಿವೆ; ಭಾವಕೋಶ ಸ್ಖಲಿಸಿವೆ. ಇವರ ಕವಿಜೀವಕೋಶ ಇಂಥ ಅಪಾರ ತಾಳ್ಮೆಯಿಂದ ನೇಯ್ದ ಜೇಡರಬಲೆಯಿದು. ಆಕರ್ಷಕವಾಗಿದೆ, ಸರಳವಾಗಿದೆ, ತನ್ನತನವಿದೆ. ಬಹಳಷ್ಟು ಪದ್ಯಗಳಲ್ಲಿ ಅಚ್ಚಗನ್ನಡದ ಬೆಚ್ಚಗಿನ ಕ್ರಿಯಾಪದ ಪದರಗಳು ಅರ್ಥ ಸ್ರವಿಸುವ ಭಾವವನ್ನು ಓದಿಕೊಳ್ಳುವುದೇ ಚೆಂದ. ಬಾಯಿ ತೆರೆದು ಓದಲು ಪ್ರೇರಿಸುತ್ತದೆ. ಇದಲ್ಲವೇ ಕವಿತೆಯ ನಾಟ್ಯಗುನುಗುನುಗಾನ! ಆದರೆ ಚದುರಿದ ಚೆಲ್ಲಾಪಿಲ್ಲಿಯಾದ ಭಾವಬಿಂದುವಿಗೆ ಅಕ್ಷರ ತೊಡಿಸುವ ಕಷ್ಟ ಕವಿತೆ ಬರೆದವರಿಗೆ ಮಾತ್ರ ಗೊತ್ತು. ವಿಮರ್ಶಿಸುವವರಿಗಲ್ಲ. ಹಡೆದವಳಿಗಷ್ಟೆ ಗೊತ್ತು ಸಂಕಟದ ಸುಖ. ‘ನೊಂದ ನೋವ ನೋಯದವರೆತ್ತ ಬಲ್ಲರ್?’



1) ಯಾವಾಗ ಅದು ಹೇಳಲಾಯಿತೋ, ಆ ಕ್ಷಣಕ್ಕೆ ಅದು ಸಂಪೂರ್ಣ ಸತ್ಯ; ಈಗ ಏನನ್ನು ಹೇಳಲಾಗುತ್ತಿದೆಯೋ ಅದು ಈ ಕ್ಷಣಕ್ಕೆ ನಿಷ್ಠ... 2) I am responsible for what I spoke; not for what you understood - ಈ ಎರಡೂ ಹೇಳಿಕೆಗಳು ಆಚಾರ‍್ಯ ಓಶೋ ರಜನೀಶರವು. ಉಷಾ ಅವರ ಈವರೆಗಿನ ಒಟ್ಟೂ ಬರೆಹಕ್ಕಿವು ಅನ್ವಯವಾಗುತ್ತವೆ. ಅದರಲ್ಲೂ ಕವಿತೆಗೆ! ಕವಿತೆಯೆಲ್ಲ ಸತ್ಯವೇ. ಅದು ಆ ಕ್ಷಣದ ಸತ್ಯ, ಕವಿಯ ಪ್ರತಿಭಾವೇಶ ಕಂಡರಿಸಿದ್ದು, ಕಂಡುಕೊಂಡಿದ್ದು. ನವನವೋನ್ಮೇಷಶಾಲಿನೀ. ಹಾಗಾಗಿ, ಕವಿಯು ಹೇಳಿದ್ದನ್ನು ಕವಿಯದೆಂದೇ ತಿಳಿಯಬಾರದು. ಅದು ಕವಿತೆಗೆ ಮಾಡುವ ಅಪಚಾರ. ಬೇರೆ ಬೇರೆ ಅವಸ್ಥಾಂತರಗಳಲ್ಲಿ ನಿಂತು ಕಾಣಿಸುವಾಗ ಒಮ್ಮೆ ನಿರೂಪಕಿ, ಮತ್ತೊಮ್ಮೆ ವ್ಯಾಖ್ಯಾನಕಾರಳು. ಅದು ಬಿಟ್ಟು ಅದು ಹಾಗಲ್ಲ, ಇದು ಹೀಗಿರಬೇಕಿತ್ತು ಎಂದು ಕ್ಯಾತೆ ತೆಗೆಯುತ್ತಾರೆ ಸಾಹಿತ್ಯದ ಮೂಲಸ್ವಭಾವವನ್ನು ಅರ್ಥಮಾಡಿಕೊಳ್ಳದ ಕುಕವಿಗಳು. ಏನು ಹೇಳಲಾಗಿದೆಯೋ ಅದರೊಳಗೆ ಹುಡುಕಿಕೊಳ್ಳಬೇಕು ಅರ್ಥವ. ಅದರಾಚೆಗೆ ತಡಕಾಡಿದರೆ ಅದು ಅವ್ಯಾಪ್ತಿದೋಷ ಅಥವಾ ಅತಿವ್ಯಾಪ್ತಿದೋಷ!



