Monday 23 July 2012

ಎಡತೊರೆಯ ಹೇಮಂತ


ದೀನ-ದುರ್ಬಲರ ಪಾಲಿಗೀತ ವಸಂತ-ಎಡತೊರೆಯ ಹೇಮಂತ


     ಆ ಭಗವಂತನು ಯಾವ ಸಮಯದಲ್ಲಿ ಯಾರಿಗೆ ಎಂಥ ನೋವು ನೀಡುವನೋ? ಹಾಗೆಂದು ಸಂಕಟಪಡುತ್ತ ಕುಳಿತರೆ ಬದುಕಿನ ಬಂಡಿ ಸಾಗುವುದಾದರೂ ಹೇಗೆ?



     "ಚಂದನವ ಕಡಿದು ಕೊರೆದು ತೇದೊಡೆ ನೊಂದೆನೆಂದು ಕಂಪ ಬಿಟ್ಟಿತ್ತೆ?" ಖಂಡಿತ ಇಲ್ಲ. ಎಷ್ಟು ತೇದರೂ ಅದರ ಪರಿಮಳದಲ್ಲಿ ವ್ಯತ್ಯಾಸವಾಗದು. ಕೆಲವರು ಆ ಚಂದನದಂತೆ! ತಾನೆಷ್ಟು ನೊಂದು ಬೆಂದರೂ ನೋವು ಹಂಚದೆ, ಮತ್ತೊಬ್ಬರ ನೋವಿಗೆ ಕರಗುವ ಮತ್ತು ನೆರವಾಗುವ ಮಂದಿ ಇವರು. ಇಂಥವರಲ್ಲಿ ಅಬಲರು-ದುರ್ಬಲರು-ವಿಕಲಚೇತನರು-ವೃದ್ಧರು-ರೋಗಪೀಡಿತರು. . . . ಹೀಗೆ ದೀನ-ದುರ್ಬಲರ ಸಂಕಷ್ಟಗಳಿಗೆ ಬೆಂಗಾವಲಾಗುವವರು ಎಲ್ಲೋ ಬೆರಳೆಣಿಕೆಯಷ್ಟು. ಅಂಥ ಬೆರಳೆಣಿಕೆಯ ಮಹಾನುಭಾವರಲ್ಲಿ ಕೃಷ್ಣರಾಜನಗರದ ಮಾನ್ಯಶ್ರೀ ಕೆ ಆರ್ ಲಕ್ಕೇಗೌಡರ ಮಗ ಶ್ರೀ ಕೆ ಎಲ್ ಹೇಮಂತ್‍ಕುಮಾರ್ ಅಪರೂಪದ ಸೇವಾಧುರೀಣ.



     ಸ್ವತಃ ಓರ್ವ ವಿಕಲಚೇತನರಾದ ಶ್ರೀ ಹೇಮಂತ್ ಅವರು ಹೀಗೆ ಈ ರೀತಿಯಲ್ಲಿ ತಮ್ಮ ಅಸಹಾಯ-ಕತೆಯನ್ನು ಮೆಟ್ಟಿ ನಿಂತಿದ್ದಾರೆ. ಅಷ್ಟೇ ಅಲ್ಲ, ಜನಸೇವೆಯನ್ನೇ ಜನಾರ್ಧನನ ಸೇವೆಯೆಂದುಕೊಂಡು ಅಹರ್ನಿಶಿ ದುಡಿಯುತ್ತಿರುವ ಪರಿಯನ್ನು ನೀವೆ ಓದಿ ಧನ್ಯರಾಗಿರಿ:

     ಶ್ರೀಯುತ ಲಕ್ಕೇಗೌಡರು ವಿಶ್ರಾಂತ ಕನ್ನಡ ಉಪನ್ಯಾಸಕರಾಗಿ, ತರುವಾಯ ಪುರಸಭಾ ಸದಸ್ಯರಾಗಿ ಈ ರೀತಿಯ ಕೈಂಕರ‍್ಯವನ್ನು ನಡೆಸಿಕೊಂಡು ಬರುತ್ತಿರುವಾಗ್ಗೆ ಇವರ ಮೂವರು ಗಂಡುಮಕ್ಕಳ ವ್ಯಕ್ತಿತ್ವದಲ್ಲೂ ಆ ಸೇವಾಗುಣ ಮೈಗೂಡಿತು. ಇವರ ಇನ್ನಿಬ್ಬರು ಗಂಡುಮಕ್ಕಳ ಪೈಕಿ ಶ್ರೀ ಕೆ ಎಲ್ ರಮೇಶ್ ಅವರು ರಾಜ್ಯಶಾಸ್ತ್ರದ ಅತಿಥಿ ಉಪನ್ಯಾಸಕರಾಗಿದ್ದಾರೆ. ಎಂಎ., ಎಂ.ಫಿಲ್. ಪದವೀಧರ. ಹಾಲಿ ಎಂಎಲ್‍ಎ ಮಾನ್ಯಶ್ರೀ ಸಾ ರಾ ಮಹೇಶ್ ಅವರ ಪತ್ರಿಕಾ ಕಾರ‍್ಯದರ್ಶಿಯಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಇವರ ಮತ್ತೊಬ್ಬ ಸೋದರರಾದ ಶ್ರೀ ಕೆ ಎಲ್ ಜಗದೀಶ್ ಅವರು ಪುರಸಭಾ ಸದಸ್ಯರಾಗಿ, ತಮ್ಮ ತಂದೆಯವರ ಸ್ಥಾನವನ್ನು ಯಶಸ್ವಿಯಾಗಿ ಭರ್ತಿ ಮಾಡಿದ್ದಾರೆ. ಒಟ್ಟಾರೆ ಜನಸೇವೆಗೆ ಸನ್ನದ್ಧವಾದ ಸದಾ ಸಿದ್ಧವಾಗಿರುವ ಕುಟುಂಬ ಇವರದು. ಹೀಗಾಗಿ, ಹೇಮಂತ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ. ಇದರಲ್ಲೊಂದು ವಿಶೇಷವೆಂದರೆ ಎರಡು ಚಕ್ರದ ಸೈಕಲ್ ಇವರ ಆತ್ಮೀಯ ಸಂಗಾತಿ. ಕೆ ಆರ್ ನಗರದಲ್ಲಿರಲಿ, ಮೈಸೂರಿಗೆ ಹೋಗಲಿ ಸೈಕಲ್ ಸವಾರಿಯಲ್ಲೇ ಸರ್ಕಾರಿ ಕಛೇರಿಗಳನ್ನು ಸುತ್ತುತ್ತಾರೆ. 'ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ' ಎಂದು ಡಿವಿಜಿಯವರು ಹೇಳಿದಂತೆ ಅಕ್ಷರಶಃ ನಡೆದು ತೋರುತ್ತಿರುವ ಮಹನೀಯನೀತ. ನೊಂದವರ ಕಣ್ಣೀರನೊರೆಸುವ ಕಾಯಕದಲ್ಲಿ ಈ ಕುಟುಂಬ ಸದಾ ಸನ್ನದ್ಧ. ಅದರಲ್ಲೂ ಹೇಮಂತ ಈ ಸಂಗತಿಯಲ್ಲಿ ಧೀಮಂತ. ಅಸಹಾಯಕರ ಪಾಲಗಿವರು ವಸಂತ.



     ಈ ಕಾಲದಲ್ಲಿ ಇಂಥ ನಿಸ್ವಾರ್ಥ ಕಾಯಕಜೀವಿ ಸಿಗುವುದು ಬಲು ಅಪರೂಪ. ಇನ್ನೊಬ್ಬರ ದುಡ್ಡಿನಲ್ಲಿ ಬದುಕು ನಡೆಸಲು ಈತನ ಮನಸ್ಸು ಒಪ್ಪುವುದಿಲ್ಲ. ಹುಟ್ಟಿನಿಂದ ಪೊಲಿಯೋಪೀಡಿತರಾದ ಇವರು ಅಳುತ್ತ ಮೂಲೆ ಸೇರದೆ, ಅಪರಿಮಿತ ಆತ್ಮವಿಶ್ವಾಸದಿಂದ, ಬಿಎಸ್ಸಿ ಶಿಕ್ಷಣ ಕಲಿಸಿದ ಪಾಠಗಳಿಂದ ಜೀವನಪ್ರೀತಿ ಮೆರೆದು ಸಾವಿರಾರು ವಿಕಲಚೇತನರಿಗೆ ಸರ್ಕಾರದಿಂದ ಬರುವ ಆರ್ಥಿಕ ಸವಲತ್ತುಗಳನ್ನು ಕೊಡಿಸುವ ಇವರು ಸ್ವತಃ ಯಾವ ಮಾಸಾಶನವನ್ನೂ ಪಡೆಯುವುದಿಲ್ಲ ಎಂದರೆ ನೀವು ನಂಬಲೇಬೇಕು!