ಕವಿಕುವೆಂಪು ಅವರು ಹೇಳುವ ಲೋಕಸತ್ಯ ಮತ್ತು ಭಾವಸತ್ಯಗಳನ್ನೂ ಪ್ರತಿಕೃತಿ ಮತ್ತು ಪ್ರತಿಮಾತತ್ತ್ವಗಳನ್ನೂ ಮೈಗೂಡಿಸಿಕೊಂಡು ಬಂದ ಪದ್ಯಪಾದಗಳಿವು. ನಾವು ಓದುಗರೂ ಇದನ್ನರಿತು ‘ಕವಿಯ ಹೃದಯವೊಂದು ವೀಣೆ; ಲೋಕವದನೆ ಮಿಡಿವುದು’ ಎಂಬುದನ್ನು ತಿಳಿದರಷ್ಟೇ ಕವಿಗೂ ಕವಿತೆಗೂ ಅದರ ಓದಿಗೂ ಬೆಲೆ; ಧನ್ಯತೆಯ ಸೆಲೆ.



‘ತೀರಾ ನವಿರಾಗಿ, ಶಿಷ್ಟವಾಗಿ, ಬೆಣ್ಣೆಯಲ್ಲಿ ಕೂದಲೆಳೆ ತೆಗೆದಂತೆ ಬರೆಯುವ ಪೈಕಿಯಲ್ಲ ನಾನು’ ಎಂದು ಒಂದು ಕಡೆ ಉಷಾ ಅವರು ತಮ್ಮನ್ನು ಗುರುತಿಸಿಕೊಂಡಿರುವರು. ಇದನ್ನರಿತರೆ ಇವರ ಬರೆಹದ ಧರ್ಮ ಮತ್ತು ಮರ್ಮ ಗೊತ್ತಾಗುವುದು. ನಿಜ, ಉಷಾ ಅವರ ಈ ಮಾತು ಇಂದಿನ ಬರೆಹಗಾರ್ತಿಯರು ಯಾವ ದಿಕ್ಕಿನಲ್ಲಿದ್ದಾರೆ ಮತ್ತು ನಾನಾವ ದಿಕ್ಕಿನಲ್ಲಿದ್ದೇನೆ ಎಂಬುದನ್ನು ಒಟ್ಟೊಟ್ಟಿಗೆ ಅರ್ಥ ಮಾಡಿಸುತ್ತಿದೆ.

‘ಒಡಲ ಕಡಲು ಮೊರೆಯುವಾಗ ನೀನೆ ನನ್ನ ಬಂದರು; ಎದೆಯ ಹಾಯಿ ತುಡುಕಿದಾಗ ನೀನೆ ನನ್ನ ಲಂಗರು’ ಈ ಕಾವ್ಯಪ್ರತಿಮೆಯೇ ಸಾಕು, ಇವರ ಕವಿತೆಗಳಂತರಂಗ ಅರಿಯಲು. ಪರಿಚಿತ ವಲಯಗಳನ್ನು ಅಪರಿಚಿತಗೊಳಿಸಿ ತನ್ನ ವಿಶಿಷ್ಟ ಕಾಣ್ಕೆಯಿಂದ ಕಂಡರಿಸುತ್ತಾರೆ, ಅನುಪ್ರಾಸಗಳಿಂದ ಸಿಂಗರಿಸುತ್ತಾರೆ, ಸ್ವಂತಿಕೆಯಿಂದ ಸ್ಪರ್ಶಿಸುತ್ತಾರೆ. ಚಿತ್ರಿಸುವ ನೆಲೆಗಿಂತ ಶೋಧಿಸುವ ನೆಲೆಗೆ ಹೊರಳುತ್ತಾರೆ. ಸ್ಥಾಪಿತ ಅರಿವನ್ನು ಪ್ರಶ್ನಿಸುವ-ಇರುವ ತಿಳಿವನ್ನು ವಿಸ್ತರಿಸುವ ಪ್ರಬುದ್ಧತೆ ತೋರುತ್ತಾರೆ. ಈ ಸಂದರ್ಭದಲ್ಲಿ ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಅವರ ‘ಹಾಡಾಗದೆ ರಾಧೆಯಿಲ್ಲ; ಹಾಡದೆ ಕೃಷ್ಣನಿಲ್ಲ....’ ಎಂಬ ಸಾಲು ನೆನಪಾಗುತ್ತಿದೆ. ಈ ಮಾರ್ಗದಲ್ಲೇ ಉಷಾಮೇಡಂ ಅವರ ಕವಿತಾಯಾನ ಸಾಗಿದೆ. ಹಾಗಾಗಿ ಬಹಳಷ್ಟು ಭಾವಗೀತಗಳಾಗಿ ಭವಿಸಿವೆ; ಅನು-ಭವಿಸಿವೆ.