     ವಿಕಲಚೇತನರಿಗೆ ಸರ್ಕಾರದಿಂದ ಲಭಿಸುವ ಸಹಾಯಧನ, ಬಸ್‍ಪಾಸ್, ರೈಲ್ವೆಪಾಸ್, ಗುರುತಿನಚೀಟಿಪುಸ್ತಕ ಮಾತ್ರವಲ್ಲದೇ ಶಾಲಾಕಾಲೇಜು ಸೇರುವ ಹಿಂದುಳಿದ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಆದಾಯ ದೃಢೀಕರಣ, ಪಡಿತರಚೀಟಿ, ವೃದ್ಧಾಪ್ಯವೇತನ, ಎಲ್ಲ ರೀತಿಯ ಮಾಸಾಶನ, ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಹಾಯ-ಸಹಕಾರ ಇಷ್ಟೆಲ್ಲದರ ಜೊತೆಗೆ ಬಡ ಅಂಗವಿಕಲ/ಬುದ್ಧಿಮಾಂದ್ಯ ಮಕ್ಕಳನ್ನು ಮೈಸೂರಿನ ವಾಕ್ ಶ್ರವಣ ಸಂಸ್ಥೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸುವುದು. . . .ಒಂದು, ಎರಡಲ್ಲ, ಇವರ ಸೇವಾಕೈಂಕರ‍್ಯದ ವಿಧಗಳು.



ಇಷ್ಟೆಲ್ಲ ಸೇವೆ ಮಾಡುವ ಹೇಮಂತರ ಆದಾಯದ ಮೂಲವೇನು? ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿದೆ ಅದಕ್ಕುತ್ತರ: ಈತ ಎಲ್‍ಐಸಿ ಏಜೆಂಟಾಗಿ ಕಾರ‍್ಯ ನಿರ್ವಹಿಸುತ್ತಾರೆ. ತಂದೆಯವರು ತಮ್ಮ ಪಿಂಚಣಿಯಲ್ಲಿ ನೀಡುವ ಒಂದಷ್ಟು ಮೊತ್ತ, ಸೋದರರಿಬ್ಬರು ಆಗಾಗ ಕೊಡುವ ಒಂದಷ್ಟು ಮೊತ್ತ, ಈಚೆಗಷ್ಟೇ ಹೇಮಂತ್ ಅವರನ್ನು ಸರ್ಕಾರವು ಎಂಆರ್‍ಡಬ್ಲ್ಯು ಅಂದರೆ ವಿವಿಧೋದ್ದೇಶ ಪುನರ್ವಸತಿ ತಾಲೂಕು ಸಂಯೋಜಕರಾಗಿದ್ದಾರೆ. ಮಾಹೆಯಾನ ರೂ. 1500 ಗೌರವಧನ ಬರುವಂತಾಗಿದೆ. ಹೀಗೆ ಉದ್ದೇಶ ಮತ್ತು ಆಶಯಗಳು ಒಳ್ಳೆಯದಿರುವಾಗ ಆ ಭಗವಂತನು ಯಾರ‍್ಯಾರದೋ ರೂಪದಲ್ಲಿ ಸಹಾಯಹಸ್ತ ನೀಡುವನು ಎಂದು ತಣ್ಣಗೆ ಉತ್ತರಿಸುತ್ತಾರೆ ಶ್ರೀಯುತ ಹೇಮಂತರು. ಇದು ನಿಜ. ಏಕೆಂದರೆ ಪವಾಡಗಳು ನಮ್ಮ ಕಣ್ಮುಂದೆಯೇ ಸದ್ದಿಲ್ಲದೆ ನಡೆಯುತ್ತಿರುತ್ತವೆ. ಹೇಮಂತರ ಪವಾಡವೇ ಇದು.



     ಕೆ ಆರ್ ನಗರದ ಎಲ್ಲ ವಾರ್ಡ್‍ಗಳಲ್ಲೂ ಸಂಚರಿಸುತ್ತಾರೆ, ಸೈಕಲ್ಲಿನಲ್ಲಿ. ಸಾರ್ವಜನಿಕರ ಕೆಲಸಗಳನ್ನು ಪ್ರೀತಿ ಮತ್ತು ನಿಷ್ಠೆಯಿಂದ ಮಾಡಿಸಿ ಕೊಡುತ್ತಾರೆ. ಫಲಾನುಭವಿಗಳು ಅಕ್ಕರೆಯಿಂದ ಕೊಟ್ಟದ್ದನ್ನು ತುಂಬುಹೃದಯದಿಂದ ನೆನೆಯುತ್ತ ಪಡೆಯುತ್ತಾರೆ. ಬಲವಂತ ಮಾಡುವುದಿಲ್ಲ. ಯಾರನ್ನೂ ಏತಕ್ಕೂ ಬೇಡುವುದಿಲ್ಲ. ಕೊಟ್ಟರೂ ಕೊಡದಿದ್ದರೂ ಇವರ ಸೇವಾಭಾವಕ್ಕೆ ಯಾವ ಚ್ಯುತಿ ಬರುವುದಿಲ್ಲ. ಅವೆಲ್ಲದರ ಜೊತೆಗೆ, ಸಾರ್ವಜನಿಕ ಸೇವೆಗಳಾದ ಬಸ್, ಟ್ರೈನುಗಳಲ್ಲಿ ಪ್ರಯಾಣಿಕರ ಅನುಕೂಲ ಸಂಬಂಧವಾಗಿ, ಆಗಿನ ಸಚಿವರನ್ನು ಭೇಟಿ ಮಾಡಿ ನಾಗರಿಕರ ಪರವಾಗಿ ಮನವಿಪತ್ರ ಕೊಟ್ಟಿರುವ ನಾಗರಿಕ ಜವಾಬ್ದಾರಿ ಇವರದು.