ಮುನ್ನುಡಿಗಳು ವಿಮರ್ಶೆಯಾಗಬಾರದೆಂಬುದು ನನ್ನ ನಿಲವು. ಸಹೃದಯಕ್ಕೊಂದು ಮೀಟುಗೋಲಾಗಬೇಕು. ಮೆಚ್ಚುಗೆಯಿಂದ ಕೈಗೆತ್ತಿಕೊಂಡ ಮಂದಿಮನಸಿಗೆ ಸೇತುವೆಯಾಗಬೇಕು. ಹಾಗೇ ಖುಷಿಯಿಂದ ಓದುತ್ತಾ ಋಷಿಸದೃಶ ರಸಾನಂದವ ಹೊಂದಬೇಕು. ಇದುವೇ ಕಾವ್ಯದ ಗುರಿ ಮತ್ತು ದಾರಿ. ಹಾಗಾಗಿ, ಇವರ ಪದ್ಯಗಳನ್ನು ನಾನು ಓದಿಕೊಂಡಾಗ ಏನನಿಸಿತೆಂಬುದನ್ನು ದಾಖಲಿಸಲು ಯತ್ನಿಸಿದ್ದೇನೆ. 



ಇಷ್ಟಕ್ಕೂ ಕಾವ್ಯವೇ ಹಾಗೆ. ಒಮ್ಮೆ ಹೀಗೆ, ಮತ್ತೊಮ್ಮೆ....? ನಮ್ಮ ಸಂವೇದನೆಗಳ ಮೂಸೆಯಲ್ಲಿ ಪದ್ಯಗಳ ಬಗೆಯುವಾಗ, ಅಗೆಯುವಾಗ, ಅರ್ಥವನಗಿಯುವಾಗ ನೂತನ ಆಯಾಮ ಪಡೆಯುವುದು. ‘ಇದು ನಿಚ್ಚಂಪೊಸತು, ಅರ್ಣವಂಬೋಲ್ ಅತಿಗಂಭೀರಂ ಕವಿತ್ವಂ’ ಈ ನಿಟ್ಟಿನಲ್ಲಿ ಅತ್ಯಂತ ಆದರಾಭಿಮಾನಗಳಿಂದ ನನ್ನನ್ನು ಕಂಡು, ಒತ್ತಾಸೆಯಿಂದ ಮುನ್ನುಡಿಸಲು ಕೇಳಿಕೊಂಡು ವಿಶ್ವಾಸ ಮೆರೆದಿದ್ದಾರೆ ಉಷಾ ಅವರು. ಇಂಥ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಈ ಎಲ್ಲ ಸಾಧ್ಯ-ಸಾಧ್ಯತೆಗಳು ಪ್ರಸ್ತುತ ಕವಯಿತ್ರಿಗೆ ಇನ್ನಷ್ಟು ಹೇರಳವಾಗಿ ಒದಗಿ ಬರಲೆಂದು, ಅರಿಯಲು ಯತ್ನಿಸುವ ಎಲ್ಲ ಸಹೃದಯೀ ಬಂಧುಗಳೆಲ್ಲರ ಪರವಾಗಿ, ಮನದುಂಬಿ ಹಾರೈಸುತ್ತೇನೆ.


‘ಎತ್ತರಗಳಿರುವುದು ಎಲ್ಲರೂ ಹತ್ತುತ್ತಾರೆಂದಲ್ಲ; ಎಲ್ಲರೂ ಹತ್ತಬೇಕೆಂದು’ – ರಸಋಷಿ ಕುವೆಂಪು,                                        ದಿನಾಂಕ 18-05-2012

0 Comments:

Post a Comment

Subscribe to Post Comments [Atom]

<< Home