     ಮೈಸೂರಿನಿಂದ ಅರಸೀಕೆರೆಗೆ ಟ್ರೈನು ಬೇಕೆಂದು ಮೊದಲಿಗೆ ಕೇಳಿದವರೇ ಇವರು. ಆಗಿನ ರೈಲ್ವೆ ಸಚಿವರಾದ ಶ್ರೀ ಲಾಲುಪ್ರಸಾದ್ ಯಾದವ್‍ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದವರಿವರು. ಜೊತೆಗೆ ಕಾರ್ಮಿಕ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್‍ರನ್ನೂ ಭೇಟಿ ಮಾಡಿ ಬಂದಿರುತ್ತಾರೆ. ಹಾಗೆಯೇ ನವದೆಹಲಿಗೆ ಹೋದಾಗ ಆಗಿನ ರಾಜ್ಯಸಭಾ ಉಪಸಭಾಪತಿ ಶ್ರೀ ರೆಹಮಾನ್‍ಖಾನ್ ಅವರನ್ನೂ ಭೇಟಿ ಮಾಡಿದ್ದರು.



    ಇದೀಗ, ಹೇಮಂತ್‍ಕುಮಾರ್ ಅವರು ಎಂಆರ್‍ಡಬ್ಲ್ಯು ಆಗಿದ್ದಾರೆ. ಅಂದರೆ ವಿವಿಧೋದ್ದೇಶ ಪುನರ್ವಸತಿ ಕಾರ‍್ಯಕರ್ತರಿಗೆ ಮೇಲ್ವಿಚಾರಕರಾಗಿ ಕಾರ‍್ಯ ನಿರ್ವಹಿಸುವ ತಾಲೂಕು ಸಂಯೋಜಕರಾಗಿದ್ದು, ಕೆ ಆರ್ ನಗರ ತಾಲೂಕಿನ 31 ಗ್ರಾಮಪಂಚಾಯತಿಯ 31 ಮಂದಿ ಕಾರ‍್ಯಕರ್ತರಿಗೆ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇಂಥ ಹೇಮಂತ್ ಮದುವೆಯಾಗಿಲ್ಲ, ತನ್ನ ಸಾರ್ವಜನಿಕ ಸೇವಾ ಬದುಕಿಗೆ ತೊಂದರೆಯಾದೀತೆಂಬ ಕಾಳಜಿಯೇ ಇದಕ್ಕಿರುವ ಕಾರಣ. ತಲೆಯ ಮೇಲೊಂದು ಸೂರಿಲ್ಲ. ಆದರೆ ಇವರ ಪಾಲಿಗೆ ಅಪಾರ ಸ್ನೇಹವರ್ಗವಿದೆ. ಕೆ ಆರ್ ನಗರ ತಾಲೂಕೇ ಇವರ ಕುಟುಂಬವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಹೇಮಂತ್ ಹಲವರಿಗೆ ಬೇಕಾದ ವ್ಯಕ್ತಿಯಾಗಿ, ಸಮಾಜಸೇವಾ ವ್ಯಕ್ತಿತ್ವವನ್ನು ಹೊಂದಿರುವುದು ಇವರಂಥ ಎಲ್ಲರಿಗೆ ಅನುಕರಣೀಯ ಆದರ್ಶವಾಗಿ ಪರಿಣಮಿಸಿದ್ದಾರೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಎಂದು ಕವಿ ಹಾಡುವಲ್ಲಿ ಈತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನೆ ಬೆಳಗುವ ನಂದಾದೀಪವಾಗಿದ್ದಾರೆ. ಇನ್ನೇನು ಬೇಕು, ಜೀವ-ಜೀವನ ಸಾರ್ಥಕಗೊಳ್ಳಲು!   20-06-2012 

0 Comments:

Post a Comment

Subscribe to Post Comments [Atom]

<< Home